ಅನುಷ್ಕಾ ಶರ್ಮಾ ಕೆರಿಯರ್‌ ಮುಗಿಸಲು ಪ್ರಯತ್ನಿಸಿದ್ದ ಕರಣ್‌ ಜೋಹರ್‌!

masthmagaa.com:

ಕರಣ್‌ ಜೋಹರ್‌ ಬಗ್ಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸುದ್ದಿಗಳು ಬರ್ತಾ ಇರತ್ತೆ. ಅದರಲ್ಲೂ ಜಾಸ್ತಿ ಸುದ್ದಿ ಆಗೋದು ಬೇರೆಯವರ ಸಿನಿ ಕೆರಿಯರ್‌ಗೆ ಕರಣ್‌ ತಲೆ ಹಾಕ್ತಾರೆ ಅನ್ನೋ ವಿಷಯಕ್ಕೆ. ಸದ್ಯಕ್ಕೆ ನಟಿ ಅನುಷ್ಕಾ ಶರ್ಮಾ ಕೆರಿಯರ್‌ನಲ್ಲೂ ಕೂಡ ಕರಣ್‌ ಅಡ್ಡಗಾಲು ಹಾಕಿದ್ರು ಅನ್ನೋ ಕಾರಣಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಇದನ್ನ ಸ್ವತಃ ಕರಣ್‌ ಜೋಹರ್‌ ಅವರೇ ಹೇಳಿಕೊಂಡ ವಿಡಿಯೋ ಈಗ ವೈರಲ್‌ ಆಗ್ತಾ ಇದೆ.

ಬಾಲಿವುಡ್‌ ಅಂಗಳದಲ್ಲಿಕರಣ್‌ ಒಬ್ಬ ಹೊಟ್ಟೆಕಿಚ್ಚಿನ ಮನುಷ್ಯ ಅನ್ನೋದು ಕೆಲವು ಸೆಲಬ್ರಿಟಿಗಳ ಅಭಿಪ್ರಾಯ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಿಯಾಂಕ ಚೋಪ್ರಾ ಸಂದರ್ಶನವೊಂದರಲ್ಲಿ “ತನ್ನನ್ನ ಬಾಲಿವುಡ್‌ನಿಂದ ಹೊರಹಾಕೋಕೆ ತುಂಬಾ ಜನ ಟ್ರೈ ಮಾಡಿದ್ದರು. ಬಾಲಿವುಡ್‌ನಲ್ಲಿ ನಡೆಯುವ ಗಿಮಿಕ್‌ಗಳೇ ನಾನು ಅಲ್ಲಿಂದ ಹೊರ ಬರೋಕೆ ಕಾರಣ” ಅಂತ ಹೇಳಿದ್ರು. ಪ್ರಿಯಾಂಕ ಅವರ ಮಾತಿಗೆ ಪ್ರತಿಕ್ರಿಯಿಸಿದ ಕಂಗಾನಾ ಡೈರೆಕ್ಟ್‌ ಆಗಿ “ಇದೆಲ್ಲದರ ಪ್ಲಾನ್‌ ಕರಣ್‌ ಜೋಹರ್‌ ಅವರದ್ದೇ ” ಅಂತ ಕಾಮೆಂಟ್‌ ಮಾಡಿದ್ರು. ಇನ್ನೂ ಕೆಲವರು ಸುಶಾಂತ್‌ ಸಿಂಗ್‌ ಸಾವಿಗೂ ಕರಣ್‌ ಜೋಹರ್‌ ಕಾರಣ ಅನ್ನೋ ಮಾತುಗಳೂ ಕೂಡ ಕೇಳಿ ಬರ್ತಿತ್ತು. ಬಾಲಿವುಡ್‌ನಲ್ಲಿ ಸಾಮಾನ್ಯವಾಗಿ ಗ್ರೂಪಿಸಂ ಇದೆ. ಈ ಗ್ರೂಪ್‌ಗೆ ಕರಣ್‌ ಲೀಡರ್‌ ಅಂತ ಕೂಡ ಜನ ಮಾತಾಡ್ತಾರೆ. ಇದೆಲ್ಲದರ ನಡುವೆ ಕರಣ್‌ ಜೋಹರ್‌ “ಅನುಷ್ಕಾ ಅವರ ಸಿನಿ ಕೆರಿಯರ್‌ನ್ನ ಹಾಳು ಮಾಡಬೇಕು ಅಂತ ಅಂದುಕೊಂಡಿದ್ದೆ” ಅಂತ ಹೇಳಿದ್ದ ಹಳೇ ವಿಡಿಯೋ ಈಗ ವೈರಲ್‌ ಆಗ್ತಾ ಇದೆ.

ಕರಣ್ ಜೋಹರ್ 2016 ರಲ್ಲಿ ರಾಜೀವ್ ಮಸಂದ್ ಮತ್ತು ಅನುಪಮಾ ಚೋಪ್ರಾ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಾ “‘ನಾನು ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಅಂತ ಅಂದ್ಕೊಂಡಿದ್ದೆ” ಎಂದು ತಮಾಷೆಯಾಗಿ ಹೇಳಿದ್ದರು. ಈ ಒಂದು ವಿಡಿಯೋವನ್ನ ಶೇರ್‌ ಮಾಡಿ ಸಂಕಲನಕಾರ ಅಪೂರ್ವ ಅಸ್ರಾನಿ ಟ್ಟೀಟ್‌ ಮಾಡಿದ್ದಾರೆ, “ಇದು ಅವರ ಮನಸಿನ ಮಾತು” ಅಂತ ಹೇಳಿದ್ದಾರೆ. ಈ ಟ್ಟೀಟ್‌ಗೆ ಕಾಮೆಂಟ್‌ ಮಾಡಿದ ವಿವೇಕ್‌ ಅಗ್ನಿಹೋತ್ರಿ “ಕೆರಿಯರ್‌ ಹಾಳು ಮಾಡೋದು ಕೆಲವೊಬ್ಬರ ಹವ್ಯಾಸ. ಬಾಲಿವುಡ್‌ನ ಕೊಳಕು ರಾಜಕೀಯದಿಂದಾಗಿ ಪ್ರತಿಭಾವಂತರ ಮೇಲೂ ಕೂಡ ಎಫೆಕ್ಟ್‌ ಆಗತ್ತೆ” ಅಂತ ಹೇಳಿದ್ದಾರೆ.

ಇನ್ನೂ ಕರಣ್‌ ಜೊಹರ್‌ ಅವರು ಮಾತನಾಡಿದ ಈ ವಿಡಿಯೋದಲ್ಲಿ “ನಾನು ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು ಸಂಪೂರ್ಣವಾಗಿ ನಾಶ ಮಾಡೋಕೆ ಟ್ರೈ ಮಾಡಿದ್ದೆ. ಯಾಕಂದ್ರೆ ಆದಿತ್ಯ ಚೋಪ್ರಾ ನನಗೆ ಅನುಷ್ಕಾಳ ಫೋಟೊವನ್ನ ತೋರಿಸಿದಾಗ, ನಾನು, ‘ಇಲ್ಲ, ನೀವು ಅವಳನ್ನ ನಂಬಿ ಫಿಲ್ಮ್‌ ಕೊಡ್ತೀರಾ? ನಿಮಗೇನು ತಲೆ ಕೆಟ್ಟಿದ್ಯಾ ? ಈ ಸಿನಿಮಾಗೆ ಅನುಷ್ಕಾ ಶರ್ಮಾನ ಹಾಕೊಳ್ಳೋದು ಬೇಡ ಅಂತ ಹೇಳಿ ಆ ಸಮಯದಲ್ಲಿ ನಾನು ಅನುಷ್ಕಾಳನ್ನ ಆದಿತ್ಯ ಸಹಿ ಮಾಡಬೇಕೆಂದು ಬಯಸಿದ್ದ ಮೂವಿಗೆ ಬೇರೆ ಹೀರೋಯಿನ್‌ನ್ನ ಸೆಲೆಕ್ಟ್‌ ಮಾಡಿದ್ದೆ. ಇನ್‌ಡೈರೆಕ್ಟ್‌ ಆಗಿ ಅನುಷ್ಕಾಳ ಸಿನಿ ಕೆರಿಯರ್‌ ಹಾಳು ಮಾಡೋಕೆ ನಾನು ಬಯಸಿದ್ದೆ. ಅಲ್ಲದೇ ಅನುಷ್ಕಾ ನಟಿಸಿದ್ದ ರಬ್ ನೆ ಬನಾ ದಿ ಸಿನಿಮಾವನ್ನ ನನಗೆ ಇಷ್ಟ ಇಲ್ಲದೇ ಇದ್ದರೂ ಕೂಡ ಕುತ್ಕೊಂಡು ನೋಡಿದ್ದೆ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply