ಸೊಲೋಮನ್ ಐಲ್ಯಾಂಡ್​​ನಲ್ಲಿ ಹಿಂಸೆ, ಸೇನೆ ಕಳುಹಿಸಿದ ಆಸ್ಟ್ರೇಲಿಯಾ!

masthmagaa.com:

ಸೊಲೋಮನ್ ಐಲ್ಯಾಂಡ್​.. ಆಸ್ಟ್ರೇಲಿಯಾ ಪಕ್ಕದಲ್ಲಿರೋ ನೂರಾರು ದ್ವೀಪಗಳನ್ನು ಒಳಗೊಂಡ ಒಂದು ದ್ವೀಪರಾಷ್ಟ್ರ.. ಇಲ್ಲೀಗ ಹಿಂಸಾಚಾರ ಭುಗಿಲೆದ್ದಿದೆ. 7 ಲಕ್ಷ ಜನಸಂಖ್ಯೆ ಇರೋ ಈ ದೇಶದಲ್ಲಿ ಚೀನಾದ ಹಸ್ತಕ್ಷೇಪ ಜಾಸ್ತಿಯಾಗ್ತಿದೆ. ಪ್ರಧಾನಿ ಮನಾಸೆ ಸೊಗಾವಾರೇ ಚೀನೀ ಕೈಗೊಂಬೆಯಾಗಿದ್ದಾರೆ. ಈಗಿಂದೀಗಲೇ ರಾಜೀನಾಮೆ ನೀಡಬೇಕು ಅನ್ನೋದು ಪ್ರತಿಭಟನಾಕಾರರ ಒತ್ತಾಯವಾಗಿದೆ. ಕೊಡಲಿ, ಚಾಕು ಹಿಡಿದ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದ್ದಾರೆ. ಚೀನಾ ಟೌನ್​​ನಲ್ಲಿ ಕಟ್ಟಡಕ್ಕೆ ಬೆಂಕಿ ಹಾಕಿದ್ದು, ಲೂಟಿಗಳಲ್ಲಿ ತೊಡಗಿದ್ದಾರೆ. ಸಂಸತ್​​ಗೂ ನಿನ್ನೆ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿದೆ. ಇದ್ರ ಬೆನ್ನಲ್ಲೇ ಪ್ರಧಾನಿ ಸೊಗಾವಾರೆ ಮನವಿ ಮೇರೆಗೆ ಆಸ್ಟ್ರೇಲಿಯಾ ಮತ್ತು ಪಕ್ಕದ ಪಪುವಾ ನ್ಯೂ ಗಿನಿಯಾದಿಂದ ಪೀಸ್​ ಕೀಪಿಂಗ್ ಯೋಧರನ್ನು ಕಳುಹಿಸಿಕೊಡಲಾಗಿದೆ. ಇದಕ್ಕೆಲ್ಲಾ ಬಾಹ್ಯಶಕ್ತಿಯ ಕೈವಾಡವೇ ಕಾರಣ ಅಂತ ಪ್ರಧಾನಿ ಸೊಗಾವಾರೇ ಆರೋಪಿಸಿದ್ದಾರೆ. ಚೀನಾ ಕೂಡ ಸೊಲೋಮನ್ ಐಲ್ಯಾಂಡ್​ನಲ್ಲಿರೋ​​​ ತನ್ನ ದೇಶದ ಪ್ರಜೆಗಳನ್ನು ರಕ್ಷಿಸುವಂತೆ ಸೂಚಿಸಿದೆ.

ಅಂದಹಾಗೆ ಈ ದ್ವೀಪರಾಷ್ಟ್ರದ ಇತಿಹಾಸದ ಕಡೆಗೆ ನೋಡೋದಾದ್ರೆ, ಇದು 1978ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡ್ಕೊಳ್ತು. ಇದಾದ ಬಳಿಕವೂ ಇಲ್ಲಿ ಧಾರ್ಮಿಕ ಮತ್ತು ರಾಜಕೀಯವಾಗಿ ಹಿಂಸಾಚಾರ, ಅಶಾಂತಿ ಮುಂದುವರಿದುಕೊಂಡೇ ಬಂತು. ಇದ್ರ ನಡುವೆ 1983ರಲ್ಲಿ ಸೊಲೊಮನ್ ಐಲ್ಯಾಂಡ್​ ಚೀನಾ ಬದಲಿಗೆ ತೈವಾನ್​​​ಗೆ ಮಾನ್ಯತೆ ನೀಡ್ತು. 2019ರವರೆಗೂ ತೈವಾನ್ ಜೊತೆಗೆ ಸೊಲೊಮನ್ ಈಲ್ಯಾಂಡ್ ರಾಜತಾಂತ್ರಿಕ ಸಂಬಂಧ ಹೊಂದಿತ್ತು. ಆದ್ರೆ 2019ರಲ್ಲಿ ಮನಾಸಿ ಸೊಗಾವಾರೇ ಸೊಲೋಮನ್​ ಐಲ್ಯಾಂಡ್ ಅಧ್ಯಕ್ಷರಾದ್ರು. ಇವರು ತೈವಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧ ಮುರಿದು ಚೀನಾಗೆ ಮಾನ್ಯತೆ ನೀಡಿದ್ರು. ಈ ಮೂಲಕ ನಾವು ಈವರೆಗೆ ಮಾಡಿದ್ದ ತಪ್ಪು ತಿದ್ದಿಕೊಳ್ತಿದ್ದೀವಿ ಅಂತಲೂ ಹೇಳಿದ್ರು. ಸೊಲೋಮನ್ ದ್ವೀಪಸಮೂಹದಲ್ಲಿ ಒಂದಾದ ಮಲೈತಾ, ಸೊಗಾವರೇ ನಿರ್ಧಾರವನ್ನು ಒಪ್ಪಿಕೊಳ್ಳಲಿಲ್ಲ. ತೈವಾನ್ ಜೊತೆಗಿನ ಸಂಬಂಧವನ್ನು ಮುಂದುವರಿಸಿತು. ಆದ್ರೆ ಸೊಲೋಮನ್ ಐಲ್ಯಾಂಡ್​ನ ಕೇಂದ್ರ ಸರ್ಕಾರ, ತೈವಾನ್ ಹಡಗುಗಳು ನಮ್ಮ ಜಲಗಡಿಯೊಳಗೆ ಬರಲು ಬಿಡಲ್ಲ ಅಂತ ಹೇಳ್ತಿದೆ. ಇದೇ ವಿಚಾರವಾಗಿ ಈಗ ಮಲೈತಾ ದ್ವೀಪ ಮತ್ತು ಸೊಲೋಮನ್ ಐಲ್ಯಾಂಡ್ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ನಡೀತಾ ಇದೆ. ಈ ಹಿಂದೆ 1990ರ ದಶಕದಲ್ಲಿ ಮಲೈತಾ ಮತ್ತು ಗ್ವಾದಲ್​​ಕನಾಲ್​ ದ್ವೀಪಗಳ ಜನರ ನಡುವೆ ಹಿಂಸಾಚಾರ ನಡೆದಿತ್ತು. ಈ ವೇಳೆ ಆಸ್ಟ್ರೇಲಿಯಾ ಪೀಸ್​ ಕೀಪಿಂಗ್​​ಗೆ ಸೇನೆ ಕಳುಹಿಸಿತ್ತು. 2003ರಿಂದ 2017ರವರೆಗೆ ಸೇನೆ ಅಲ್ಲೇ ಇತ್ತು. ಅಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಸೇನೆ ವಾಪಸ್ಸಾಗಿತ್ತು. ಆದ್ರೆ 2019ರಲ್ಲಿ ತೈವಾನ್ ಬದಲಿಗೆ ಚೀನಾಗೆ ಮಾನ್ಯತೆ ನೀಡಿದ ಬಳಿಕ, ಅದಕ್ಕೆ ಮಲೈತಾ ವಿರೋಧ ವ್ಯಕ್ತಪಡಿಸಿದ ಬಳಿಕ ಮತ್ತೆ ಅಶಾಂತಿ ಮನೆ ಮಾಡಿದೆ. ಈಗ ಹಿಂಸೆಗೆ ಕಾರಣ ಕೂಡ ಮಲೈತಾದ ಜನ ಅಂತ ಹೇಳಲಾಗ್ತಿದೆ. ಮಲೈತಾದಿಂದ ಹೊರಟ ಜನ ಈಗ, ಗ್ವಾದಲ್​​​ಕನಾಲ್​​​ನಲ್ಲಿರೋ ರಾಜಧಾನಿ ಹೊನಿಯಾರಾ ತಲಪಿದ್ದಾರೆ. ನಮ್ಮನ್ನು ನಿರ್ಲಕ್ಷ್ಯ ಮಾಡಲಾಗ್ತಿದೆ. ಮಲೈತಾ ದ್ವೀಪದ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ.ಗ್ವಾದಲ್​​ಕನಾಲ್​​ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸ್ತಿದೆ. ಹೀಗಾಗಿ ಪ್ರಧಾನಿ ಮನಾಸಿ ಸೊಗಾವರೇ ರಾಜೀನಾಮೆ ನೀಡ್ಬೇಕು ಅನ್ನೋದು ಪ್ರತಿಭಟಕಾನಾಕರರ ಒತ್ತಾಯ.

-masthmagaa.com

Contact Us for Advertisement

Leave a Reply