ಮತ್ತೆ ರಣರಂಗವಾದ ಮಣಿಪುರ! ಪರಿಸ್ಥಿತಿ ಹತೋಟಿಗೆ AFSPA ಜಾರಿ!

masthmagaa.com:

ಈಶಾನ್ಯ ರಾಜ್ಯ ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆಯನ್ನ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇಂಫಾಲ್ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಲಾಗಿದ್ದು, ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸದ್ಯ ಸಿಆರ್‌ಪಿಎಫ್ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಅಂತ ತಿಳಿಸಿದ್ದಾರೆ. ಇನ್ನು ಮಂಗಳವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 65 ಮಂದಿ ಗಾಯಗೊಂಡಿದ್ದು, ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗುತ್ತಿದ್ದಂತೆ ಇಂಫಾಲ್ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಮತ್ತೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇದೇ ವೇಳೆ ತೌಬಲ್ ಜಿಲ್ಲೆಯ ಖೋಂಗ್ಜಾಮ್‌ನಲ್ಲಿರುವ ಬಿಜೆಪಿ ಕಚೇರಿಗೂ ಬೆಂಕಿ ಹಚ್ಚಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇತ್ತ ಮಣಿಪುರದಲ್ಲಿ ಶಾಂತಿ ಸ್ಥಾಪನೆ ಮಾಡುವ ದೃಷ್ಟಿಯಲ್ಲಿ ಸೇನೆಗೆ ಪರಮಾಧಿಕಾರ ನೀಡುವ AFSPA ಕಾಯ್ದೆಯನ್ನ ಇನ್ನೂ 6 ತಿಂಗಳ ಕಾಲ ವಿಸ್ತರಣೆ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ. ಅಕ್ಟೋಬರ್‌ 1ರಿಂದ ಜಾರಿಯಾಗುವಂತೆ 6 ತಿಂಗಳು ಕಾಯ್ದೆ ವಿಸ್ತರಣೆ ಮಾಡಿ ಮಣಿಪುರ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಇನ್ನೊಂದ್‌ ಕಡೆ ಮಣಿಪುರದ ಗಲಭೆಯನ್ನ ನಿಯಂತ್ರಿಸುವಲ್ಲಿ ಸರ್ಕಾರದ ವಿಫಲತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿನ ಖ್ಯಾತ ನಟರೊಬ್ರು ಬಿಜೆಪಿ ತೊರೆದಿದ್ದಾರೆ. ರಾಜ್ ಕುಮಾರ್ ಕೈಕು ಎಂದೇ ಖ್ಯಾತರಾಗಿರುವ ಸೋಮೇಂದ್ರ ಅವರು ಬಿಜೆಪಿ ತೊರೆದಿದ್ದಾರೆ. ಇವರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಎರಡು ಕುಕಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

-masthmagaa.com

Contact Us for Advertisement

Leave a Reply