ಹಮಾಸ್ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್! 3 ಬಿಲ್ಡಿಂಗ್ ಡಮಾರ್!

masthmagaa.com:

ಇಸ್ರೇಲ್-ಪ್ಯಾಲಸ್ಟೀನ್ ಸಂಘರ್ಷ ಮುಂದುವರಿದಿದೆ. 6ನೇ ದಿನವೂ ಹಮಾಸ್ ಪಡೆ ಇಸ್ರೇಲ್ ಮೇಲೆ ರಾಕೆಟ್ ಮಳೆ ಮುಂದುವರಿಸಿದ್ದು, ಇಸ್ರೇಲ್ ಕೂಡ ಗಾಝಾಪಟ್ಟಿ ಮೇಲೆ ಏರ್ ಸ್ಟ್ರೈಕ್ ಮುಂದುವರಿಸಿದೆ. ಇಸ್ರೇಲ್ ವಾಯುದಾಳಿಯಲ್ಲಿ ಗಾಝಾದ ಮೂರು ಬಹುಮಹಡಿ ಕಟ್ಟಡಗಳು ಉರುಳಿಬಿದ್ದಿದ್ದು, ಒಂದೇ ದಿನ 26ಜನ ಪ್ರಾಣ ಕಳೆದುಕೊಂಡಿದ್ದಾರೆ. 50ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಇದು ಗಲಾಟೆ ಶುರುವಾದ ಬಳಿಕ ಇಸ್ರೇಲ್ ನಡೆಸಿದ ದಾಳಿಗಳಲ್ಲೇ ಅತಿದೊಡ್ಡ ದಾಳಿ ಅಂತ ವರದಿಯಾಗಿದೆ. ಈ ಸಲದ ಏರ್ ಸ್ಟ್ರೈಕ್ನಲ್ಲಿ ಹಮಾಸ್ ನ ಟಾಪ್ ಲೀಡರ್ ಒಬ್ಬನ ಮನೆಯನ್ನ ಪುಡಿಗಟ್ಟಿದ್ದೇವೆ ಅಂತ ಇಸ್ರೇಲ್ ಹೇಳಿದೆ. ಅಂತಾರಾಷ್ಟ್ರೀಯ ಸಮುದಾಯ ಕದನ ವಿರಾಮ ತರಲು ಪ್ರಯತ್ನ ಪಡ್ತಿದೆ. ಅದು ಸಾದ್ಯ ಆಗೋದರ ಒಳಗೆ, ಎಷ್ಟಾಗುತ್ತೋ ಅಷ್ಟು ಹಮಾಸ್ ಪಡೆಯನ್ನ ಪುಡಿಗಟ್ಟಬೇಕು ಅಂತಾ ವಿಪರೀತ ವಾಯುದಾಳಿ ನಡೆಸ್ತಿದೆ ಇಸ್ರೇಲ್. ಹಮಾಸ್ ಕೂಡ ಇದುವರೆಗೆ ಹತ್ತಿರ ಹತ್ತಿರ 2 ಸಾವಿರ ರಾಕೆಟ್ ಹಾರಿಸಿದೆ. ಹೆಚ್ಚಿನವನ್ನ ಇಸ್ರೇಲ್ ನ ಐರನ್ ಡೋಮ್ ಹೊಡೆದುರುಳಿಸಿದ್ದರೂ, ಕೆಲ ರಾಕೆಟ್ ಗಳು ಇಸ್ರೇಲ್ ಕಟ್ಟಡಗಳ ಮೇಲೆ ಬಿದ್ದು ಸಾವು ನೋವು ಕೂಡ ಸಂಭವಿಸಿದೆ. ಈ ಮಧ್ಯೆ ಪೋಪ್ ಫ್ರಾನ್ಸಿಸ್, ಇಸ್ರೇಲ್ – ಪ್ಯಾಲೆಸ್ಟೀನ್ ಹಿಂಸಾಚಾರವನ್ನ ಖಂಡಿಸಿದ್ದು ಶಾಂತಿ ಸ್ಥಾಪನೆಗೆ ಕರೆ ನೀಡಿದ್ದಾರೆ. ಜೊತೆಗೆ ಅಮೆರಿಕದ ಹಲವು ನಗರಗಳಲ್ಲೂ ಗಾಝಾ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್ ಪರ ವಿರೋಧ ಪ್ರತಿಭಟನೆಗಳು ಆಗಿವೆ. ಕೆಲವರು ಇಸ್ರೇಲ್ ಕ್ರಮ ಸಮರ್ಥಿಸಿಕೊಂಡಿದ್ದರೆ, ಇನ್ನೂ ಕೆಲವರು ಗಾಝಾ ಪರವಾಗಿ ಪ್ರತಿಭಟನೆ ಮಾಡಿದ್ದಾರೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೂಡ ಇಸ್ರೇಲ್ ವಾಯುದಾಳಿಯನ್ನ ಖಂಡಿಸಿದ್ದು, ಆಸ್ಪತ್ರೆ ಹಾಗೂ ಜನವಸತಿ ಕಟ್ಟಡಗಳ ಮೇಲೆ ದಾಳಿ ನಡೆದರೆ ಅದು ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಅಂತ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಅವರ ವಕ್ತಾರ ಹೇಳಿದ್ದಾರೆ. ಇಸ್ರೇಲ್ ವಾಯುದಾಳಿಯಲ್ಲಿ ಗಾಝಾದಲ್ಲಿ 13 ಮಹಡಿಯ ಕಟ್ಟಡವೊಂದು ನೆಲಸಮವಾಗಿದ್ದು ಅದರಲ್ಲಿ ಕತಾರ್ ಮೂಲದ ಅಲ್ ಜಝೀರಾ ಹಾಗೂ ಅಸೋಸಿಯೇಟೆಡ್ ಪ್ರೆಸ್ ನ ಕಚೇರಿಗಳು ಇದ್ದವು ಅನ್ನೋದು ಗಮನಾರ್ಹ.

-masthmagaa.com

Contact Us for Advertisement

Leave a Reply