masthmagaa.com:

ಕೊರೋನಾ ನಡುವೆಯೇ ಕೆಲವೊಂದು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಈಗ ನಮ್ಮ ಪಕ್ಕದ ಮಹಾರಾಷ್ಟ್ರ ಮತ್ತು ದೆಹಲಿಗೂ ಹರಡಿದೆ. ಮಹಾರಾಷ್ಟ್ರದ ಮುಂಬೈ, ಥಾಣೆ, ಪರ್ಭನಿ, ಬೀಡ್​ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಹಕ್ಕಿಜ್ವರ ಬಂದಿರೋದು ಕನ್ಫರ್ಮ್ ಆಗಿದೆ. ಮುಂಬೈನಿಂದ 500 ಕಿಲೋ ಮೀಟರ್ ದೂರದಲ್ಲಿರುವ ಪರ್ಭನಿಯಲ್ಲಿ 2 ದಿನದಲ್ಲಿ 800ಕ್ಕೂ ಹೆಚ್ಚು ಕೋಳಿಗಳು ಸತ್ತಿವೆ. ಅವುಗಳ ಸ್ಯಾಂಪಲ್​ಗಳನ್ನ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಅದರ ರಿಪೋರ್ಟ್ ಬಂದಿದ್ದು ಕೋಳಿಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಅನ್ನೋದು ಗೊತ್ತಾಗಿದೆ. ಇದರ ಪರಿಣಾಮ ಅಕ್ಕಪಕ್ಕದ ಪೌಲ್ಟ್ರಿಗಳ ಸುಮಾರು 8,000 ಕೋಳಿಗಳನ್ನ ಕೊಲ್ಲಲು ಆದೇಶ ನೀಡಲಾಗಿದೆ. ನಮ್ಮ ರಾಜ್ಯದ ಜೊತೆ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರೋದು ಗಡಿ ಭಾಗದ ಜನರ ಆತಂಕ ಹೆಚ್ಚಿಸಿದೆ. ಮೇಲೆ ಮಹಾರಾಷ್ಟ್ರ, ಕೆಳಗೆ ಕೇರಳ.. ಹೀಗೆ ಎರಡೂ ರಾಜ್ಯಕ್ಕೆ ಹಕ್ಕಿಜ್ವರ ಹರಡಿರೋದು ಕರ್ನಾಟಕದ ಟೆನ್ಷನ್ ಹೆಚ್ಚಿಸಿದೆ.

ದೆಹಲಿಯಲ್ಲಿ ನಿನ್ನೆ 200ಕ್ಕೂ ಹೆಚ್ಚು ಹಕ್ಕಿಗಳು ಸತ್ತು ಬಿದ್ದಿದ್ದವು. ಇದೀಗ ಅವುಗಳಿಗೆ ಹಕ್ಕಿಜ್ವರ ಬಂದಿತ್ತು ಅನ್ನೋದು ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ. ಮಹಾರಾಷ್ಟ್ರ ಮತ್ತು ದೆಹಲಿ ಸೇರ್ಪಡೆಯೊಂದಿಗೆ ದೇಶದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ರಾಜ್ಯಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ದೆಹಲಿ. ಆದ್ರೆ, ದೇಶದಲ್ಲಿ 2006ರಿಂದ ಹಕ್ಕಿಜ್ವರ ಇದೆ. ಇದರ ಬಗ್ಗೆ ವದಂತಿಗಳನ್ನ ಹಬ್ಬಿಸಬೇಡಿ. ಚೆನ್ನಾಗಿ ಬೇಯಿಸಿದ ಮಾಂಸವನ್ನ ತಿನ್ನೋದ್ರಿಂದ ಮನುಷ್ಯನಿಗೆ ಏನೂ ಆಗಲ್ಲ ಅಂತ ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply