ಕೇಜ್ರಿವಾಲ್‌ ಕೇಸ್:‌ ಮಧ್ಯಂತರ ರಿಲೀಫ್‌ ನೀಡದ ಹೈಕೋರ್ಟ್‌!

masthmagaa.com:

ದಿಲ್ಲಿ ಮದ್ಯ ಹಗರಣದಲ್ಲಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವ್ರಿಗೆ ಮಧ್ಯಂತರ ರಕ್ಷಣೆ ನೀಡೋದಕ್ಕೆ ದಿಲ್ಲಿ ಹೈಕೋರ್ಟ್‌ ನಿರಾಕರಿಸಿದೆ. ತಮ್ಮ ಬಂಧನ ಪ್ರಶ್ನಿಸಿ ಕೇಜ್ರಿವಾಲ್‌ ಇಂಟರಿಮ್‌ ರಿಲೀಫ್‌ ಕೇಳಿ ಅರ್ಜಿ ಸಲ್ಲಿಸಿದ್ರು, ಜಸ್ಟೀಸ್‌ ಸ್ವರ್ಣ ಕಾಂತ ಶರ್ಮ ಅವ್ರ ದಿಲ್ಲಿ ಹೈಕೋರ್ಟ್‌ ಫೀಠ ಸದ್ಯಕ್ಕೆ ನಿರಾಕರಿಸಿದೆ. ಜೊತೆಗೆ ಅರ್ಜಿಗೆ ಪ್ರತಿಕ್ರಿಯಿಸಲು ED, 3 ವಾರಗಳ ಟೈಮ್‌ ಕೇಳಿತ್ತು. ಆದ್ರೆ ಹೈಕೋರ್ಟ್‌ ಒಂದು ವಾರದಲ್ಲೇ ಅಂದ್ರೆ ಏಪ್ರಿಲ್‌ 2ರ ಒಳಗೆ ರಿಪ್ಲೈ ಮಾಡಿ ಅಂತ ಹೇಳಿದೆ. ಜೊತೆಗೆ ಮುಂದಿನ ವಿಚಾರಣೆಯನ್ನ ಏಪ್ರಿಲ್‌ 3ಕ್ಕೆ ಮುಂದೂಡಿದೆ. ಇನ್ನು ಅತ್ತ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಜೈಲಿನಿಂದ ಸರ್ಕಾರ ನಡೆಸೊಕೆ ಸಾಧ್ಯವಿಲ್ಲ ಅಂತ ದಿಲ್ಲಿ ಲೆಫ್ಟಿನಂಟ್‌ ಗವರ್ನರ್‌ ವಿ.ಕೆ ಸಕ್ಸೆನಾ ಹೇಳಿದ್ದಾರೆ. ಆಪ್‌ ನಾಯಕರು ಕೇಜ್ರಿವಾಲ್‌ ಜೈಲಿನಿಂದಲೇ ಸರ್ಕಾರ ನಡೆಸ್ತಾರೆ ಅಂತೇಳಿರೊ ಬೆನ್ನಲ್ಲೆ ಸಕ್ಸೇನಾ ಈ ರೀತಿ ಹೇಳಿದ್ದಾರೆ.

ಇನ್ನು ಮಾರ್ಚ್‌28ಕ್ಕೆ ಅಂದ್ರೆ ನಾಳೆ ಕೇಜ್ರಿವಾಲ್‌ ದೊಡ್ಡ ಸತ್ಯವೊಂದನ್ನ ಬಹಿರಂಗ ಪಡಿಸಲಿದ್ದಾರೆ ಅಂತ ಕೇಜ್ರಿವಾಲ್‌ ಪತ್ನಿ ಸುನೀತಾ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅಂದ್ಹಾಗೆ ಮದ್ಯ ಹಗರಣ ಕೇಸ್‌ನಲ್ಲಿ ನಾಳೆ ED ಕಸ್ಟಡಿ ಡೇಟ್‌ ಮುಗಿಯೊದ್ರಿಂದ ಸುನೀತಾ ಅವ್ರ ಈ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸುನಿತಾ ಅವ್ರ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಸಿಂಗ್‌ ಠಾಕೂರ್‌ ಪ್ರತಿಕ್ರಿಯಿಸಿ, ಬಿಹಾರದಲ್ಲಿ ಲಾಲೂ ಪ್ರಸಾದ್ ಪತ್ನಿ ರಾಬ್ರಿ ದೇವಿ ಮಾಡಿದಂತೆ ಸುನೀತಾ ಕೂಡ ದಿಲ್ಲಿ ಸಿಎಂ ಗಾದಿಗೆ ಏರೋ ಸುಳಿವು ನೀಡಿದ್ದಾರೆ ಅಂತ ಆರೋಪಿಸಿದ್ದಾರೆ.

