ಕ್ರೈಮಿಯಾ ಸೇತುವೆ ಸ್ಪೋಟಕ್ಕೆ ರಷ್ಯಾ ಪ್ರತೀಕಾರ: ಕ್ಷಿಪಣಿ ದಾಳಿಯಲ್ಲಿ ಯುಕ್ರೇನ್‌ನ 17 ಜನ ಸಾವು

masthmagaa.com:

ರಷ್ಯಾದಿಂದ ಕ್ರೈಮಿಯಾಕ್ಕೆ ಸಂಪರ್ಕ ಒದಗಿಸೋಕೆ ಇದ್ದ ಏಕೈಕ ರಸ್ತೆ ಸೇತುವೆ ಮೇಲೆ ಇತ್ತೀಚೆಗೆ ಟ್ರಕ್‌ ಸ್ಪೋಟಗೊಂಡಿತ್ತು. ಈ ಘಟನೆ ಯುಕ್ರೇನ್‌ ವಿರುದ್ದ ರಷ್ಯಾ ಹೆಚ್ಚಿನ ಆಕ್ರಮಣ ಮಾಡೋದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಬ್ರಿಡ್ಜ್‌ ಘಟನೆ ನಂತರ ಯುಕ್ರೇನ್‌ನ ಪ್ರದೇಶಗಳಲ್ಲಿ ಸರಣಿ ಸ್ಪೋಟಗಳು ನಡೆದಿವೆ. ರಾಜಧಾನಿ ಕಿಯೇವ್‌ನಲ್ಲಿ ಇಂದು ಬೆಳಿಗ್ಗೆ ಹಲವಾರು ಸ್ಪೋಟಗಳು ಸಂಭವಿಸಿವೆ. ಜೂನ್‌ 26ರಂದು ಕಿಯೇವ್‌ ಮೇಲೆ ಕೊನೆಯ ಬಾರಿ ಆಕ್ರಮಣ ಮಾಡಿದ್ದ ರಷ್ಯಾ, ಇದೀಗ ಮತ್ತೆ ತನ್ನ ದಾಳಿಯನ್ನ ಶುರು ಮಾಡಿದೆ. ಸೇತುವೆ ಸ್ಪೋಟಕ್ಕೆ ಯುಕ್ರೇನ್‌ ಕಾರಣ ಅಂತ ಆರೋಪಿಸಿರೊ ರಷ್ಯಾ ಈ ರೀತಿ ದಾಳಿಗಳನ್ನ ಮಾಡ್ತಿದೆ. ಇತ್ತ ಝಪೋರಿಜಜೀಯಾದಲ್ಲಿ ಕೂಡ ರಷ್ಯಾ ಮತ್ತೆ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಟ 13 ಜನ ಸಾವನ್ನಪ್ಪಿದ್ದಾರೆ ಹಾಗೂ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಂತ ಯುಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ. ಘಟನೆಯನ್ನ ಯುಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದು, ಶಾಂತಿಯುತ ಜನರ ಮೇಲೆ, ರಷ್ಯಾ ಯಾವುದೇ ಕರುಣೆಯಿಲ್ಲದೇ ದಾಳಿ ಮಾಡಿದೆ. ಜನರು ವಾಸ ಮಾಡೊ ಕಟ್ಟಡದ ಮೇಲಿನ ರಷ್ಯಾ ದಾಳಿ ʻabsolute evilʼ ಅಂದ್ರೆ ತುಂಬಾ ಕೆಟ್ಟ ನಡೆ ಅಂತ ಕರೆದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸೇತುವೆ ಸ್ಪೋಟದ ಬಗ್ಗೆ ಮಾತಾಡಿದ ಪುಟಿನ್, ಸೇತುವೆ ಮೇಲೆ ಸ್ಪೋಟವನ್ನ ನಡೆಸಿದ ಅಪರಾಧಿಗಳು, ಅದರ ಬಗ್ಗೆ ಬರೆದ ಲೇಖಕರು ಎಲ್ಲರೂ ಯುಕ್ರೇನ್‌ ಪರವಾಗಿ ಸೇವೆ ಸಲ್ಲಿಸುತ್ತಿರೊ ಸಿಕ್ರೇಟ್‌ ಏಜೆಂಟ್‌ಗಳು ಅಂತ ಆರೋಪಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರೊ ಸಮಿತಿ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಪುಟಿನ್‌ ಈ ರೀತಿ ಹೇಳಿದ್ದಾರೆ. ಅಂದ್ಹಾಗೆ ರಷ್ಯಾ ಹಾಗೂ ಕ್ರೈಮಿಯಾವನ್ನ ಸಂಪರ್ಕಿಸೊ 19 ಕಿಲೋ ಮೀಟರ್‌ ಸೇತುವೆ ಮೇಲೆ ಟ್ರಕ್‌ ಒಂದು ಸ್ಪೋಟಗೊಂಡಿತ್ತು. ಈ ಘಟನೆ ಪುಟಿನ್‌ರ ಜನ್ಮದಿನದ ಮರುದಿನವೇ ಆಗಿತ್ತು. ಇದು ಪುಟಿನ್‌ರಿಗೆ ಅವಮಾನ ಮಾಡೋಕೆ ಮಾಡಲಾಗಿದೆ ಅಂತ ಹೇಳಲಾಗಿತ್ತು. ಘಟನೆ ಹೊಣೆಯನ್ನ ಯುಕ್ರೇನ್‌ ಹೊತ್ತುಕೊಳ್ಳದೇ ರಷ್ಯಾ ವಿರುದ್ದ ಅಪಹಾಸ್ಯ ಮಾಡಿತ್ತು. ಹೀಗಾಗಿ ರಷ್ಯಾ ಇದಕ್ಕೆ ಪ್ರತೀಕಾರವಾಗಿ ಯುಕ್ರೇನ್‌ ಮೇಲೆ ಬಿರುಸಿನ ದಾಳಿ ಮಾಡಿದೆ.

-masthmagaa.com

Contact Us for Advertisement

Leave a Reply