ರಾಜ್ಯದ 17 ನದಿ ವಿಷಯುಕ್ತ! ಕಾದಿದೆ ಕೆಟ್ಟ ದಿನಗಳು!

masthmagaa.com:

ನಾಗರೀಕತೆಗಳ ಹುಟ್ಟಿಗೆ ಕಾರಣವಾಗಿ ಮಾನವನ ವಿಕಸನದ ಮೂಲ ಅಂತ ಕರೆಯಲಾಗುವ ನದಿಗಳು ಅದೇ ಮಾನವನಿಂದ ಕೊನೇ ದಿನಗಳನ್ನ ಎಣಿಸ್ತಿವೆ. ಈಗ್ಯಾಕೆ ಈ ವಿಚಾರ ಬಂತು ಅಂದ್ರೆ, ರಾಜ್ಯದ ಜೀವನಾಡಿಗಳು ಅಂತಲೇ ಕರೆಸಿಕೊಂಡಿರೋ ನದಿಗಳು ಭಯಾನಕ ರೀತಿಯಲ್ಲಿ ಮಲಿನವಾಗಿ ವಿಷಯುಕ್ತವಾಗ್ತಿವೆ ಅನ್ನೋ ವರದಿ ಎಲ್ಲರನ್ನೂ ಈಗ ಬೆಚ್ಚಿಬೀಳಿಸಿದೆ. ರಾಜ್ಯದಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಯನ್ನ ಸರಿಯಾಗಿ ಮಾಡದೇ ಇರೊ ಕಾರಣ, ಇಂದು ರಾಜ್ಯದ 17 ನದಿಗಳು ಕಲುಷಿತಗೊಂಡಿವೆ ಅಂತ ಇತ್ತೀಚಿನ ವರದಿಯಲ್ಲಿ ತಿಳಿದು ಬಂದಿದೆ. ಇದಷ್ಟೇ ಅಲ್ದೇ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗವನ್ನ ಉಂಟುಮಾಡುವ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರೋದು ಕಂಡು ಬಂದಿದೆ. 2018ರ ಸೆಂಟ್ರಲ್‌ ಪಲ್ಯುಶನ್‌ ಕಂಟ್ರೋಲ್‌ ಬೋರ್ಡ್‌ನ (CPCB) ದತ್ತಾಂಶದಿಂದ ರಾಜ್ಯದ ನದಿ ನೀರಿನ ಕಲುಷಿತದ ಬಗ್ಗೆ ತಿಳಿದು ಬಂದಿತ್ತು. ಆ ಟೈಮಲ್ಲಿ ನದಿ ನೀರಿನ ಸುರಕ್ಷತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಅಭಿವೃದ್ದಿಯನ್ನ ಮಾನಿಟರ್‌ ಮಾಡುವಂತೆ ಸೆಂಟ್ರಲ್‌ ಕಮಿಟಿಗೆ ಜವಾಬ್ದಾರಿ ನೀಡಲಾಗಿತ್ತು. ಆದ್ರೆ ಈವರೆಗೂ ರಾಜ್ಯದ ನದಿ ನೀರುಗಳಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. 2022-23ರ ಮಾಹಿತಿಯ ಪ್ರಕಾರ, ಶಿಂಷಾ, ಅರ್ಕಾವತಿ, ಮಲಪ್ರಭಾ, ಕೃಷ್ಣಾ, ಭೀಮಾ ನದಿಗಳಲ್ಲಿ ಹೆಚ್ಚಿನ ಕೋಲಿಫಾರ್ಮ ಬ್ಯಾಕ್ಟಿರಿಯಾ ಇರೋದು ಕಂಡು ಬಂದಿದೆ. CPCB (ಸೆಂಟ್ರಲ್‌ ಪಲ್ಯುಶನ್‌ ಕಂಟ್ರೋಲ್‌ ಬೋರ್ಡ್‌)ನ ಪ್ರಕಾರ ಈ ಕೋಲಿಫಾರ್ಮ ಬ್ಯಾಕ್ಟಿರಿಯಾಗಳ ಸಂಖ್ಯೆ ಪ್ರತಿ 100mlಗೆ 5 