ನಿಫಾ ವೈರಸ್‌ ಭೀತಿ: ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

masthmagaa.com:

ಕೇರಳದ ಕೋಳಿಕ್ಕೋಡ್‌ನಲ್ಲಿ ಇವತ್ತು ಮತ್ತೊಂದು ನಿಫಾ ವೈರಸ್ ಸೋಂಕು ಪ್ರಕರಣ ದೃಢಪಟ್ಟಿದೆ. 39 ವರ್ಷದ ವ್ಯಕ್ತಿಯಲ್ಲಿ ನಿಫಾ ಪಾಸಿಟಿವ್ ಕಂಡುಬಂದಿದೆ. ಇದರೊಂದಿಗೆ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿದೆ. ನಿಫಾ ಪತ್ತೆಯಾದ ವ್ಯಕ್ತಿಯನ್ನು ಆಸ್ಪತ್ರೆಯೊಂದರಲ್ಲಿ ಅಬ್ಸರ್ವೇಷನ್‌ಗೆ ಇರಿಸಲಾಗಿದೆ. ಆದ್ರೆ ಆ ವ್ಯಕ್ತಿ ಮಾತ್ರ ನಿಫಾ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಖಾಸಗಿ ಆಸ್ಪತ್ರೆಯಲ್ಲಿ ತಮ್ಮನ್ನು ದಾಖಲಿಸಬೇಕು ಅಂತ ಕೋರಿದ್ದಾರೆ ಅಂತ ಕೇರಳ ಆರೋಗ್ಯ ಸಚಿವರು ತಿಳಿಸಿದ್ದಾರೆ. ನಿಫಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿದರೆ ಭಾರಿ ಅಪಾಯ ಎದುರಾಗಲಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋಯಿಕ್ಕೋಡ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೋವಿಡ್ 19ರ ಲಾಕ್‌ಡೌನ್ ಸಂದರ್ಭದ ಪರಿಸ್ಥಿತಿ ಮರುಕಳಿಸಿದೆ. ಕೊರೊನಾ ವೈರಸ್‌ಗಿಂತಲೂ ಮಾರಣಾಂತಿಕವಾಗಿರುವ ಕಾರಣ ಆತಂಕ ಹೆಚ್ಚಾಗಿದೆ. ಕೋಳಿಕ್ಕೋಡ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ. ಕೇರಳದಲ್ಲಿ ಈಗಾಗಲೇ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಸೋಂಕು ಕರ್ನಾಟಕಕ್ಕೆ ಹರಡದಂತೆ ಎಚ್ಚರ ವಹಿಸಲು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಕೇರಳದಲ್ಲಿ ನಿಫಾ ಸೋಂಕು ಕಂಡುಬಂದಿರುವ ಪ್ರದೇಶಗಳಿಗೆ ರಾಜ್ಯದ ಜನ ಅನಗತ್ಯ ಪ್ರಯಾಣ ಮಾಡದಂತೆ ಸೂಚಿಸಿದೆ. ಜೊತೆಗೆ ಕರ್ನಾಟಕ ಹಾಗೂ ಕೇರಳದ ಗಡಿ ಪ್ರದೇಶದಲ್ಲಿ ಪರಿಶೀಲನೆಗಾಗಿ ಚೆಕ್ ಪೋಸ್ಟ್‌ಗಳ ನಿರ್ಮಾಣ ಮಾಡೋದಕ್ಕೆ ಹೇಳಿದೆ.

-masthmagaa.com

Contact Us for Advertisement

Leave a Reply