ಬೆಂಗಳೂರಿನ ಶಾಲೆಗಳಿಗೆ ಸ್ಫೋಟಕ ಬೆದರಿಕೆ! ಬೆಚ್ಚಿಬಿದ್ದ ಪೋಷಕರು!

masthmagaa.com:

ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ಫೋಟಕ ಇಟ್ಟಿರೋದಾಗಿ ಬರ್ತಿರೋ ಬೆದರಿಕೆಗಳು ಜಾಸ್ತಿಯಾಗ್ತಿವೆ. ಇದೀಗ ಬೆಂಗಳೂರಿನ 40ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಸ್ಫೋಟಕ ಇಟ್ಟಿದ್ದೀವಿ ಅಂತ ಇವತ್ತು ಬೆಳಿಗ್ಗೆ ಇ-ಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಬೆಂಗಳೂರಿನ ಯಲಹಂಕ, ಸದಾಶಿವ ನಗರ, ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ಈ ಥರಹ ಇ-ಮೇಲ್‌ ಕಳುಹಿಸಲಾಗಿದೆ. ಕೂಡಲೇ ಎಚ್ಚೆತ್ತ ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳನ್ನ ತಮ್ಮ ಮನೆಗಳಿಗೆ ಕಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಹಾಗೂ ಸ್ಫೋಟಕ ನಿಷ್ಕ್ರಿಯದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಮಾಹಿತಿ ನೀಡಿದ್ದು, ʻಇದ್ರಿಂದ ಯಾರೂ ಭಯ ಪಡ್ಬೇಕಿಲ್ಲ. ಪ್ರಾಥಮಿಕ ತನಿಖೆಯಿಂದ ಇದೊಂದು ಬರೀ ಹುಸಿ ಬೆದರಿಕೆ ಅಂತ ತಿಳಿದು ಬಂದಿದೆ. ಈ ಹಿಂದೆ ಕೂಡ ಬಹಳಷ್ಟು ಬಾರಿ ನಗರದ ಶಾಲೆಗಳಲ್ಲಿ ಸ್ಫೋಟಕ ಇಡಲಾಗಿದೆ ಅಂತ ಕಾಲ್ಸ್‌, ಇ-ಮೇಲ್ಸ್‌ ಬಂದಿತ್ತು. ಆದ್ರೆ ಅವುಗಳೆಲ್ಲಾ ಸುಳ್ಳು ಅಂತಾನೂ ಸಾಬೀತು ಆಗಿದ್ವುʼ ಅಂತ ಹೇಳಿದ್ದಾರೆ.

ಇನ್ನು ಈ ಘಟನೆ ಕುರಿತು ರಿಯಾಕ್ಟ್‌ ಮಾಡಿರೋ ಸಿಎಂ ಸಿದ್ದರಾಮಯ್ಯ, ʻಪ್ರೈವೇಟ್‌ ಶಾಲೆಗಳಿಗೆ ಈ ರೀತಿ ಬೆದರಿಕೆ ನೀಡ್ತಿರೋದು ರಿಪೀಟ್‌ ಆಗ್ತಿವೆ. ಇದ್ರಿಂದ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಭಯ ಪಡುವಂತಾಗಿದೆ. ಈ ರೀತಿ ಆಗೋದು ಒಳ್ಳೇದಲ್ಲ. ಈ ರೀತಿ ಸುಮ್ಸುಮ್ಮನೆ ಸ್ಫೋಟಕ ಬೆದರಿಕೆ ಯಾರ್‌ ಹಾಕ್ತಿದ್ದಾರೆ ಅಂತ ಪತ್ತೆಹಚ್ಚುತ್ತೇವೆ. ಜೊತೆಗೆ ಇಂತಹ ಘಟನೆಗಳು ರಿಪೀಟ್‌ ಆಗ್ಬಾರ್ದುʼ ಅಂತ ಹೇಳಿದ್ದಾರೆ. ಇತ್ತ ಶಾಲೆಗಳಿಗೆ ಬೆದರಿಕೆ ಬಂದಿರೋ ಬೆನ್ನಲ್ಲೇ ಇದೀಗ ದೇವಸ್ಥಾನಗಳಿಗೂ ಬೆದರಿಕೆ ಹಾಕಲಾಗಿದೆ ಅಂತ ಹೇಳಲಾಗ್ತಿದೆ. ಈ ಹಿನ್ನಲೆಯಲ್ಲಿ ʻಸೂಕ್ತ ತನಿಖೆ ನಡೆಸೋದಾಗಿ ಸೂಚನೆ ನೀಡಿದ್ದೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೊಂದ್‌ ಕಡೆ ಘಟನೆ ಹಿನ್ನಲೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ಖಾರವಾಗಿ ಟೀಕೆ ಮಾಡಿದೆ. ʻರಾಜ್ಯ ಸರ್ಕಾರದಿಂದ ಇದೀಗ ಕರ್ನಾಟಕ ಉಗ್ರರ ಪಾಲಿಗೆ ಸ್ವರ್ಗವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಗೃಹ ಸಚಿವ ಜಿ ಪರಮೇಶ್ವರ್‌ ಸೇರಿ ಉಗ್ರರಿಗೆ ಅಮಾಯಕರು ಅನ್ನೋ ಪಟ್ಟ ಕಟ್ಟಿದ್ದಾರೆ. ಆದ್ರಿಂದಲೇ ಬೆಂಗಳೂರಿನ ಶಾಲೆಗಳಿಗೆ ಸ್ಫೋಟಕ ಬೆದರಿಕೆ ಜಾಸ್ತಿಯಾಗ್ತಿದೆ. ಜೊತೆಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಎಲ್ಲದರ ಬೆಲೆ ಏರಿಕೆಯಾಗಿದೆ ಹಾಗೂ ಮತಾಂಧರ ಸಂಖ್ಯೆ ಕೂಡ ಹೆಚ್ಚಾಗಿದೆ ಅಂತ ರಾಜ್ಯ ಬಿಜೆಪಿ ತನ್ನ ಅಫಿಶಿಯಲ್‌ `X’ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply