ಫಿಫಾ ವಿಶ್ವಕಪ್‌ 2022: ರೋಚಕ ಪಂದ್ಯದಲ್ಲಿ ಮೆಸ್ಸಿ ಪಡೆಗೆ ಗೆಲುವು, ಫ್ರಾನ್ಸ್‌ ಆಟಗಾರರಿಗೆ ಸಮಾಧಾನ ಹೇಳಿದ ಅಧ್ಯಕ್ಷ ಮ್ಯಾಕ್ರಾನ್

masthmagaa.com:

ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ರಣರೋಚಕ ಫೈನಲ್‌ ಪಂದ್ಯದಲ್ಲಿ ಕೊನೆಗೂ ಫುಟ್‌ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ನೇತೃತ್ವದ ಅರ್ಜಂಟೀನಾ ತಂಡ ಗೆದ್ದು ಬೀಗಿದೆ. ತಮ್ಮ ವೃತ್ತಿ ಜೀವನದ ಅಂಚಿನಲ್ಲಿರುವ ಮೆಸ್ಸಿ ಕೊನೆಗೂ ಚಿನ್ನದ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಕತಾರ್‌ನ ಲುಸೈಲ್‌ ಸ್ಟೇಡಿಯಂನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಅರ್ಜಂಟೀನಾ ಹಾಗೂ ಫ್ರಾನ್ಸ್‌ ತಂಡಗಳು ಪಂದ್ಯದ 90 ನಿಮಿಷದ ಅಂತ್ಯಕ್ಕೆ 2-2 ಗೋಲುಗಳಲ್ಲಿ ಸಮಬಲ ಸಾಧಿಸಿದ್ವು. ನಂತರ ಹೆಚ್ಚುವರಿ 30 ನಿಮಿಷಗಳ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸೋ ಮೂಲಕ ಮತ್ತೆ 3-3 ಗೋಲುಗಳ ಸಮಬಲ ಸಾಧಿಸಿ ಮ್ಯಾಚ್ ಡ್ರಾ ಆಗಿತ್ತು. ಡ್ರಾನಲ್ಲಿ ಅಂತ್ಯಗೊಂಡ ಕಾರಣ ಪೆನಾಲ್ಟಿ ಶೂಟೌಟ್‌ ಮೂಲಕ ವಿಜೇತರನ್ನ ನಿರ್ಣಯಿಸಬೇಕಾಯ್ತು. ಅರ್ಜಂಟೀನಾ ಸತತ 4 ಅವಕಾಶಗಳಲ್ಲಿ ಗೋಲು ಗಳಿಸಿ 4-2 ಅಂತರದಲ್ಲಿ ಫ್ರಾನ್ಸ್‌ ಎದುರು ವಿಶ್ವಕಪ್‌ ಪಟ್ಟವನ್ನ ಮುಡಿಗೇರಿಸಿಕೊಂಡಿತು. ಇದ್ರೊಂದಿಗೆ ಅರ್ಜಂಟೀನಾ 344 ಕೋಟಿ ಪ್ರೈಜ್‌ ಮನಿಯನ್ನ ಬಾಚಿಕೊಂಡಿದೆ. ಇನ್ನು ತಮ್ಮ ಹ್ಯಾಟ್ರಿಕ್‌ ಗೋಲ್‌ಗಳ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದ ಮಿಂಚಿನ ಫ್ರೆಂಚ್‌ ಆಟಗಾರ ಕಿಲಿಯನ್‌ ಎಂಬಾಪ್ಪೆ, ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲ್‌ ಗಳಿಸಿದ್ದಕ್ಕಾಗಿ ʻಗೋಲ್ಡನ್‌ ಬೂಟ್‌ʼ ಪಡೆದಿದ್ದಾರೆ. ಅತ್ತ ಮೆಸ್ಸಿ ʻಗೋಲ್ಡನ್‌ ಬಾಲ್‌ʼ ಪಡೆದ್ರೆ ಅರ್ಜಂಟೀನಾ ಗೋಲ್‌ಕೀಪರ್‌ ಎಮಿಲಿಯಾನೋ ಮಾರ್ಟಿನೆಜ್‌ ʻಗೋಲ್ಡನ್‌ ಗ್ಲೋವ್‌ʼ ಪಡೆದಿದ್ದಾರೆ.

ಕತಾರ್‌ ವಿಶ್ಚಕಪ್‌ನ ನಂತರ ನಿವೃತ್ತಿ ತೆಗೆದುಕೊಳ್ಳೋದಾಗಿ ಹೇಳಿದ್ದ ಮೆಸ್ಸಿ ಇದೀಗ ತಮ್ಮ ನಿರ್ಧಾರವನ್ನ ಬದಲಿಸಿದ್ದಾರೆ. ನಾನು ಅರ್ಜಂಟೀನಾ ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗಲ್ಲ. ನಾನು ಚಾಂಪಿಯನ್‌ ಆಗಿ ಆಡೋದನ್ನ ಮುಂದುವರೆಸೋಕೆ ಬಯಸ್ತೀನಿ ಅಂತ ಗೆಲುವಿನ ಬಳಿಕ ಹೇಳಿದ್ದಾರೆ.

