ಚೀನಾದ ವಿರುದ್ದ ತಿರುಗಿ ಬಿದ್ದ ಪಾಕಿಸ್ತಾನ! ನಿಮ್ಮದನ್ನ ನೀವೇ ನೋಡ್ಕೋಬೇಕು ಅಂತ ಗುಟುರು!

masthmagaa.com:

ದಿವಾಳಿಯಾಗೋದ್ರ ಕಡೆಗೆ ಶರವೇಗದಲ್ಲಿ ಓಡ್ತಿರೋ ಪಾಕಿಸ್ತಾನ ಈಗ ತಮ್ಮ ಆಪತ್ಕಾಲದ ಮಿತ್ರ, ತಮ್ಮ ಕುಚ್ಚಿಕ್ಕು, ತಮ್ಮ ಐರನ್‌ ಬ್ರದರ್‌ ಇನ್ನೂ ಏನೇನೇನೋ ಆಗಿರೋ ಚೀನಾ ವಿರುದ್ದವೇ ತಿರುಗಿ ಬಿದ್ದಿದೆ. ಪಾಕಿಸ್ತಾನದಲ್ಲಿ ಎಲ್ಲಾ ಚೀನಿಯರಿಗೂ ನಾವು ರಕ್ಷಣೆ ಕೊಡೋಕೆ ಆಗಲ್ಲ ಅಂತ ಪಾಕಿಸ್ತಾನದ ಪಂಜಾಬ್‌ ಸರ್ಕಾರ ಬಿಗ್‌ ಸ್ಟೇಟ್‌ ಮೆಂಟ್‌ ರಿಲೀಸ್‌ ಮಾಡಿದೆ. ಕಳೆದ ಕೆಲ ತಿಂಗಳುಗಳಿಂದ ಚೀನಿ ನಾಗರೀಕರ ಮೇಲೆ ಹಾಗೂ ಚೀನಾದ ಹೂಡಿಕೆಗಳ ಮೇಲೆ ಭಯೋತ್ಪಾದಕ ದಾಳಿಗಳು ವಿಪರೀತವಾಗಿದ್ದು ಅದಕ್ಕೆ ರಕ್ಷಣೆ ಕೊಡಬೇಕು ಅಂತ ಚೀನಾದ ಜಿನ್‌ ಪಿಂಗ್‌ ಸರ್ಕಾರ ಪಾಕಿಸ್ತಾನಕ್ಕೆ ಪದೇ ಪದೇ ಹೇಳ್ತಾನೇ ಬಂದಿತ್ತು. ಇದಕ್ಕೆ ಪಾಕಿಸ್ತಾನ ಕೂಡ ಈ ಮುಂಚೆ ಚೆನ್ನಾಗಿಯೇ ತಲೆ ಅಡಾಸ್ತಾ ಇತ್ತು. ಆದ್ರೆ ಈಗ ಪಾಕಿಸ್ತಾನನೇ ಉಸಿರುಗಟ್ಟೋ ಪರಿಸ್ಥಿತಿಯಲ್ಲಿದೆ. ಬೆಲೆ ಏರಿಕೆ, ಆರ್ಥಿಕ ಕುಸಿತ, ವಿದೇಶಿ ವಿನಿಮಯ ಕೊರತೆ, ಉಗ್ರದಾಳಿಗಳು, ಹೀಗೆ ಎಲ್ಲವೂ ಪಾಕಿಸ್ತಾನದ ಎದೆ ಮೇಲೆ ಒರಗಿದೆ. ಸಾಲ ಸಾಲ ಅಂತ ಇಡೀ ಭೂಮಂಡಲವನ್ನ ಒಂದು ರೌಂಡು ತಿರ್ಕೊಂಡು ಬಂದ್ರೂ ಸಹ ಪಾಕಿಸ್ತಾನಕ್ಕೆ ಯಾರೂ ಕೂಡ ಸಹಾಯ ಮಾಡ್ತಿಲ್ಲ. ಗಲ್ಫ್‌ ದೇಶಗಳು ಯುರೋಪ್‌ ದೇಶಗಳು ಒಂದಷ್ಟು ಹಣ ಕೊಟ್ರೂ ಕೂಡ ಅದೆಲ್ಲಾ ಬಿಡಿಗಾಸು.. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅಂತಾರಲ್ಲ ಹಾಗೇ. ಇನ್ನು ಯಾರೂ ಕೊಡದಿದ್ರೆ ನನಗೆ ನಮ್ಮ ಬ್ರದರ್‌ ಇದಾರೆ ಅನ್ಕೊಂಡು ಚೀನಾವನ್ನ ನೋಡಿದ್ರೂ ಕೂಡ ಚೀನಾದವರು ಸಹ ಈಗ ಪಾಕಿಸ್ತಾನಿಯರಿಗೆ ಭಿಕ್ಷೆ ಕೊಡ್ತಾ ಇಲ್ಲ. ಹೀಗಿರೋವಾಗ ಪಾಕಿಸ್ತಾನ ಕೂಡ ಇನ್ನೇನ್‌ ಮಾಡುತ್ತೆ. ಪಾಕ್‌ನ ಪರಿಸ್ಥಿತಿ ಈಗ ಒಂದು ರೀತಿ ಬಾಲ ಸುಟ್ಟ ಬೆಕ್ಕಿನಂತಿದೆ. ಅದರ ಹತ್ರ ಯಾರು ಹೋದ್ರೂ ಸಹ ಕಚ್ಚುತ್ತೆ. ಅದೇ ರೀತಿ ಈಗ ಚೀನಾ ವಿರುದ್ದನೇ ತಿರುಗಿನಿಂತಿದೆ. ಮೊನ್ನೆ ಪಾಕಿಸ್ತಾನದ ಪೇಷಾವರದಲ್ಲಿ ಉಗ್ರದಾಳಿಯಾಗಿ ಸುಮಾರು 100ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ರು. ಅದಾದ ನಂತರ ಪಾಕಿಸ್ತಾನದಲ್ಲಿರುವ ವಿದೇಶಿಯರಿಗೆ ಅದ್ರಲ್ಲೂ ಚೀನಿಯರಿಗೆ ತುಂಬಾ ಭಯ ಶುರುವಾಗಿದೆ. ತುಂಬಾ ಹಿಂದಿನಿಂದಲೂ ಪಾಕಿಸ್ತಾನದಲ್ಲಿ ಚೀನಿಯರನ್ನ ಗುರಿಯಾಗಿಸಿಕೊಂಡು ದಾಳಿ ಮಾಡೋದು ಸರ್ವೇ ಸಾಮಾನ್ಯ. ಹೀಗಾಗಿ ಚೀನಾ ನಾಗರೀಕರಿಗೆ ರಕ್ಷಣೆ ಕೊಡಬೇಕು ಅಂತ ಚೀನಾದ ಅಧಿಕಾರಿಗಳು ಪಾಕ್‌ ಸರ್ಕಾರಕ್ಕೆ ಒತ್ತಡ ಹೇರಿದ್ರು. ಅದಕ್ಕೆ ಈಗ ಪಾಕಿಸ್ತಾನದ ಪಂಜಾಬ್‌ನಲ್ಲಿ ಆಡಳಿತ ಮಾಡ್ತಿರೋ ಇಮ್ರಾನ್‌ ಪಕ್ಷದ ಸರ್ಕಾರ ನಾವು ಎಲ್ರಿಗೂ ಭದ್ರತೆ ಕೊಟ್ಕೊಂಡು ಕೂತಿರೋಕೆ ಸಾಧ್ಯವಿಲ್ಲ. ಬೇಕಿದ್ರೆ ನೀವೆ ಪ್ರೈವೇಟ್‌ ಆಗಿ ಸೆಕ್ಯೂರಿಟಿಯನ್ನ ನೇಮಿಸಿಕೊಳ್ಳಿ..ಯಾರು ಪಾಕಿಸ್ತಾನದಲ್ಲಿ ಕೆಲಸ ಮಾಡ್ತಿದ್ದಾರೋ ಅಂತ ಚೀನಿಯರು ತಮ್ಮ ಭದ್ರತೆಯ ಅರೆಂಜ್‌ಮೆಂಟ್‌ನ್ನ ತಾವೇ ಮಾಡಿಕೊಳ್ಳಲಿ ಅಂತ ಹೇಳಿದೆ. ಇದೇ ವೇಳೆ ನಮ್ಮ ಕಾನೂನಿನ ಅನ್ವಯ ಗೌರ್ನಮೆಂಟ್‌ ಕೆಲಸಗಳಿಗೆ ಬಂದ ಅಧಿಕಾರಿಗಳಿಗೆ ಬೇಕಿದ್ರೆ ನಾವು ಭದ್ರತೆ ಕೊಡ್ತೀವಿ. ಹಾಗಂತ ಇದು ಎಲ್ರಿಗೂ ಅಪ್ಲೈ ಆಗಲ್ಲ ಅಂತ ಪಾಕಿಸ್ತಾನ ಹೇಳಿದೆ. ಇನ್ನು ಈ ಕಡೆ ಪಾಕಿಸ್ತಾನದ ವಿದೇಶಿ ವಿನಿಮಯ ಸಹ ಬರಿದಾಗ್ತಾ ಹೋಗ್ತಾಯಿದೆ. ಜನವರಿ 27ರಿಂದ ಇಲ್ಲಿತನಕ ಪಾಕಿಸ್ತಾನದ ವಿದೇಶಿ ವಿನಿಮಯದಲ್ಲಿ ಶೇ 16ರಷ್ಟು ಕುಸಿತ ಆಗಿದೆ. ಅಂದ್ರೆ ಈಗ ಪಾಕಿಸ್ತಾನದ ಹತ್ರ ಸಧ್ಯಕ್ಕೆ ಇರೋ ಫಾರೆಕ್ಸ್‌ ರಿಸರ್ವ್‌ ಕೇವಲ 3 ಬಿಲಿಯನ್‌ ಡಾಲರ್‌ ಮಾತ್ರ. ಅಂದ್ರೆ 24 ಸಾವಿರ ಕೋಟಿ ಭಾರತೀಯ ರೂಪಾಯಿ. ಈ ದುಡ್ಡಲ್ಲೇ ಅವರು ಹೊರಗಡೆಯಿಂದ ಏನಾದ್ರೂ ತರಿಸಿಕೊಂಡು 23 ಕೋಟಿ ಜನಸಂಖ್ಯೆಯ ಹಸಿವನ್ನ ತಣಿಸಬೇಕು. ಈ ಹಣ ಕೇವಲ ಎರಡರಿಂದ ಮೂರುವಾರಗಳಿಗೆ ಮಾತ್ರ ಸಾಕಾಗುವಷ್ಟು ದುಡ್ಡು ಅಂತ ಅಲ್ಲಿನ ಆರ್ಥಿಕ ತಜ್ಞರೇ ಹೇಳ್ತಾ ಇದ್ದಾರೆ. ಫಾರೆಕ್ಸ್‌ ರಿಸರ್ವ್‌ನಲ್ಲಿ ಪಾಕ್‌ ಎಷ್ಟು ದಯನೀಯ ಪರಿಸ್ಥಿತಿ ತಲುಪಿದೆ ಅಂದ್ರೆ ನೇಪಾಳಕ್ಕಿಂತ ಅರ್ಧದಷ್ಟು ಹಣ ಕೂಡ ಪಾಕಿಸ್ತಾನದ ಹತ್ರ ಇಲ್ಲ ಈಗ. ನೇಪಾಳ ಬಿಡಿ, ಪಾಕಿಸ್ತಾನದಿಂದ ಬೇರೆಯಾಗಿ ಪಾಕ್‌ಗಿಂತ 25 ವರ್ಷ ಲೇಟ್‌ಆಗಿ ಹುಟ್ಟಿದ ಬಾಂಗ್ಲಾದ ಹತ್ರ ಕೂಡ ಈಗ ಪಾಕಿಸ್ತಾನಕ್ಕಿಂತ ಹತ್ತುಪಟ್ಟು ಜಾಸ್ತಿ ವಿದೇಶಿ ವಿನಿಮಯ ಇದೆ. ಇನ್ನು ಪಾಕಿಸ್ತಾನಕ್ಕೆ ಈಗ ಹಣ ಕೊಡೋಕೆ ಇರೋ ಏಕೈಕ ಸಂಸ್ಥೆ ಅಂದ್ರೆ ಅದು ಐಎಂಎಫ್‌. ಆ ಸಂಸ್ಥೆಯ ತಂಡ ಕೂಡ ಪಾಕಿಸ್ತಾನದಲ್ಲಿ ಬಂದು ಪರಿಶೀಲನೆ ಮಾಡಿ, ಸಾಲ ಕೊಡಬೇಕು ಅಂದ್ರೆ ಕೆಲವೊಂದು ಕಂಡೀಶನ್‌ಗಳನ್ನ ಹಾಕಿದೆ. ಪಾಕಿಸ್ತಾನದಲ್ಲಿ ಕೊಡ್ತಿರೋ ಸಬ್ಸಿಡಿಗಳನ್ನ ಹಾಗೇ ಕಡಿಮೆ ಮಾಡಬೇಕು ಅಂತ ಹೇಳಿದೆ. ಆರಂಭದಲ್ಲಿ ಇಲ್ಲ ನಾವು ಕಡಿಮೆ ಮಾಡಲ್ಲ ಅಂತಿದ್ದ ಪಾಕ್‌ ಸರ್ಕಾರ ಕೊನೆಗೆ ಅದಕ್ಕೂ ಒಪ್ಪಿಕೊಂಡಿದೆ. ಖುದ್ದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಈ ಬಗ್ಗೆ ಹೇಳಿಕೆಯನ್ನ ಕೊಟ್ಟಿದ್ದಾರೆ. ನಮ್ಮ ಆರ್ಥಿಕ ಪರಿಸ್ಥಿತಿ ಊಹಿಸೋಕೂ ಸಾಧ್ಯವಾಗದ ಸ್ಥಿತಿಯಲ್ಲಿದೆ. ನಮಗೆ ಅವರ ಷರತ್ತುಗಳನ್ನ ಒಪ್ಪಿಕೊಳ್ಳಲೇಬೇಕಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply