ಕಾವೇರಿ ಬೆಂಕಿ ಧಗಭಗ! ರಾಜ್ಯಕ್ಕೆ ಮತ್ತೆ ಕೋರ್ಟ್ ಆರ್ಡರ್‌ ಶಾಕ್‌!

masthmagaa.com:

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರೋದನ್ನು ಖಂಡಿಸಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್ ಮಾಡಿ ಆಕ್ರೋಶ ಹೊರಹಾಕ್ತಿವೆ. ಇದರ ನಡುವೆಯೇ ರಾಜ್ಯಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ದಿಲ್ಲಿಯ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ (CWRC) ಇಂದು ಮತ್ತೆ ಸಭೆ ನಡೆಸಿದೆ. ಈ ವೇಳೆ ತಮಿಳುನಾಡಿಗೆ ಮುಂದಿನ 18 ದಿನಗಳ ಕಾಲ ಅಂದ್ರೆ ಸೆಪ್ಟಂಬರ್‌ 28ರಿಂದ ಅಕ್ಟೋಬರ್‌ 15ರವರೆಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ಪ್ರತಿಭಟನೆಯ ಕಿಚ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಆದ್ರೆ ಈ ಬಾರಿಯ ಆದೇಶ ಕರ್ನಾಟಕಕ್ಕೆ ತುಸು ಸಮಾಧಾನ ತಂದಿದೆ. ಯಾಕಂದ್ರೆ ಹಿಂದಿನ ಆದೇಶಗಳಿಗಿಂತ ಕಡಿಮೆ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ. ಆದೇಶಕ್ಕೆ ಪ್ರತಿಕ್ರಿಯಿಸಿರೊ ಡಿಸಿಎಂ ಡಿಕೆ ಶಿವಕುಮಾರ್‌, ತಮಿಳುನಾಡು ಸರ್ಕಾರ 12 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಬೇಕು ಅಂತ ಕೇಳಿತ್ತು‌.‌ ಆದ್ರೆ ಅಷ್ಟು ನೀರು ಬಿಡಲು ಆಗಲ್ಲ ಅಂತ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದ್ರಿಂದ ಸಂತೋಷ ಆಗಿದೆ ಎಂದಿದ್ದಾರೆ. ಜೊತೆಗೆ ಸಾಮಾನ್ಯವಾಗಿ 2 ಸಾವಿರ ಕ್ಯೂಸೆಕ್ ನೀರು ಹೋಗುತ್ತೆ. ಇನ್ನೊಂದು ಸಾವಿರ ಕ್ಯೂಸೆಕ್ ಬಿಡಬೇಕಾಗುತ್ತದೆ ಅಷ್ಟೇ. ಕಳೆದೆರಡು ದಿನಗಳಿಂದ ನೀರಿನ ಒಳಹರಿವು ಚೆನ್ನಾಗಿದೆ ಅಂತ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಇನ್ನು ಬೆಂಗಳೂರು ಬಂದ್‌ಗೆ ಇಂದು ಅನುಮತಿ ನೀಡಲಾಗಿಲ್ಲ. ಕೇವಲ ವಾಲೆಂಟರಿಯಾಗಿ ಶಾಂತಿಯುತ ಪ್ರತಿಭಟನೆ ನಡೆಸಬಹುದು ಹಾಗೂ ಯಾವುದೇ ರ್ಯಾಲಿ ಮಾಡೋ ಹಾಗಿಲ್ಲ ಅಂತ ಪೊಲೀಸ್‌ ಕಮಿಷನರ್‌ ಹೇಳಿದ್ರು. ಆದ್ರೂ ಪ್ರತಿಭಟನಾಕಾರರು ನಿಯಮಗಳನ್ನ ಉಲ್ಲಂಘಿಸಿ ವಿಧಾನಸೌಧದಿಂದ ರಾಜಭವನಕ್ಕೆ ಮೆರವಣಿಗೆ ಮಾಡೋಕೆ ಮುಂದಾಗಿದ್ದಾರೆ. ಈ ವೇಳೆ 200ಕ್ಕೂ ಅಧಿಕ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಬೆಂಗಳೂರು ಬಂದ್‌ ವೇಳೆ ಕೆಲವು ಕಡೆ ಅಹಿತಕರ ಘಟನೆಗಳು ನಡೆದಿದೆ. ಜಯನಗರದಲ್ಲಿ ಕಿಡಿಗೇಡಿಗಳು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ, ಉಪಕರಣಗಳನ್ನ ಧ್ವಂಸಗೊಳಿಸಿದ್ದಾರೆ. ಅಲ್ದೇ ಹೋಟೆಲ್‌ನಲ್ಲಿದ್ದ ಗ್ರಾಹಕರನ್ನು ಒತ್ತಾಯಪೂರ್ವಕವಾಗಿ ಹೊರಗಡೆ ಕಳಿಸಿ, ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿದೆ.

ಅತ್ತ ತಮಿಳುನಾಡಿನಲ್ಲೂ ಕಾವೇರಿ ನೀರಿಗಾಗಿ ಭಾರಿ ಪ್ರತಿಭಟನೆಗಳು ಜೋರಾಗಿ ನಡೆಯುತ್ತಿವೆ. ಅಲ್ಲಿನ ತಿರುಚ್ಚಿಯಲ್ಲಿ ರೈತರ ಗುಂಪೊಂದು ಸತ್ತ ಇಲಿಗಳನ್ನ ಬಾಯಲ್ಲಿ ಹಿಡಿದುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ. ತಮಿಳುನಾಡಿನ ತಿರುಚ್ಚಿಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವ್ರಿಗೆ ಶ್ರದ್ಧಾಂಜಲಿ ಮಾಡಿದ್ದಾರೆ. ಇತ್ತ ಕರ್ನಾಟಕದಲ್ಲೂ ರಾಮನಗರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ತಿಥಿ ಮಾಡಲಾಗಿದೆ. ಬಾಯಿಗೆ ಮಣ್ಣಾಕಿಕೊಂಡು, ಸತ್ತಂತೆ ಅಣುಕು ಪ್ರದರ್ಶನ ಮಾಡಿ ರೈತರು ಸರ್ಕಾರದ ಗಮನಸೆಳೆಯೋ ಪ್ರಯತ್ನ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply