ಕಾಶ್ಮೀರದ ಉಗ್ರ ದಾಳಿಗೆ ಜೈಷ್‌ ಉಗ್ರರ ಲಿಂಕ್:‌ ಆಗಿದ್ದೇನು?

masthmagaa.com:

ಕಾಶ್ಮೀರ ಸಮಸ್ಯೆಗೆ ಭಾರತ ಸೊಲ್ಯೂಷನ್‌ ತರ್ಬೇಕು ಅಂದುಕೊಂಡಾಗೆಲ್ಲಾ ಪಾಕಿಸ್ತಾನ ಏನಾದ್ರು ಒಂದು ಕಿತಾಪತಿ ಮಾಡಿ ಎಲ್ಲವನ್ನೂ ಹಾಳು ಮಾಡುತ್ತೆ. ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸೋ ಎಲ್ಲಾ ಪ್ರಯತ್ನಗಳಿಗೂ ಪಾಕ್‌ ಕಲ್ಲು ಹಾಕ್ತಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರ ಹಾಗೂ ಲಡಾಕ್‌ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡಿ ಹೊಸದಾಗಿ ಸರ್ಕಾರ ರಚಿಸೋ ಪ್ಲಾನ್‌ ಹಾಕಿತ್ತು. ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಜೋರಾಗೆ ಸದ್ದು ಮಾಡಿತ್ತು. ಹೊಸದಾಗಿ ರಚನೆಯಾಗೋ ಕ್ಷೇತ್ರಗಳಲ್ಲಿ ಮಹಿಳೆಯರಿಗೆ, PoK ಇಂದ ಬಂದ ವಲಸಿಗರಿಗೂ ಮೀಸಲಾತಿ ಕೊಡ್ತೀವಿ ಅಂತ ಗೃಹ ಸಚಿವ ಅಮಿತ್‌ ಶಾ ಹೇಳಿದ್ರು. ಅಲ್ಲದೆ ಸುಪ್ರೀಂ ಕೋರ್ಟ್‌ 2024ರ ಸೆಪ್ಟೆಂಬರ್‌ 30ರೊಳಗೆ ಜಮ್ಮು ಕಾಶ್ಮೀರದಲಿ ಚುನಾವಣೆ ನಡೆಸ್ಬೇಕು ಅಂತ ಎಲೆಕ್ಷನ್‌ ಕಮಿಷನ್‌ಗೆ ಡೆಡ್‌ಲೈನ್‌ ನೀಡಿತ್ತು. ಈ ಎಲ್ಲಾ ವಿಚಾರಗಳು ಮುನ್ನಲೆಗೆ ಬಂದಾಗಿಂದ ಕಾಶ್ಮೀರದ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗಿದೆ. ಆಗಿನಿಂದ ಪ್ರತಿದಿನ ಒಂದಿಲ್ಲೊಂದು ಘಟನೆಗಳು ವರದಿಯಾಗ್ತಾನೆ ಇವೆ. ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯೋದು, ಅಲ್ಲಿನ ಜನ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯ ಭಾಗ ಆಗೋದನ್ನ ತಡೆಯೋಕೆ ಪಾಕ್‌ ಹೊಂಚು ಹಾಕ್ತಾನೆ ಇದೆ. ಸುಪ್ರೀಂ ಕೋರ್ಟ್‌ ಆರ್ಟಿಕಲ್‌ 370 ರದ್ದತಿಯನ್ನ ಸಾಂವಿಧಾನಿಕ ಅಂತೇಳ್ದಾಗ್ಲೇ ಪಾಕ್‌ ನಾಯಕರ ಹೊಟ್ಟೆಗೆ ಬೆಂಕಿ ಬಿದ್ದಿತ್ತು. ಒಟ್ನಲ್ಲಿ ಕಾಶ್ಮೀರದ ಕಾವು ಇಳಿಯೋದನ್ನ ಪಾಕ್‌, ಚೀನಾಗಳು ಸಹಿಸಲ್ಲ. ಹೌದು.., ಪಾಕ್‌ ಜೊತೆಗೆ ಕುತಂತ್ರಿ ಚೀನಾ ಸಹ ಈ ಕೆಲಸಕ್ಕೆ ಕೈ ಜೋಡಿಸಿದೆ. ಲಡಾಕ್‌ನ ಚೀನಾ ಬಾರ್ಡರ್‌ನಲ್ಲಿರೋ ಭಾರತೀಯ ಸೈನ್ಯವನ್ನ ಕಾಶ್ಮೀರದ ಕಡೆಗೆ ಡೈವರ್ಟ್‌ ಮಾಡ್ಬೇಕು ಅಂತ ಕಾಶ್ಮೀರದ ಪೂಂಚ್‌ ಪ್ರದೇಶದ ಟೆರರಿಸ್ಟ್‌ ಆಕ್ಟಿವಿಟಿಗಳಿಗೆ ಕುಮ್ಮಕ್ಕು ನೀಡ್ತಿವೆ. 2020ರ ಗಲ್ವಾನ್‌ ಕಣಿವೆ ಸಂಘರ್ಷದ ನಂತ್ರ ಲಡಾಕ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ನಮ್ಮ ಸೇನೆ ನಿಯೋಜನೆ ಆಗಿದೆ. ಈಗ ದಾಳಿ ನಡೆದಿರೋ ಪೂಂಚ್‌ನಲ್ಲಿದ್ದ ರಾಷ್ಟ್ರೀಯ ರೈಫಲ್ಸ್‌ ಸಿಬ್ಬಂದಿಯನ್ನ ಆಗ ಲಡಾಕ್‌ ಗಡಿಗೆ ಕಳಿಸಲಾಗಿತ್ತು. ಆಗಿನಿಂದ ಆ ಭಾಗದಲ್ಲಿ ಭಾರತದ ಸೈನ್ಯ ಬೀಡು ಬಿಟ್ಟಿದೆ. ಇದನ್ನ ಚೀನಾ ಅರಗಿಸಿಕೊಳ್ತಿಲ್ಲ. ಪಶ್ಮಿಮದ ಪಾಕ್‌ ಗಡಿಯಲ್ಲಿ ಕಡ್ಡಿ ಆಡಿಸಿದ್ರೆ ಪೂರ್ವದಲ್ಲಿರೋ ಲಡಾಕ್‌ ಗಡಿಯಿಂದ ಸೇನೆ ವಾಪಸ್‌ ಓಗುತ್ತೆ ಅನ್ನೋದು ಚೀನಾ ಲೆಕ್ಕಾಚಾರ. ಇವೆಲ್ಲ ವಿಚಾರವನ್ನ ಮಾಜಿ ಸೇನಾಧಿಕಾರಿಯೊಬ್ರು ಹೇಳಿದ್ದಾರೆ. ಓಪನ್‌ ಆಗಿ ಇದು ಚೀನಾ-ಪಾಕಿಸ್ತಾನಗಳ ಗೇಮ್‌ ಪ್ಲಾನ್‌ ಅಂತೇಳಿದ್ದಾರೆ. ಇದಕ್ಕೆ ಪುಷ್ಠಿ ಕೊಡುವಂತೆ ಪಾಕ್‌ ಪೂಂಚ್‌ನ ಕಾಡುಗಳಿಗೆ ಉಗ್ರರನ್ನ ಒಳನುಗ್ಗಿಸೋ ಕೆಲಸವನ್ನ ಜಾಸ್ತಿ ಮಾಡಿದೆ.