ಫೈನಲ್‌ ಸೋತ ಫ್ರಾನ್ಸ್‌ ಆಟಗಾರರನ್ನ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ಸಮಾಧಾನ ಪಡಿಸಿದ್ದಾರೆ. ಪಂದ್ಯ ನಡೆದ ಲುಸೈಲ್‌ ಸ್ಟೇಡಿಯಂನ ಡ್ರೆಸ್ಸಿಂಗ್‌ ರೂಂಗೆ ತೆರಳಿ ಬೇಸರಗೊಂಡಿದ್ದ ತಮ್ಮ ಆಟಗಾರರಿಗೆ ಸಮಾಧಾನ ಹೇಳಿದ್ದಾರೆ. ಫ್ರೆಂಚ್‌ ತಂಡಕ್ಕೆ ಅಭಿನಂದನೆಗಳು, ನೀವು ರಾಷ್ಟ್ರವನ್ನ ಹಾಗೂ ಬೆಂಬಲಿಗರನ್ನ ನಿಮ್ಮ ಆಟದ ಮೂಲಕ ರೋಮಾಂಚನಗೊಳಿಸಿದ್ದೀರಿ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಪ್ರಧಾನಿ ಮೋದಿ ಕೂಡ ಮೆಸ್ಸಿ ಪಡೆಗೆ ಕಂಗ್ರ್ಯಾಟ್ಸ್‌ ಹೇಳಿದ್ದಾರೆ. ಈ ಮ್ಯಾಚ್‌ ಅತ್ಯಂತ ಥ್ರಿಲಿಂಗ್‌ ಮ್ಯಾಚ್‌ಗಳಲ್ಲಿ ಒಂದಾಗಿದೆ. ಭಾರತೀಯ ಫುಟ್‌ಬಾಲ್‌ ಫ್ಯಾನ್‌ಗಳು ಅರ್ಜಂಟೀನಾ ಹಾಗೂ ಮೆಸ್ಸಿಯ ಅದ್ಭುತ ಗೆಲುವನ್ನ ಸಂಭ್ರಮಿಸಿದ್ದಾರೆ ಅಂತ ಮೋದಿ ಟ್ವೀಟ್‌ ಮಾಡಿದ್ದಾರೆ.

ನಿನ್ನೆ ನಡೆದ ಅರ್ಜಂಟೀನಾ-ಫ್ರಾನ್ಸ್‌ ತಂಡದ ಫೈನಲ್‌ ಮ್ಯಾಚ್‌ ವೇಳೆ ಗೂಗಲ್ ಕೂಡ ಹೊಸ ದಾಖಲೆಯನ್ನ ಬರೆದಿದೆ. ಕಳೆದ 25 ವರ್ಷಗಳಲ್ಲೇ ಮೊದಲ ಬಾರಿಗೆ ಗರಿಷ್ಠ ಸರ್ಚ್‌ ಟ್ರಾಫಿಕ್‌ನ್ನ ದಾಖಲಿಸಿದೆ ಅಂತ ಗೂಗಲ್‌ ಸಿಇಒ ಸುಂದರ್‌ ಪಿಚೈ ಹೇಳಿದ್ದಾರೆ. ಈ ಸರ್ಚ್‌ ಟ್ರಾಫಿಕ್‌ ಅಂದ್ರೆ ಒಂದೇ ಟೈಮಲ್ಲಿ ಒಂದೇ ವಿಷಯದ ಬಗ್ಗೆ ಕೋಟ್ಯಾಂತರ ಜನ ಸರ್ಚ್‌ ಮಾಡೋದು. ಸೋ ಮೆಸ್ಸಿ, ಎಂಬಾಪ್ಪೆ ಹಾಗೂ ಫಿಫಾ ಫೈನಲ್‌ ಮ್ಯಾಚ್‌ ವಿಷಯಗಳನ್ನ ಅತಿಹೆಚ್ಚು ಸರ್ಚ್‌ ಮಾಡಲಾಗಿದೆ ಅಂತ ಗೂಗಲ್‌ ಮಾಹಿತಿ ನೀಡಿದೆ. ಇನ್ನು ಫೈನಲ್‌ ಬಳಿಕ ಉಭಯ ದೇಶಗಳ ಫ್ಯಾನ್ಸ್‌ ಕೇರಳದಲ್ಲಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪೊಲೀಸರ ಮೇಲೂ ಹಲ್ಲೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply