ರಾಮ ಭಕ್ತರ ಕನಸು ನನಸು! ಚಿನ್ನ-ವಜ್ರಾಭರಣಗಳಿಂದ ಕಂಗೊಳಿಸಿದ ರಾಮ!

masthmagaa.com:

ಭಾರತದ ಕೋಟ್ಯಾಂತರ ರಾಮ ಭಕ್ತರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿರೊ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಂಡಿದೆ. 500 ವರ್ಷಗಳ ನಂತರ ತನ್ನ ತವರಿನಲ್ಲಿ ನೆಲೆಸಿರೊ ಬಾಲರಾಮ, ಚಿನ್ನ-ವಜ್ರಾಭರಣಗಳಿಂದ ಕಂಗೊಳಿಸಿದ್ದಾನೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಸಾವಿರಾರು ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮವನ್ನ ನೆರವೇರಿಸಿದ್ದಾರೆ. ಮಧ್ಯಾಹ್ನ ಸರಿಯಾಗಿ 12.20ಕ್ಕೆ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿ, 12.45ರವರೆಗೆ ನಡೆದಿವೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ 12:29:03 ರಿಂದ 12:30:35 ಅಂದ್ರೆ ಶುಭ ಮುಹೂರ್ತ ಕೇವಲ 84 ಸೆಕೆಂಡ್‌ ಮಾತ್ರ ಇತ್ತು. ಗರ್ಭಗುಡಿಯಲ್ಲಿ ಮೋದಿ ಜೊತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಗವರ್ನರ್‌ ಆನಂದಿಬೆನ್‌ ಪಟೇಲ್‌ ಹಾಗೂ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಉಪಸ್ಥಿತರಿದ್ರು. ಪ್ರಾಣ ಪ್ರತಿಷ್ಠಾಪನೆ ಆಗಿ ಆರತಿ ಸಮಯದಲ್ಲಿ ಸೇನಾ ಹೆಲಿಕಾಪ್ಟರ್‌ಗಳು ರಾಮ ಮಂದಿರದ ಮೇಲೆ ಪುಷ್ಪ ವೃಷ್ಟಿ ಸುರಿಸಿವೆ. ಇದೇ ವೇಳೆ 30 ಕಲಾಕಾರರು ವಿವಿಧ ಭಾರತೀಯ ವಾದ್ಯಗಳನ್ನ ಬಾರಿಸಿದ್ದಾರೆ.


ಪ್ರಾಣ ಪ್ರತಿಷ್ಠಾಪನೆ ಬಳಿಕ ಮಾತಾಡಿರೋ ಮೋದಿ, ಇಂದು ನಮ್ಮ ರಾಮ ಬಂದಿದ್ದಾನೆ. ಅನೇಕ ಜನರ ತ್ಯಾಗ, ಬಲಿದಾನ, ಶ್ರಮದ ಫಲವಾಗಿ ಪ್ರಭು ಶ್ರೀರಾಮ ಚಂದ್ರ ಮತ್ತೆ ಬಂದಿದ್ದಾನೆ. ಈ ಶುಭ ಘಳಿಗೆಯಲ್ಲಿ ಎಲ್ಲರಿಗೂ ಶುಭಾಶಯ. ಹೇಳಲು ಎಷ್ಟೊಂದು ವಿಷಯಗಳು ಇವೆ. ಆದರೆ, ಮಾತುಗಳೇ ಹೊರಳದೇ ನನ್ನ ಕಂಠ ತುಂಬಿ ಬರುತ್ತಿದೆ. ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್​​ನಲ್ಲಿ ಇರಲ್ಲ, ನಮ್ಮ ರಾಮ ಲಲ್ಲಾ ದಿವ್ಯ ಮಂದಿರದಲ್ಲಿ ಇರಲಿದ್ದಾನೆ ಅಂತ ಭಾವುಕರಾಗಿ ಹೇಳಿದ್ದಾರೆ. ರಾಮ ಬೆಂಕಿಯಲ್ಲ, ಅವನು ಶಕ್ತಿ. ರಾಮ ವಿವಾದವಲ್ಲ, ಉತ್ತರ. ರಾಮ ಕೇವಲ ನಮ್ಮವನಲ್ಲ, ಅವನು ಎಲ್ಲರಿಗೂ ಸೇರಿದವನು ಎಂದಿದ್ದಾರೆ. ಜೊತೆಗೆ ರಾಮ ಮಂದಿರ ಪೂರ್ಣವಾಯ್ತು. ಮುಂದೇನು? ಅಂತ ಪ್ರಶ್ನಿಸಿರೊ ಮೋದಿ, ಜನರು ದೇವರಿಂದ ದೇಶ ಹಾಗೂ ರಾಮನಿಂದ ರಾಷ್ಟ್ರಕ್ಕೆ ತಮ್ಮ ವಿಚಾರಗಳನ್ನ ವಿಸ್ತರಿಸಬೇಕು ಅಂತ ಹೇಳಿದ್ದಾರೆ. ಹಾಗೇ ರಾಮ ಮಂದಿರದಲ್ಲಿ ತಮ್ಮ 11 ದಿನಗಳ ವ್ರತವನ್ನ ಅಂತ್ಯಗೊಳಿಸಿದ್ದಾರೆ. ಗೋವಿಂದ ದೇವ್ ಗಿರಿ ಮಹಾರಾಜ್ ಅವರು ಚರಣಾಮೃತ ಕುಡಿಸುವುದರೊಂದಿಗೆ ಮೋದಿ ಉಪವಾಸ ಅಂತ್ಯಗೊಂಡಿತು. ಬಳಿಕ ರಾಮ ಮಂದಿರ ಕಾಂಪ್ಲೆಕ್ಸ್‌ನಲ್ಲಿರೊ ಜಟಾಯು ಸ್ಟ್ಯಾಚೂವನ್ನ ಅನಾವರಣ ಮಾಡಿದ್ದಾರೆ. ಅಲ್ದೇ ರಾಮ ಮಂದಿರದ ಕಾರ್ಮಿಕರ ಮೇಲೆ ಹೂವು ಹಾಕಿ ಸನ್ಮಾನಿಸಿದ್ದಾರೆ.

