2023ರ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಅಂಬಾನಿ, ಅದಾನಿ ಕುಸಿದಿದ್ದೆಷ್ಟು?

masthmagaa.com:

2023ರ ಜಗತ್ತಿನ ಕುಬೇರರ ನೂತನ ಪಟ್ಟಿಯನ್ನ ಫೋರ್ಬ್ಸ್‌ ಬಿಡುಗಡೆ ಮಾಡಿದೆ. 211 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 17.30 ಲಕ್ಷ ಕೋಟಿ ರೂ. ಆಸ್ತಿ ಮೌಲ್ಯದೊಂದಿಗೆ ಬರ್ನಾಡ್‌ ಅರ್ನಾಲ್ಟ್‌ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅವರ ನಂತರ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ 2ನೇ ಸ್ಥಾನದಲ್ಲಿ ಹಾಗೂ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಜ್‌ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಕುಬೇರರನ್ನ ನೋಡೊದಾದ್ರೆ, ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಸತತ 2ನೇ ವರ್ಷ ಟಾಪ್‌ 10 ಪಟ್ಟಿಯಲ್ಲಿ ಮುಕೇಶ್‌ ಅಂಬಾನಿ ಸ್ಥಾನ ಪಡೆದಿದ್ದಾರೆ. 83.4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 6.8 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯೆನ್ನುವ ಖ್ಯಾತಿಗೂ ಅಂಬಾನಿ ಪಾತ್ರರಾಗಿದ್ದಾರೆ. ಅಲ್ದೇ ಮೈಕ್ರೋಸಾಫ್ಟ್‌ನ ಸ್ಟೀವ್‌ ಬಾಲ್ಮರ್‌, ಗೂಗಲ್‌ನ ಲ್ಯಾರಿ‌ ಪೇಜ್ ಹಾಗೂ ಸೆರ್ಗೆ ಬ್ರಿನ್‌, ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವ್ರನ್ನ ಈ ವರ್ಷ ಅಂಬಾನಿ ಹಿಂದಿಕ್ಕಿದ್ದಾರೆ. ಇತ್ತ ಕಳೆದ ಬಾರಿ ಟಾಪ್‌ ಮೂರರಲ್ಲಿದ್ದ ಭಾರತದ ಉದ್ಯಮಿ ಗೌತಮ್‌ ಅದಾನಿ ಈ ಬಾರಿ 24ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜನವರಿ 24 ರಂದು 126 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 10.33 ಲಕ್ಷ ಕೋಟಿ ರೂ. ಸಂಪತ್ತನ್ನ ಅದಾನಿ ಹೊಂದಿದ್ರು. ಹಿಂಡನ್‌ಬರ್ಗ್‌ ರಿಸರ್ಚ್‌ ವರದಿ ಬಳಿಕ ಕಂಪನಿಗಳ ಷೇರುಗಳು ಕುಸಿದು ಪ್ರಸ್ತುತ 47.2 ಬಿಲಿಯನ್‌ ಡಾಲರ್‌ ಅಂದ್ರೆ 3.46 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಹೀಗಾಗಿ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ 24 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಒಟ್ಟಾರೆ ಟಾಪ್‌ 25 ಶ್ರೀಮಂತರು ಒಟ್ಟು 2.1 ಟ್ರಿಲಿಯನ್‌ ಡಾಲರ್‌ ಮೌಲ್ಯದ ಆಸ್ತಿ ಹೊಂದಿದ್ದು, ಕಳೆದ ಬಾರಿಗಿಂತ ಅಂದ್ರೆ 2022ಕ್ಕಿಂತ 200 ಬಿಲಿಯನ್‌ ಡಾಲರ್‌ ಕಡಿಮೆಯಿದೆ ಅಂತ ಫೋರ್ಬ್ಸ್‌ ವರದಿ ಮಾಡಿದೆ. ಅಲ್ದೇ ಕಳೆದ ವರ್ಷ ಬಿಲಿಯನೇರ್‌ ಪಟ್ಟಿಯಲ್ಲಿ 2,668 ಜನರಿದ್ರು. ಈ ವರ್ಷ ಈ ಸಂಖ್ಯೆ 2,640ಕ್ಕೆ ಇಳಿದಿದೆ. ಇನ್ನು ಹೆಚ್ಚು ಬಿಲಿಯನೇರ್‌ಗಳನ್ನ ಹೊಂದಿದ ರಾಷ್ಟ್ರಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ರೆ, ಚೀನಾ 2ನೇ ಸ್ಥಾನ ಹಾಗೂ ಭಾರತ ಮೂರನೇ ಸ್ಥಾನದಲ್ಲಿದೆ ಅಂತ ಫೋರ್ಬ್ಸ್‌ ಹೇಳಿದೆ.

-masthmagaa.com

Contact Us for Advertisement

Leave a Reply