masthmagaa.com:

ಕೊರೋನಾ ಇನ್ನೂ ಹೋಗಿಲ್ಲ. ಆಗಲೇ ಹೊಸ ಮಹಾಮಾರಿಯ ಭಯ ಶುರುವಾಗಿದೆ. ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ನಮ್ಮ ಪಕ್ಕದ ಕೇರಳಗಳಲ್ಲಿ ಆತಂಕಕಾರಿ ಬೆಳವಣಿಗೆಗಳು ಆಗುತ್ತಿವೆ. ಹಕ್ಕಿ ಜ್ವರದ ಭೀತಿ ಈ ರಾಜ್ಯಗಳಲ್ಲಿ ಆವರಿಸುತ್ತಿದೆ. ರಾಜಸ್ಥಾನದ ಪಶುಸಂಗೋಪನಾ ಸಚಿವರು ಇದೇ ಕಾರಣಕ್ಕೆ ಎಮರ್ಜೆನ್ಸಿ ಮೀಟಿಂಗ್​​ ನಡೆಸಿದ್ದಾರೆ. ಕೇವಲ ರಾಜಸ್ಥಾನ ಮಾತ್ರವಲ್ಲ ಮೇಲೆ ಹೇಳಿದ ಇತರ ರಾಜ್ಯಗಳಲ್ಲೂ ಹಕ್ಕಿ ಜ್ವರದ ಪ್ರಕರಣಗಳು ದೃಢಪಡುತ್ತಿವೆ. ಇದೊಂದು ಗಂಭೀರ ವಿಚಾರ, ರಾಜ್ಯ ಸರ್ಕಾರ ಹೈ ಅಲರ್ಟ್​ನಲ್ಲಿದೆ. ನಾವು ಪರಿಸ್ಥಿತಿಯ ಅವಲೋಕನ ಮಾಡ್ತಿದ್ದೇವೆ ಅಂತ ರಾಜಸ್ಥಾನ ಸರ್ಕಾರ ಹೇಳಿದೆ.

ನಮ್ಮ ಪಕ್ಕದ ಕೇರಳದ ಕೊಟ್ಟಾಯಂ ಹಾಗೂ ಅಲಪ್ಪುಳ ಜಿಲ್ಲೆಗಳಲ್ಲೂ ಹಕ್ಕಿ ಜ್ವರ ಸ್ಪೋಟ ಆಗಿದೆ. ಕೊಟ್ಟಾಯಂನ ಬಾತುಕೋಳಿ ಫಾರಂವೊಂದರಲ್ಲಿ 1,500ಕ್ಕೂ ಬಾತುಕೋಳಿಗಳು ರೋಗಬಂದು ಅಡ್ಡಬಿದ್ದಿವೆ. ಅಲಪ್ಪುಳದಲ್ಲೂ ಇದೇ ರೀತಿಯಾಗಿದೆ. ಇದರ ಪರಿಣಾಮ ಕೋಳಿಗಳು, ಬಾತುಕೋಳಿ ಹಾಗೂ ಇತರ ಸಾಕು ಪಕ್ಷಿಗಳನ್ನ ಸಾಮೂಹಿಕವಾಗಿ ಕೊಲ್ಲುವ ಆದೇಶ ನೀಡಲಾಗಿದೆ. ಕೇರಳದಾದ್ಯಂತ ಸ್ಟೇಟ್ ಎಮರ್ಜೆನ್ಸಿ ಘೋಷಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲೂ ಪರಿಸ್ಥಿತಿ ಗಂಭೀರವಾಗಿದ್ದು, ಕಂಗ್ರಾ ಜಿಲ್ಲೆಯಲ್ಲಿ ಪಾಂಗ್ ಡಾಮ್ ಕೆರೆ ತೀರದಲ್ಲಿ ವಲಸೆ ಹಕ್ಕಿಗಳು ಸಾಮೂಹಿಕವಾಗಿ ಸತ್ತು ಬೀಳುತ್ತಿವೆ. ಇವುಗಳ ಸ್ಯಾಂಪಲ್ ತೆಗೆದು ಪರೀಕ್ಷಿಸಿದಾಗ ಹಕ್ಕಿ ಜ್ವರ ಖಚಿತವಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ 1,800ಕ್ಕೂ ಅಧಿಕ ವಲಸೆ ಪಕ್ಷಿಗಳು ಸತ್ತಿದ್ದು, ಇದರಲ್ಲಿ ಹೆಚ್ಚಿನವು ಅಪರೂಪದ ‘ಬಾರ್ ಹೆಡೆಡ್ ಗೂಸ್’ ಪಕ್ಷಿಗಳಾಗಿವೆ.

ರಾಜಸ್ಥಾನದಲ್ಲಿ ಝಾಲಾವರ್​​ನ ಮರುಭೂಮಿ ಪ್ರದೇಶದ ದೇಗುಲವೊಂದರ ಬಳಿ ಸತ್ತು ಬಿದ್ದಿದ್ದ ನೂರಕ್ಕೂ ಅಧಿಕ ಕಾಗೆಗಳಲ್ಲಿ ಹಕ್ಕಿ ಜ್ವರದ ವೈರಾಣು ಪತ್ತೆಯಾಗಿವೆ. ಕೂಡಲೇ ಆಕ್ಷನ್​​ಗೆ ಇಳಿದ ಜಿಲ್ಲಾಧಿಕಾರಿ ಈ ಸ್ಥಳದ ಸುತ್ತಮುತ್ತಲ ಒಂದು ಕಿಲೋ ಮೀಟರ್​ ವ್ಯಾಪ್ತಿಯನ್ನ ಸೀಲ್​​ ಮಾಡಿದ್ದಾರೆ. ಜೊತೆಗೆ ರಾಜ್ಯ ವ್ಯಾಪಿ ಎಲ್ಲೇ ಹಕ್ಕಿಗಳು ಸತ್ತುಬಿದ್ದಿದ್ದರೂ ಕೂಡಲೇ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಮಧ್ಯಪ್ರದೇಶದ ಇಂದೋರ್​​ನಲ್ಲೂ ನೂರಾರು ಕಾಗೆಗಳು ಜ್ವರ ಬಂದು ಅಡ್ಡಬಿದ್ದಿವೆ. ಇದು ಬರ್ಡ್​ ಫ್ಲೂ ಹೌದು ಅಂತ ‘ನ್ಯಾಷನಲ್​ ಇನ್ಸ್​​ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಡಿಸೀಸಸ್’ ಕೂಡ ಖಚಿತ ಪಡಿಸಿದೆ. ಇದರ ಪರಿಣಾಮ ದೇಶದೆಲ್ಲೆಡೆ ನ್ಯಾಷನಲ್ ಪಾರ್ಕ್​​ಗಳು, ವನ್ಯಜೀವಿ ಧಾಮಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ.