ಗುರುವಾರ ಇಲ್ಲಿ ನಡೆದ ಉಗ್ರ ದಾಳಿಯಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆ 5ಕ್ಕೆ ಏರಿದೆ. ದಾಳಿಯ ಹೊಣೆಯನ್ನ ಕಾಶ್ಮೀರಿ ಪ್ರತ್ಯೇಕತಾವಾದಿ People’s Anti-Fascist Front (PAFF) ಉಗ್ರ ಸಂಘಟನೆ ಹೊತ್ತುಕೊಂಡಿದೆ.‌ ಇದು ಜೈಶ್‌ ಉಗ್ರ ಸಂಘಟನೆಯ ಭಾಗವಾಗಿರ್ಬೋದು ಅಂತ ಭದ್ರತಾ ಪಡೆಗಳು ಶಂಕಿಸಿವೆ. ಗುರುವಾರ ಸಂಜೆ ಸೇನಾ ಪಡೆಗಳು ಸುರನ್‌ಕೋಟ್‌ನಿಂದ ರಜೌರಿ ಬಳಿ ಇರೋ ತಾನಾಮಂಡಿಯ ರಾಷ್ಟ್ರೀಯ ರೈಫಲ್ಸ್‌ ಘಟಕಕ್ಕೆ ಪ್ರಯಾಣ ಬೆಳೆಸಿದ್ವು. ಈ ವೇಳೆ ಇಲ್ಲಿನ ದತ್ಯಾರ್‌ ಮೋರ್ಹ್‌ ಬಳಿ ರಸ್ತೆ ತಿರುವಿನಲ್ಲಿ ಅವಿತು ಕುಳಿತಿದ್ದ ಉಗ್ರರು ಆರ್ಮಿ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಈ ರಸ್ತೆ ಗುಂಡಿಗಳಿಂದ ಕೂಡಿದ್ದು, ತಿರುವು ಇರೋದ್ರಿಂದ ವಾಹನಗಳು ಸ್ಲೋ ಆಗ್ತವೇ ಅಂತ ಮೊದಲೇ ಪ್ಲಾನ್‌ ಮಾಡಿ, ತಿರುವಿನ ಪಕ್ಕದಲ್ಲಿದ್ದ ಗುಡ್ಡದ ಮೇಲೆ ಕುಳಿತು ದಾಳಿ ನಡೆಸಿದ್ದಾರೆ. ಮೂರರಿಂದ ನಾಲ್ಕು ಜನ ಉಗ್ರರು ಈ ದಾಳಿ ನಡೆಸಿರ್ಬೋದು ಅಂತ ತಿಳಿದು ಬಂದಿದೆ. ಇನ್ನು ಘಟನೆಯಲ್ಲಿ ಉಗ್ರರು ಅಮೆರಿಕ ನಿರ್ಮಿತ M4 ಕಾರ್ಬೈಡ್‌ ಅಸಾಲ್ಟ್ ರೈಫಲ್‌ಗಳನ್ನ ಬಳಸಿದ್ದಾರೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. PATF ರಿಲೀಸ್‌ ಮಾಡಿರೋ ಫೋಟೋಗಳಲ್ಲಿ ಈ ರೈಫಲ್‌ಗಳನ್ನ ಬಳಕೆ ಮಾಡಿರೋದು ಕಂಡು ಬಂದಿದೆ. ಅಲ್ಲದೆ ರಜೌರಿಯಲ್ಲಿ ಪಾಕ್‌ ಮೂಲದ ಸುಮಾರು 30 ಮಂದಿ ಉಗ್ರರು ಇರ್ಬೋದು ಅಂತ ಸೇನೆ ಶಂಕೆ ವ್ಯಕ್ತಪಡಿಸಿದೆ. ಇನ್ನು ಘಟನೆ ಬಗ್ಗೆ ವಿಪಕ್ಷಗಳು ಕಿಡಿಕಾರಿವೆ. ʻಸರ್ಕಾರ ಮಲಗಿದೆ. ಭದ್ರತಾ ಸಮಸ್ಯೆಗಳನ್ನ ಹ್ಯಾಂಡಲ್‌ ಮಾಡೋಕೆ ಬರಲ್ಲ. ಪುಲ್ವಾಮ ರೀತಿ, ಈ ಘಟನೆಯನ್ನ ಇಟ್ಕೊಂಡು ಈ ಬಾರಿ ವೋಟ್‌ ಕೇಳೋಕೆ ಪ್ಲಾನ್‌ ಮಾಡಿದ್ದೀರ?ʼ ಅಂತ ಶಿವಸೇನೆ ಸಂಸದ ಸಂಜಯ್‌ ರಾವತ್‌ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply