ಜಿ7 ರಾಷ್ಟ್ರಗಳು ಯುಕ್ರೇನ್‌ ಪರ: ರಷ್ಯಾಗೆ ಹೆಚ್ಚಿನ ನಿರ್ಬಂಧಗಳ ಸಂಕಷ್ಟ

masthmagaa.com:

ವಿಶ್ವದ ಬಲಿಷ್ಠ ಆರ್ಥಿಕತೆ ಹೊಂದಿರೊ G7 ರಾಷ್ಟ್ರಗಳು ಜಪಾನ್‌ನ ಹಿರೋಶಿಮಾದಲ್ಲಿ ಸಭೆ ನಡೆಸುತ್ತಿವೆ. ಈ ವೇಳೆ ಯುಕ್ರೇನ್‌ ಮೇಲೆ ನಿರಂತರವಾಗಿ ದಾಳಿ ಮಾಡ್ತಿರೋ ರಷ್ಯಾ ವಿರುದ್ಧ ಮತ್ತಷ್ಟು ಹೆಚ್ಚಿನ ಸ್ಯಾಂಕ್ಶನ್‌ಗಳನ್ನ ಹೇರೋಕೆ ಮುಂದಾಗಿವೆ. ರಷ್ಯಾದಿಂದ ಡೈಮಂಡ್‌ ಹಾಗೂ ಮೆಟಲ್‌ನ ಆಮದಿನ ಮೇಲೆ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್ ನಿಷೇಧ ಹೇರೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಇಂಧನ, ಮೆಟಲ್‌ ಹಾಗೂ ಶಿಪ್ಪಿಂಗ್‌ ಅಥ್ವಾ ಸಾಗಾಣಿಕೆ ಇಂಡಸ್ಟ್ರಿ ಸೇರಿದಂತೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರ ಮಿಲಿಟರಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಒಟ್ಟು 86 ಜನ ಹಾಗೂ ಸಂಸ್ಥೆಗಳನ್ನ ಟಾರ್ಗೆಟ್‌ ಮಾಡಲಾಗ್ತಿದೆ ಅಂತ ಬ್ರಿಟನ್‌ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಜಿ7 ಒಕ್ಕೂಟ ಯುಕ್ರೇನ್‌ ಜೊತೆ ನಿಲ್ಲುತ್ತೆ ಅನ್ನೊದನ್ನ ಪುಟಿನ್‌ಗೆ ತೋರಿಸಬೇಕಿದೆ ಅಂತ ಸುನಾಕ್‌ ಹೇಳಿದ್ದಾರೆ. ಅಂದ್ಹಾಗೆ ಕಳೆದ ಸೋಮವಾರ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಯುಕೆಗೆ ಭೇಟಿ ಕೊಟ್ಟಾಗ, ಶಸ್ತ್ರಾಸ್ತ್ರ ನೆರವು ಸೇರಿದಂತೆ ಸಂಪೂರ್ಣ ಬೆಂಬಲ ನಿಡೋದಾಗಿ ರಿಷಿ ಸುನಾಕ್ ಮಾತು‌ ಕೊಟ್ಟಿದ್ರು. ಅದರ ಬೆನ್ನಲ್ಲೇ ಇದೀಗ ರಷ್ಯಾ ಮೇಲೆ ಒತ್ತಡ ಜಾಸ್ತಿ ಮಾಡಲು ನಿರ್ಬಂಧಗಳನ್ನ ಹೇರೋಕೆ ಮುಂದಾಗಿದ್ದಾರೆ. ಇತ್ತ ಅಮೆರಿಕ ಕೂಡ ರಷ್ಯಾ ಮೇಲೆ ಇನ್ನಷ್ಟು ಹಚ್ಚಿನ ಕಠಿಣ ನಿರ್ಬಂಧಗಳನ್ನ ಹೇರೋಕೆ ಮುಂದಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ರಷ್ಯಾ ಮೇಲೆ ಹಾಕಲಾಗೊ ಸ್ಯಾಂಕ್ಶನ್‌ಗಳು ಹೆಚ್ಚು ಕಠಿಣವಾಗಿರಲಿವೆ ಅಂತ ಅಮೆರಿಕ ಹೇಳಿದೆ. ಇನ್ನೊಂದ್‌ ಕಡೆ ಜಿ7 ನಾಯಕರನ್ನ ವೈಯಕ್ತಿಕವಾಗಿ ಮೀಟ್‌ ಮಾಡಲು ಯುಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್ಸ್ಕಿ ಜಪಾನ್‌ಗೆ ತೆರಳಲಿದ್ದಾರೆ. ಸೌದಿ ಅರೆಬಿಯಾದಲ್ಲಿ ನಡಿತಾ ಇರೊ ಅರಬ್‌ ಲೀಗ್‌ ಸಮಿಟ್‌ಗೆ ಭೇಟಿ ನೀಡಿದ ಬಳಿಕ ಜಪಾನ್‌ಗೆ ಹೋಗಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ಈ ವೇಳೆ ರಷ್ಯಾ ವಿರುದ್ಧ ಯುಕ್ರೇನ್‌ಗೆ ಹೆಚ್ಚಿನ ಸೇನಾ ನೆರವು ನೀಡುವಂತೆ ಹಾಗೂ ರಷ್ಯಾ ಮೇಲಿನ ನಿರ್ಬಂಧಗಳನ್ನ ಕಠಿಣಗೊಳಿಸುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನು ಕಳೆದ ವರ್ಷದಿಂದ ಈವರೆಗೆ ಪಾಶ್ಚಿಮಾತ್ಯ ದೇಶಗಳು ಹೇರಿರೊ ನೂರಾರು ನಿರ್ಬಂಧಗಳಿಗೆ ಜಗ್ಗದೇ ರಷ್ಯಾ ದಾಳಿಯನ್ನ ಮುಂದುವರೆಸಿದೆ. ನಿರ್ಬಂಧಗಳು ಹೆಚ್ಚಾದಂತೆ ರಷ್ಯಾದ ದಾಳಿ ತೀವ್ರವಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಇದೀಗ ಜಿ7 ರಾಷ್ಟ್ರಗಳ ಹೊಸ ನಿರ್ಬಂಧಗಳಿಗೆ ರಷ್ಯಾ ಯಾವ ರೀತಿ ರೆಸ್ಪಾನ್ಸ್‌ ನೀಡುತ್ತೆ ಅನ್ನೊದು ಕುತೂಹಲ ಮೂಡಿಸಿದೆ.

-masthmagaa.com

Contact Us for Advertisement

Leave a Reply