ಸಾವಿರಕ್ಕಿಂತ ಕಡಿಮೆ ಇರಬೇಕು. ಆದ್ರೆ, ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿ ನೀರಿನಲ್ಲಿ ಈ ಸಂಖ್ಯೆ 54 ಸಾವಿರ ಬಂದಿದೆ. ಹಾಗೂ ಅರ್ಕಾವತಿಯಲ್ಲಿ 24 ಸಾವಿರ, ತುಂಗಭದ್ರಾ ನದಿ ನೀರಿನಲ್ಲಿ 10 ಸಾವಿರ ಬ್ಯಾಕ್ಟಿರಿಯಾಗಳು ಕಂಡುಬಂದಿವೆ. ಈ ರೀತಿ ನದಿಗಳು ಮಲಿನವಾಗ್ತಿರೋದು ಮಾನವನ ವಿನಾಶದ ಆರಂಭ ಅಂತಲೇ ಹೇಳಬೋದು. ಯಾಕಂದ್ರೆ ನದಿಗಳು ಈ ರೀತಿ ಮಲಿನವಾಗ್ತಿರೋದು ಕೇವಲ ಮನುಷ್ಯರಿಗೆ ಮಾತ್ರ ಅಲ್ಲ ಇಡೀ ಜೀವಸಂಕುಲಕ್ಕೆ ಆಪತ್ತು. ಕಾರಣ ಇಂದು ನಾವು ಬಳಸ್ತಿರೋ ಹೆಚ್ಚಿನ ನೀರಿನ ಮೂಲ ನದಿಯದ್ದು. ಅಂತರ್ಜಲ ಮಟ್ಟ ಕುಸಿದ ಮೇಲಂತೂ ನದಿಯ ಮೇಲಿನ ಅವಲಂಬನೆ ಜಾಸ್ತಿನೇ ಆಗಿದೆ. ಮಳೆ ಬರುತ್ತೆ ಕರೆ ಕಟ್ಟೆ ತುಂಬುತ್ತೆ ಅನ್ನೋದೆಲ್ಲಾ ತುಂಬಾ ಹಿಂದಿನ ಮಾತು. ಹೀಗಾಗಿ ನಮ್ಮ ನದಿಗಳೇ ಸಧ್ಯಕ್ಕೆ ನಮಗಿರೋ ಏಕೈಕ ನೀರಿನ ಮೂಲ. ನದಿಗಳು ಮಲಿನಗೊಂಡ್ರೆ ಮೊದಲಿಗೆ ನದಿಗಳಲ್ಲಿರೋ ಕೋಟ್ಯಾನುಕೋಟಿ ಜೀವರಾಶಿಗಳು, ಜಲಚರ ಮರಣಹೊಂದ್ತವೆ. ನೀರನ್ನ ಸೇವಿಸುವ ಅನೇಕ ಪ್ರಾಣಿಪಕ್ಷಿಗಳು ಸಾವೀಗೀಡಾಗ್ತವೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮನುಷ್ಯನ ಕುಡಿಯುವ ನೀರಿಗೆ ಅಭಾವ ಉಂಟಾಗುತ್ತದೆ. ಅಂತರ್ಜಲ ಕಲುಷಿತವಾಗುತ್ತದೆ. ಇದರಿಂದ ಜೀವ ವೈವಿಧ್ಯತೆಯ ನಾಶವಾಗುತ್ತೆ. ಹೀಗೆ ನದಿಯ ಮಲಿನದಿಂದ ಇಡೀ ಭೂಮಿಯೇ ವಿಷಯುಕ್ತವಾಗುತ್ತೆ. ಭೂಮಿ ಜೀವಂತ ಗ್ರಹ ಅನ್ನೋ ಹಣೆಪಟ್ಟಿಯನ್ನ ಕಳೆದುಕೊಳ್ಳಬೇಕಾಗುತ್ತೆ. ನದಿಗಳು ಮುಂದಿನ ಪೀಳಿಗೆಗೆ ಆಧಾರಗಳಾಗಿದ್ದು ಅವು ಎಷ್ಟು ಸುಭೀಕ್ಷೆಯಿಂದ ಇರ್ತವೋ ಅಷ್ಟು ನಾವೂ ಕೂಡ ಭೂಮಿ ಕೂಡ ಚೆನ್ನಾಗಿರ್ತವೆ ಅಂತ ಅರ್ಥ. ಹೀಗಾಗಿ ನದಿಗಳನ್ನ ಕಾಪಾಡೋದು ಸ್ವಚ್ಚವಾಗಿಟ್ಟುಕೊಳ್ಳೋದು ಎಲ್ಲರ ಕರ್ತವ್ಯ.

-masthmagaa.com

Contact Us for Advertisement

Leave a Reply