ನಮ್ಮ ಕರ್ನಾಟಕದ ಮಂಜನಾಡಿಯಲ್ಲೂ ಹಲವು ಕಾಗೆಳು ಅನುಮಾನಾಸ್ಪದ ರೀತಿಯಲ್ಲಿ ಅಡ್ಡಬಿದ್ದಿವೆ ಅಂತಾ ವರದಿಯಾಗಿದ್ದು, ಇವುಗಳಿಗೂ ಹಕ್ಕಿ ಜ್ವರಾನೇ ಬಂದಿದ್ಯಾ ಅಥವಾ ಏನು ಅನ್ನೋದು ಸ್ಪಷ್ಟ ಆಗ್ಬೇಕಾಗಿದೆ.

ಹಾಗಾದ್ರೆ ಏನಿದು ಹಕ್ಕಿ ಜ್ವರ?

ಹಕ್ಕಿ ಜ್ವರ.. ಇಂಗ್ಲಿಷ್​​ನಲ್ಲಿ ಏವಿಯನ್ ಇನ್ಫ್ಲೂಯೆಂಜಾ ಅಥವಾ ಸರಳವಾಗಿ ಬರ್ಡ್ ಫ್ಲೂ ಅಂತ ಕರೀತಾರೆ. ಇದೊಂದು ವೈರಸ್​​ನಿಂದ ಬರುವ ಕಾಯಿಲೆ. ಹೆಚ್ಚಿನ ಹಕ್ಕಿ ಜ್ವರಗಳು ಹಕ್ಕಿಯಿಂದ ಹಕ್ಕಿಗೆ ಹರಡುತ್ತೆ. ಎಲ್ಲಾ ಬಗೆಯ ಪಕ್ಷಿಗಳನ್ನೂ ಬಲಿ ಪಡೆಯಬಹುದು. ಕೆಲ ರೀತಿಯ ಹಕ್ಕಿ ಜ್ವರಗಳು ಪ್ರಾಣಿಗಳಿಗೂ ಹರಡುತ್ತೆ. ಇಷ್ಟಾದ ಮೇಲೆ ಮನುಷ್ಯರನ್ನ ಬಿಡುತ್ತಾ? ಖಂಡಿತ ಇಲ್ಲ.. ಈ ಕಾಯಿಲೆ ಪಕ್ಷಿಗಳಿಂದ ಮಾನವರಿಗೂ ಹರಡುವ ಶಕ್ತಿ ಹೊಂದಿರುತ್ತೆ. ಆದ್ರೆ ಹೆಚ್ಚಿನ ಹಕ್ಕಿ ಜ್ವರಗಳು ಹಕ್ಕಿಗಳಿಗೆ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಅದರಲ್ಲಿ H5N1 ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳೋ ಹಕ್ಕಿ ಜ್ವರ.

ಜಪಾನ್ ಮೂಲ?

ಕಳೆದ ವರ್ಷ, ಅಂದ್ರೆ 2020ರ ಡಿಸೆಂಬರ್​​ 7ನೇ ತಾರೀಖು ಇತ್ತೀಚಿನ ದಿನಗಳ ಮೊದಲ ಹಕ್ಕಿ ಜ್ವರ ಪ್ರಕರಣ ಜಪಾನ್​​ ದೇಶದ ಹಿರೋಶಿಮಾದಲ್ಲಿ ಪತ್ತೆಯಾಗಿತ್ತು. ಇದನ್ನ ‘ಜಪಾನ್​​ ಟೈಮ್ಸ್’ ವರದಿ ಮಾಡಿತ್ತು. ಅದಾದ ನಂತರ ಈಗ ಭಾರತದಲ್ಲೂ ದೊಡ್ಡ ಪ್ರಮಾಣದಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿದೆ. ಪ್ರತಿ ಸಲ ಹಕ್ಕಿ ಜ್ವರ ಬಂದಾಗ ಇದನ್ನ ಕೋಳಿ ಜ್ವರ ಅಂತಾನೂ ಕರೀತಾರೆ. ಹಾಗೂ ಕೋಳಿ ಮಾಂಸ ಹಾಗೂ ಮೊಟ್ಟೆ ರೇಟು ಬಹಳ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗುತ್ತೆ. ಈ ಸಲ ಏನಾಗುತ್ತೋ ನೋಡ್ಬೇಕು. ಕೊರೋನಾ ತೊಲಗೋ ಮುಂಚೆ ಮತ್ತೊಂದು ಕಾಯಿಲೆ ಕಿರಿಕಿರಿ. ಎಂತಾ ಅವಸ್ಥೆ ಮಾರ್ರೆ..

-masthmagaa.com

Contact Us for Advertisement

Leave a Reply