 


ಇದೇ ಸಂದರ್ಭದಲ್ಲಿ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಕೂಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ʻರಾಮರಾಜ್ಯ ಬರ್ತಿದೆ, ಇನ್ನು ದೇಶದ ಪ್ರತಿಯೊಬ್ರು ಸಂಘರ್ಷಗಳಿಂದ ಹೊರಬರಬೇಕು. ಶ್ರೀರಾಮ ಅಯೋಧ್ಯೆಗೆ ವಾಪಾಸ್‌ ಬರೋದ್ರ ಜೊತೆಗೆ ಭಾರತದ ಹೆಮ್ಮೆ ಕೂಡ ವಾಪಾಸ್ಸಾಗಿದೆ. ಇದು ಹೊಸ ಭಾರತದ ಉಗಮʼ ಅಂತೇಳಿದ್ದಾರೆ. ಬಳಿಕ ಮಾತಾಡಿರೊ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ʻಭಾರತೀಯರ 500 ವರ್ಷಗಳ ಹಿಂದಿನ ಅಯೋಧ್ಯೆ ರಾಮಮಂದಿರದ ಕನಸು ಕೊನೆಗೂ ನನಸಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಪ್ರಮುಖ ಸಮುದಾಯವೊಂದು ತನ್ನ ದೇವರನ್ನ ಸರಿಯಾದ ಜಾಗದಲ್ಲಿ ಪ್ರತಿಷ್ಠಾಪಿಸೋಕೆ ಇಷ್ಟೊಂದು ಕಷ್ಟ ಪಟ್ಟಿರೋದು ಅಂತ ಹೇಳಿದ್ದಾರೆ. ಇನ್ನು 1990ರಲ್ಲಿ ಕರ ಸೇವಕರ ಮೇಲೆ ದಾಳಿ ನಡೆಸಿರೋ ಕುರಿತು ಮಾತನಾಡಿದ ಅವ್ರು, ʻಇನ್ಮುಂದೆ ಅಯೋಧ್ಯೆಯಲ್ಲಿ ಯಾವ್ದೇ ರೀತಿ ನಿರ್ಬಂಧಗಳಿರೋದಿಲ್ಲ, ಗುಂಡಿನ ದಾಳಿ ನಡೆಯೋದಿಲ್ಲʼ ಅಂತ ಹೇಳಿದ್ದಾರೆ.

ಇತ್ತ ಶ್ರೀರಾಮ ಲಲ್ಲಾ ವಿಗ್ರಹ ಕೆತ್ತಿರೋ ಕರ್ನಾಟಕ ಮೂಲದ ಶಿಲ್ಪಿ ಅರುಣ್‌ ಯೋಗಿರಾಜ್‌ ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ʻಈ ಭೂಮಿಯಲ್ಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ತರ ಫೀಲ್‌ ಆಗ್ತಿದೆ. ಕೆಲವೊಮ್ಮೆ ನನಗೆ ಕನಸಿನ ಲೋಕದಲ್ಲಿ ಇದ್ದ ಹಾಗೆ ಅನಿಸುತ್ತೆ ಅಂತ ರಿಯಾಕ್ಟ್‌ ಮಾಡಿದ್ದಾರೆ.

ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಮುಕ್ತಾಯದ ಘಟ್ಟಕ್ಕೆ ಬಂದಿದ್ದು, ಜನವರಿ 23 ರಿಂದ ಸಾರ್ವಜನಿಕರಿಗೆ ತೆರದ್ಕೊಳ್ಳಲಿದೆ. ಶ್ರೀರಾಮ ಲಲ್ಲಾನ ದರ್ಶನ ಮತ್ತು ಆರತಿಗೆ ಟೈಮಿಂಗ್‌ ಕೂಡ ಈಗ್ಲೇ ನೀಡಲಾಗಿದೆ. ಬೆಳಗ್ಗೆ 7:00 ಗಂಟೆಯಿಂದ 11:30ರವರೆಗೆ ಮತ್ತು ಮಧ್ಯಾಹ್ನ 2:00 ರಿಂದ ಸಂಜೆ 7:00 ಗಂಟೆವರೆಗೆ ಭಕ್ತರು ರಾಮನ ದರ್ಶನ ಪಡೀಬೋದು. ಇನ್ನು ಇಲ್ಲಿ ನಡೆಸಲಾಗೋ ಜಾಗರಣ್‌/ಶೃಂಗಾರ್‌ ಆರತಿ ಬೆಳಗ್ಗೆ 6:30ಕ್ಕೆ ನೆರವೇರಲಿದೆ ಮತ್ತು ಸಾಯಂಕಾಲದ ಆರತಿ ಸಂಜೆ 7:30ಕ್ಕೆ ನೆರವೇರಲಿದೆ.

ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಇತ್ತ ಕೊಪ್ಪಳದಲ್ಲಿ ಮುಸ್ಲಿಂ ಬಾಂಧವರು ದೇವಾಲಯದಲ್ಲಿ ಪೂಜೆ ಹಾಗೂ ಅನ್ನದಾನ ಸಂತರ್ಪಣೆ ಮಾಡಿ ಭಾವೈಕ್ಯತೆ ಮೆರೆದಿದ್ದಾರೆ. ನಗರದ ರಾಮಾಂಜನೇಯ ದೇವಾಲಯದಲ್ಲಿ ಮುಸ್ಲಿಂ ಪಂಚ ಕಮೀಟಿ ಸದಸ್ಯರು 1500 ಭಕ್ತಾಧಿಗಳಿಗೆ ಅನ್ನದಾನ ಮಾಡಿ ಹಿಂದೂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಗೆ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ತಾರೆಯರು ಒಟ್ಟಾಗಿದ್ದಾರೆ. ಇನ್ನು ನಮ್ಮ ಸ್ಯಾಂಡಲ್‌ವುಡ್‌ನಿಂದ ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಮತ್ತವ್ರ ಪತ್ನಿ ಉಪಸ್ಥಿತರಿದ್ರು. ಅಂದ್ಹಾಗೆ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಿರೋ ʻಕಾಶ್ಮೀರ್‌ ಫೈಲ್ಸ್‌ʼ ಮೂವಿಯ ನಟ ಅನುಪಮ್‌ ಖೇರ್‌, ʻತಮ್ಮ ಮನೆಗಳನ್ನ ತೊರೆದ ಲಕ್ಷಾಂತರ ಕಾಶ್ಮೀರಿ ಹಿಂದೂಗಳನ್ನ ನಾನಿವತ್ತು ಪ್ರತಿನಿಧಿಸ್ತಿದ್ದೀನಿ ಅಂತ ಹೇಳಿದ್ದಾರೆ.

ಇನ್ನೊಂದ್‌ ಕಡೆ ಪ್ರಾಣ ಪ್ರತಿಷ್ಠಾಪನೆಯ ಶುಭ ಗಳಿಗೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗರ್ಭಣಿಯರು ಹೆರಿಗೆ ಮಾಡಿಸಿಕೊಂಡಿದ್ದಾರೆ. ಕೇವಲ ಬೆಂಗಳೂರಿನಲ್ಲಿ 60ಕ್ಕೂ ಅಧಿಕ ಕಂದಮ್ಮಗಳು ಜನಿಸಿವೆ.

-masthmagaa.com

Contact Us for Advertisement

Leave a Reply