ಕೇಜ್ರಿವಾಲ್‌ ಬಂಧನದ ಬಗ್ಗೆ ಸೋಮವಾರ ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರರೊಬ್ರು ಕಮೆಂಟ್‌ ಮಾಡಿದ್ರು. ಕೇಜ್ರಿವಾಲ್‌ರ ಬಂಧನದ ವಿಚಾರದ ರಿಪೋರ್ಟ್‌ಗಳನ್ನ ನಾವು ಕ್ಲೋಸ್‌ ಆಗಿ ಮಾನಿಟರ್‌ ಮಾಡ್ತಿದ್ದೇವೆ. ಈ ಕೇಸ್‌ನಲ್ಲಿ ನ್ಯಾಯೋಚಿತ, ಸಮಯೋಚಿತ ಪಾರದರ್ಶಕ ಕಾನೂನೂ ಪ್ರಕ್ರಿಯೆ ಆಗೋದನ್ನ ಎನ್‌ಕರೇಜ್‌ ಮಾಡ್ತೇವೆʼ ಅಂತೇಳಿದ್ರು. ಇದೀಗ ಭಾರತ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಅಮೆರಿಕದ ರಾಯಭಾರ ಕಚೇರಿ ಅಧಿಕಾರಿ ಗ್ಲೋರಿಯಾ ಬರ್ಬೆನಾ ಅವರಿಗೆ ಸಮನ್ಸ್‌ ಜಾರಿ ಮಾಡಿ, ಅಲ್ಲಿನ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ವಿದೇಶಾಂಗ ಇಲಾಖೆ ಸ್ಟೇಟ್‌ಮೆಂಟ್‌ ರಿಲೀಸ್‌ ಮಾಡಿ, ʻರಾಜತಾಂತ್ರಿಕತೆಯಲ್ಲಿ ದೇಶಗಳು ಇತರ ದೇಶಗಳ ಸಾರ್ವಭೌಮತೆ ಹಾಗೂ ಆಂತರಿಕ ವಿಚಾರಗಳಿಗೆ ಗೌರವ ಕೊಡ್ಬೇಕು. ಅದ್ರಲ್ಲೂ ಫೆಲೋ ಡೆಮಾಕ್ರಸಿಗಳ ವಿಚಾರವಾಗಿ ಇನ್ನೂ ಸೀರಿಯಸ್‌ ಆಗಿ ಇರ್ಬೇಕು. ಇಲ್ಲದಿದ್ರೆ ಇದು ಅನಾರೋಗ್ಯಕರ ಬೆಳವಣಿಗೆಗಳಿಗೆ ಕಾರಣ ಆಗ್ಬೋದು. ಭಾರತದ ಕಾನೂನಿನ ಪ್ರಕ್ರಿಯೆಗಳ ಬಗ್ಗೆ ಅವಲೋಕನ ಮಾಡೋದು ಅನಗತ್ಯʼ ಅಂತೇಳಿ ಅಮೆರಿಕಗೆ ಬುದ್ದಿ ಹೇಳಿದೆ.

ಆಪ್‌ನ ಘಟಾನುಘಟಿ ನಾಯಕರು ಜೈಲು ಸೇರಿರುವ ಬೆನ್ನಲ್ಲೇ ಬಿಜೆಪಿ ಮೆತ್ತಗೆ ಪಂಜಾಬ್‌ನಲ್ಲಿ ಆಪರೇಷನ್‌ ಶುರು ಮಾಡ್ಕೊಂಡಿದೆ. ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ ಇಬ್ಬರು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಲಂಧರ್‌ನ ಹಾಲಿ ಸಂಸದ ಸುಶೀಲ್‌ ಕುಮಾರ್‌ ರಿಂಕು ಮತ್ತು ಜಲಂಧರ್‌ ಪಶ್ಚಿಮ ಕ್ಷೇತ್ರದ ಶಾಸಕ ಶೀತಲ್‌ ಅಂಗುರಾಲ್‌ ಕಮಲ ಪಡೆಗೆ ಜಾಯಿನ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply