ರಾಜ್ಯದ ವಿವಿಧೆಡೆ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ!

masthmagaa.com:

ರಾಜ್ಯದಲ್ಲಿ ಹಲವು ಕಡೆ ವರುಣನ ಆರ್ಭಟ ಜೋರಾಗಿದ್ದು, ಭಾರಿ ಮಳೆಯಾಗುತ್ತಿದೆ. ಕಳೆದ ರಾತ್ರಿ ಕರಾವಳಿಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಮಾಹಿತಿ ನೀಡಿದೆ. ಉಡುಪಿ ಜಿಲ್ಲೆಯ ನೀರೆಯಲ್ಲಿ ನಿನ್ನೆ 351 ಮಿಲಿಮೀಟರ್‌ ಮಳೆಯಾಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನಲ್ಲಿ ಕೂಡ ಧಾರಾಕಾರ ಮಳೆ ಸುರಿದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಇಂದಿನಿಂದ ಜುಲೈ 27ರವರೆಗೂ ಭಾರೀ ಮಳೆ ಬೀಳುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಭಾರತದಲ್ಲೂ ಭಾರಿ ಮಳೆ ಸುರಿತ್ತಿದ್ದು, ಮಹಾರಾಷ್ಟ್ರ, ಗುಜರಾತ್‌ನ ಹಲವು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆ ಅಬ್ಬರದಿಂದ ರಸ್ತೆಗಳು ನದಿಗಳಂತಾಗಿದ್ದು, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗ್ತಿರುವ ದೃಶ್ಯಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಇನ್ನೊಂದ್‌ ಕಡೆ ದೆಹಲಿಯಲ್ಲಿ ಮತ್ತೆ ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

-masthmagaa.com

Contact Us for Advertisement

Leave a Reply