ಚಂದ್ರಯಾನ-3 ರಾಕೆಟ್‌ನ ಭಾಗ? ಆಸ್ಟ್ರೇಲಿಯಾ ಬೀಚ್‌ನಲ್ಲಿ ಬಾಹ್ಯಾಕಾಶ ಅವಶೇಷ!

masthmagaa.com:

ಬೃಹತ್ತಾಕಾರದ ಅಪರಿಚಿತ ಹಾಗೂ ರಹಸ್ಯಮಯ ಮೆಟಲ್‌ ಸಿಲಿಂಡರ್‌ ಒಂದು ಆಸ್ಟ್ರೇಲಿಯಾದ ಬೀಚ್‌ ಒಂದ್ರಲ್ಲಿ ಪತ್ತೆಯಾಗಿದೆ. ಈ ಲೋಹದ ವಸ್ತುವನ್ನ ಭಾರತ PSLV ಅಥ್ವಾ ಚಂದ್ರಯಾನ 3 ರಾಕೆಟ್‌ನ ಭಾಗ ಅಂತ ಶಂಕೆ ವ್ಯಕ್ತಪಡಿಸಲಾಗಿದೆ. ಕಳೆದ ಭಾನುವಾರ ಮಧ್ಯಾಹ್ನದ ಟೈಮಲ್ಲಿ ಮಿಡ್‌ ವೆಸ್ಟ್‌ ಕಡಲ ತೀರದಲ್ಲಿ ಅಲ್ಲಿನ ನಾಗರಿಕರು ಈ ವಸ್ತುವನ್ನ ಪತ್ತೆ ಹಚ್ಚಿದ್ದಾರೆ. ಬಳಿಕ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ್ದು, ಪತ್ತೆಯಾಗಿರೊ ವಸ್ತುವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಈ ಬೃಹತ್‌ ಮೆಟಲ್‌ ಲೋಹ, ವಾಣಿಜ್ಯ ವಿಮಾನದ್ದಲ್ಲ ಅಂತ ಹೇಳಿದ್ದು, ಅದ್ರಿಂದ ದೂರವಿರೋಕೆ ಅಲ್ಲಿನ ನಾಗರಿಕರಿಗೆ ಸೂಚನೆ ನೀಡಿದ್ದಾರೆ. ಇನ್ನು ಈ ವಸ್ತುವಿನ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದ್ದಾಡಿದ್ದೇ ತಡ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಕೆಲವರು ಇದು UFOಗೆ ಸಂಬಂಧಿಸಿದ್ದು ಅಂದ್ರೆ, ಇನ್ನು ಕೆಲವರು ಈ ಹಿಂದೆ ನಾಪತ್ತೆಯಾಗಿದ್ದ ಮಲೇಷಿಯಾದ MH 370 ವಿಮಾನದ ಭಾಗ ಅಂತ ಹೇಳಿದ್ದಾರೆ. ಹೀಗೆ ಜನರು ಮನಸ್ಸಿಗೆ ಬಂದಂತೆ ಹೇಳ್ತಾ ಇರೋದಕ್ಕೆ, ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಸಿಗೋವರೆಗೂ, ಯಾವುದೇ ನಿರ್ಣಯಕ್ಕೆ ಬರಬೇಡಿ ಅಂತ ಅಲ್ಲಿನ ಪೊಲೀಸರು ಹೇಳಿದ್ದಾರೆ. ಅಲ್ದೇ ವಸ್ತುವನ್ನ ರಕ್ಷಣೆ ಮಾಡಿ, ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಫೋಟೋನಲ್ಲಿ ಕಂಡುಬಂದ ಈ ಅಪರಿಚಿತ ವಸ್ತು, ತಾಮ್ರದ ಕಲರ್‌ ಹೊಂದಿದ್ದು, ಹಾನಿಗೊಳಗಾಗಿದೆ. ಇದು ತನ್ನ ಮೂಲ ವಸ್ತುವಿನಿಂದ ಬೇರ್ಪಟ್ಟಿದ್ದು, ಅದರ ಕೆಳಭಾಗ ಸಂಪೂರ್ಣ ಮುರಿದ ಹಾಗಿದೆ. ಇತ್ತ ಈ ವಸ್ತುವಿನ ಕುರಿತು ಆಸ್ಟ್ರೇಲಿಯಾದ ಸ್ಪೇಸ್‌ ಏಜೆನ್ಸಿ ಕೂಡ ತನಿಖೆ ನಡೆಸುತ್ತಿದೆ. ಇದು ವಿದೇಶಿ ಉಡಾವಣಾ ವಾಹನದ ಭಾಗವಾಗಿದೆಯಾ ಅಂತ ತಿಳಿದುಕೊಳ್ಳಲಾಗ್ತಿದೆ. ಅಲ್ದೇ ವಸ್ತುವಿನ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಲು ಸಹಕಾರ ನೀಡುವಂತೆ ಇತರ ದೇಶಗಳಿಗೆ ಕೇಳಿಕೊಳ್ಳಲಾಗಿದೆ ಅಂತ ಆಸ್ಟ್ರೇಲಿಯಾ ಸ್ಪೇಸ್‌ ಏಜೆನ್ಸಿಯ ವಕ್ತಾರರೊಬ್ರು ಹೇಳಿದ್ದಾರೆ. ಇದೇ ವೇಳೆ ಬಾಹ್ಯಾಕಾಶ ಪುರಾತತ್ವಶಾಸ್ತ್ರಜ್ಞ ಡಾ ಅಲಿಸ್‌ ಗಾರ್ಮನ್‌ ಮಾತಾಡಿ, ಈ ವಸ್ತು ಇಂಧನ ಸಿಲಿಂಡರ್‌ ಆಗಿದ್ದು, ಭಾರತದ ಪೋಲಾರ್‌ ಸ್ಯಾಟ್‌ಲೈಟ್‌ ಲಾಂಚ್‌ ವೆಹಿಕಲ್‌ನ ಅಥ್ವಾ ಚಂದ್ರಯಾನ 3 ರ ಥರ್ಡ್‌ ಸ್ಟೇಜ್‌ ಆಗಿದೆ ಅಂತ ಹೇಳಿದ್ದಾರೆ. ಇತ್ತ ಕೆಲ ಟ್ವಿಟರ್‌ ಬಳಕೆದಾರರು ಕೂಡ ಇದು ಭಾರತದ PSLV ಅವಶೇಷ ಅಂತ ಹೇಳ್ತಿದಾರೆ. ಆದ್ರೆ ಸಂಪೂರ್ಣ ತನಿಖೆಯಾದ ಮೇಲೆಯೇ ಈ ವಸ್ತು ಯಾವ ಸ್ಪೇಸ್‌ಕ್ರಾಫ್ಟ್‌ನ ಭಾಗ ಅಂತ ತಿಳಿಯಲಿದೆ. ಇನ್ನೊಂದ್‌ ಕಡೆ ಮನೆಯ ಟೆರೇಸ್‌ನಲ್ಲಿ ಕಾಫಿ ಕುಡಿಯುತ್ತಿದ್ದ ಮಹಿಳೆಗೆ ಉಲ್ಕಾಶಿಲೆಯ ಪೀಸ್‌ಒಂದು ಅಪ್ಪಳಿಸಿರೋ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ಬಳಿಕ ಈ ಶಿಲೆಯನ್ನ ಜಿಯೋಲಾಜಿಸ್ಟ್‌ಗೆ ತೋರಿಸಿದ್ದು, ಇದು ಎಕ್ಸ್‌ಟ್ರಾ ಟೆರಿಸ್ಟಿಯಲ್‌ ಅಂದ್ರೆ ಭೂಮಿಯಾಚೆಗಿನ ವಸ್ತು ಅಂತ ಸ್ಪಷ್ಟವಾಗಿದೆ.

-masthmagaa.com

Contact Us for Advertisement

Leave a Reply