ಕನ್ನಡಿಗರೂ ಎಂದೂ ಮರೆಯಲಾಗದ “ಒಂದು ಮುತ್ತಿನ ಕಥೆ”!

ಒಂದು ಮುತ್ತಿನ ಕಥೆ ಸಿನಿಮಾ ಸಿನಿಮಾ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇರತ್ತೆ. ಈ ಸಿನಿಮಾ ಕನ್ನಡದ ಎರಡು ಮೇರು ಪ್ರತಿಭೆಗಳ ಸಮಾಗಮ ಅಂತಾನೇ ಹೇಳಬಹುದು. ಅಣ್ಣಾವ್ರ ಅದ್ಬುತವಾದ ಅಭಿನಯ ಮತ್ತು ಶಂಕರ್ ನಾಗ್ ಅವರ ಅಮೋಘವಾದ ನಿರ್ದೇಶನ ಈ ಸಿನಿಮಾ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೆ ಇಡೀ ಈ ಭಾರತ ತಿರುಗಿ ನೋಡುವಂತೆ ಮಾಡಿತ್ತು. ಬಹಳ ವಿಭಿನ್ನ ಕಥಾ ಹಂದರ ಹೊಂದಿದ್ದ ಈ ಸಿನಿಮಾ ತಾಂತ್ರಿಕತೆಯೂ ಸೇರಿದಂತೆ ಬೇರೆ ಬೇರೆ ವಿಶೇಷವಾದ ಅಂಶಗಳಿಂದ ಒಂದು ವಿಶಿಷ್ಟವಾದ ಸಿನಿಮಾ ಎನಿಸಿಕೊಂಡಿತ್ತು. ಹಾಗಾದ್ರೆ ಬನ್ನಿ ಈ ಸಿನಿಮಾದ ವಿಶೇಷತೆಗಳೇನು ಅನ್ನೋದನ್ನ ಮುಂದೆ ತಿಳಿದುಕೊಳ್ಳೋಣ.
ಒಬ್ಬ ಸಾಮಾನ್ಯ ಮೀನುಗಾರ ಐತು, ಅವನಿಗೆ ಸಮುದ್ರದಲ್ಲಿ ಸಿಗುವ ಒಂದು ಮುತ್ತು, ಹಾಗೆ ಅವನು ವಾಸ ಮಾಡುವ ಹಾಡಿಯ ಸುತ್ತಲೂ ಸುತ್ತುವ ಸಮಸ್ಯೆಗಳು, ಆ ಒಂದು ಮುತ್ತಿನಿಂದಾಗಿ ಆತನ ಜೀವನದಲ್ಲಿ ಆಗುವ ಬದಲಾವಣೆಗಳು, ಅವನಿಗೆ ಬರುವ ಸಮಸ್ಯೆಗಳು ಒಟ್ನಲ್ಲಿ ಸಂಪತ್ತು ಸಮಾಧಾನ ತರಲ್ಲ, ಸಂಪತ್ತು ಶಾಶ್ವತ ಕೂಡ ಅಲ್ಲ, ಸಂಪತ್ತಿನ ಹಿಂದೆ ಬಿದ್ದರೆ ಆಪತ್ತು ತಪ್ಪಿದ್ದಲ್ಲ. ಆಸೆಯೇ ದುಃಖಕ್ಕೆ ಮೂಲ ಎಂದು ಸಾರುವ ಕಥೆಯೇ ಈ ಒಂದು ಮುತ್ತಿನ ಕಥೆ. 1987 ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನ ಪದ್ಮಶ್ರೀ ಎಂಟರ್ಪ್ರೈಸಸ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿತ್ತು. ಹಾಗೆ ವಜ್ರೇಶ್ವರಿ ಕಂಬೈನ್ಸ್ ಚಿತ್ರ ಸಂಸ್ಥೆ ಅಡಿಯಲ್ಲಿಿಈ ಸಿನಿಮಾ  ಬಿಡುಗಡೆಯಾಗಿತ್ತು.
ಶಂಕರ್ ನಾಗ್ ಅವರ ಬಗ್ಗೆ ಹೇಳೋದಾದ್ರೆ ಅವರು ಬದುಕಿದ್ದು 35 ವರ್ಷ ಆದ್ರೂ ಕೂಡ ನೂರಾರು ವರುಷ ಜ್ಞಾಪಕ ಇಟ್ಟುಕೊಳ್ಳಬಹುದಾದಂತಹ ಕೆಲಸಗಳನ್ನ ಸಿನಿಮಾ ಮತ್ತು ರಂಗಭೂಮಿಯಲ್ಲಿ ಮಾಡಿದ್ರು. ಈ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಸಾಮಾನ್ಯ ಮೀನುಗಾರನ ಜೀವನದಲ್ಲಿ ಬರುವ ಒಂದು ಮುತ್ತು ಮತ್ತು ಅದರಿಂದ ಅವನಿಗೆ ಬರುವ ಆಪತ್ತು ಇದೆರಡು ವಿಷಯಗಳನ್ನ ಇಟ್ಟುಕೊಂಡು ಒಂದು ಅದ್ಭುತವಾದ ಕಥೆ ಮಾಡಿದ್ದರು ಶಂಕರ್ ನಾಗ್.  ಲೇಖಕ ಜಾನ್ ಸ್ಟೈನ್ ಬೆಕ್ ಅವರ  ‘ದಿ ಪರ್ಲ್’ ಎಂಬ ಪುಸ್ತಕವನ್ನ ಆಧಾರಿಸಿ ಚಿತ್ರಕಥೆ ಮಾಡಿದ್ದ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಒಂದು ವಿಭಿನ್ನ ಪ್ರಯೋಗ ಆಗಿತ್ತು ಅನ್ನುವುದರಲ್ಲಿ ಎರಡು ಮಾತಿಲ್ಲ.
ಇನ್ನು ಅಣ್ಣಾವ್ರ ವಿಷಯಕ್ಕೆ ಬಂದ್ರೆ ತಮ್ಮ 58 ನೇ ವಯಸಿನಲ್ಲಿ ನೀರಿನ ಒಳಗೆ ಹೊಡೆದಾಡುವ ದೃಶ್ಯಗಳಲ್ಲಿ ಲೀಲಾಜಾಲವಾಗಿ ನಟಿಸುವ ಮೂಲಕ ತನ್ನೊಳಗಿದ್ದ ಕಲಾವಿದನ ತೃಪ್ತಿ ಪಡಿಸುವಲ್ಲಿ ಅವರು ಪಟ್ಟಿರುವ ಶ್ರಮ ನಿಜವಾಗಿಯೂ ಮೆಚ್ಚುವಂತದ್ದು. ಇನ್ನು ಅವರ ಅಭಿನಯದ ಬಗ್ಗೆ ಪ್ರತ್ಯೇಕವಾಗಿ ಹೇಳೋದೇ ಬೇಡ ಬಿಡಿ.
ಅಂದಹಾಗೆ ಒಂದು ಮುತ್ತಿನ ಕಥೆ ಸಿನಿಮಾ ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಂಡರ್ ವಾಟರ್ ನಲ್ಲಿ ಚಿತ್ರೀಕರಿಸಿದ ಮೊದಲ ಚಿತ್ರ ಕೂಡ ಹೌದು.
ಸಾಗರದಾಳದಲ್ಲಿ ಶೂಟಿಂಗ್ ಮಾಡಬೇಕು ಅಂತ ನಿರ್ಧಾರ ಮಾಡಿದ ಶಂಕರ್ ನಾಗ್ ಅವರು ಅದಕ್ಕಾಗಿ ಕೆನಡಾಗೆ ಹೋಗಿ ನೀರಿನಲ್ಲಿ ಚಿತ್ರೀಕರಿಸುವ ಕ್ಯಾಮರಾವನ್ನು ತಂದರು. ಇದೇ ಚಿತ್ರಕ್ಕಾಗಿ ಕೃತಕ ಆಕ್ಟೋಪಸ್ ಲಂಡನ್ನಿಂದ ತರಿಸಲಾಗಿತ್ತು ಅಷ್ಟೇ ಅಲ್ಲ ಮಾಲ್ಡೀವ್ಸ್ ನ ಸಮುದ್ರವೊಂದರಲ್ಲಿ ಈ ಅಂಡರ್ ವಾಟರ್ ಸೀಕ್ವೆನ್ಸ್ ಗಳನ್ನ ಚಿತ್ರೀಕರಣ ಮಾಡಲಾಗಿತ್ತು.
ಈ ಚಿತ್ರದಲ್ಲಿ ಅರ್ಚನ, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ರಮೇಶ್ ಭಟ್,ದೊಡ್ಡಣ್ಣ ಮುಂತಾದ ಮಹಾನ್ ಕಲಾವಿದರು ನಟಿಸಿದ್ದಾರೆ. ಶಂಕರ್ ನಾಗ್ ಅವರು ನಿರ್ದೇಶಿಸಿದ, ಡಾ|| ರಾಜಕುಮಾರ್ ಅಭಿನಯಿಸಿರುವ ಈ ಒಂದು ಮುತ್ತಿನ ಕಥೆ ಎಂದೂ ಮರೆಯದ ಸಿನಿಮಾವಾಗಿ ಕನ್ನಡಿಗರ ಮನಸಿನಲ್ಲಿ ಇವತ್ತಿಗೂ ಉಳಿದುಕೊಂಡಿದೆ.
Contact Us for Advertisement

Leave a Reply