‘ಕೋವಿಶೀಲ್ಡ್​’ ಹೆಸರು: ‘ಸೀರಂ’ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ‘ಕ್ಯುಟಿಸ್’

masthmagaa.com:

ಭಾರತದಲ್ಲಿ ಅನುಮೋದನೆ ಪಡೆದಿರುವ ‘ಕೋವಿಶೀಲ್ಡ್​’ ಮತ್ತು ‘ಕೋವಾಕ್ಸಿನ್​’ ಕೊರೋನಾ ಲಸಿಕೆಯ ವಿತರಣೆ ಶೀಘ್ರದಲ್ಲೇ ಆರಂಭವಾಗಲಿದೆ. ಇದರ ನಡುವೆಯೇ ‘ಕೋವಿಶೀಲ್ಡ್​’ ಹೆಸರಿಗೆ ಸಂಬಂಧಿಸಿದಂತೆ ವಿವಾದವೊಂದು ಭುಗಿಲೆದ್ದಿದೆ. ಅಂದ್ಹಾಗೆ ಆಕ್ಸ್​ಫರ್ಡ್ ಯುನಿವರ್ಸಿಟಿ​-ಆಸ್ಟ್ರಾಝೆನೆಕಾ ಸೇರಿ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಗೆ ಭಾರತದಲ್ಲಿ ‘ಕೋವಿಶೀಲ್ಡ್​’ ಅಂತ ಹೆಸರಿಡಲಾಗಿದೆ. ಇದರ ಉತ್ಪಾದನೆ ಮತ್ತು ಮಾನವ ಪ್ರಯೋಗವನ್ನ ಪುಣೆಯ ಸೀರಂ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯಾ ನೋಡಿಕೊಳ್ಳುತ್ತೆ. ಆದ್ರೀಗ ಕೊರೋನಾ ಲಸಿಕೆಗೆ ‘ಕೋವಿಶೀಲ್ಡ್’ ಅಂತ ಹೆಸರಿಟ್ಟಿರುವ ಸೀರಂ ಇನ್​ಸ್ಟಿಟ್ಯೂಟ್ ವಿರುದ್ಧ ಮಹಾರಾಷ್ಟ್ರದ ನಾಂದೇಡ್ ಮೂಲದ ಕ್ಯುಟಿಸ್ ಬಯೋಟೆಕ್ (Cutis Biotech) ಕಂಪನಿ ಕೋರ್ಟ್​ ಮೆಟ್ಟಿಲೇರಿದೆ. ‘ಕೋವಿಶೀಲ್ಡ್ ’ ಹೆಸರಿನ ಹಲವು ಉತ್ಪನ್ನಗಳನ್ನ ನಾವು ಈಗಾಗಲೇ ಉತ್ಪಾದಿಸಿ ಮಾರಾಟ ಮಾಡಿದ್ದೇವೆ. 2020ರ ಏಪ್ರಿಲ್​ನಲ್ಲೇ ಅದರ ಟ್ರೇಡ್​ಮಾರ್ಕ್ ರಿಜಿಸ್ಟ್ರೇಷನ್​ಗೆ ಅಪ್ಲಿಕೇಶನ್ ಕೂಡ ಹಾಕಿದ್ದೇವೆ ಅಂತ ಕ್ಯುಟಿಸ್ ಬಯೋಟೆಕ್ ಹೇಳಿದೆ. ಇದಕ್ಕೆ ಸೀರಂ ಇನ್​ಸ್ಟಿಟ್ಯೂಟ್ ಏನ್ ಹೇಳುತ್ತೆ ನೋಡಬೇಕು. ಅಲ್ಲದೆ ‘ಕೋವಿಶೀಲ್ಡ್​’ ಹೆಸರಿಗೆ ಸಂಬಂಧಿಸಿದಂತೆ ನಡೀತಿರುವ ಈ ಕಾನೂನು ಹೋರಾಟ ಲಸಿಕೆ ವಿತರಣೆ ಮೇಲೆ ಪರಿಣಾಮ ಬೀರುತ್ತಾ ಅನ್ನೋದು ಕೂಡ ಇನ್ನಷ್ಟೇ ಗೊತ್ತಾಗಬೇಕಿದೆ.

-masthmagaa.com

Contact Us for Advertisement

Leave a Reply