ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಹಳೇ ಮನೆಯಲ್ಲಿ ರಹಸ್ಯ ದಾಖಲೆಗಳು ಪತ್ತೆ! ತನಿಖೆ ಸಂಸ್ಥೆಗಳ ಭರ್ಜರಿ ಬೇಟೆ!

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮನೆಯಲ್ಲಿ ಕೆಲ ರಹಸ್ಯ ದಾಖಲೆಗಳು ಸಿಕ್ಕಿವೆ ಅಂತ ಖುದ್ದು ತನಿಖಾಧಿಕಾರಿಗಳು ಕನ್ಫಮ್‌ ಮಾಡಿದಾರೆ. ಡೆಲವೇರ್ ರಾಜ್ಯದಲ್ಲಿರುವ ಬೈಡೆನ್ ಅವರ ನಿವಾಸದಲ್ಲಿ ಸಣ್ಣ ಸಂಖ್ಯೆಯ ರಹಸ್ಯ ದಾಖಲೆಗಳು ಸಿಕ್ಕಿವೆ. ಸಧ್ಯಕ್ಕೆ ಆ ಫೈಲ್‌ಗಳನ್ನ ವಶಪಡಿಸಿಕೊಳ್ಳಲಾಗಿದ್ದು ನ್ಯಾಯಾಂಗ ಇಲಾಖೆಗೆ ವರ್ಗಾಯಿಸಲಾಗಿದೆ ಅಂತ ಈ ಕೇಸ್‌ನ ತನಿಖೆ ನಡೆಸ್ತಿರೋ ರಾಬರ್ಟ್‌ ಹುರ್‌ (Robert Hur) ಹೇಳಿದ್ದಾರೆ. ಬೈಡೆನ್ ಅವರು ಉಪಾಧ್ಯಕ್ಷರಾಗಿದ್ದ ಸಮಯದಲ್ಲಿ ಅವರು ಈ ದಾಖಲೆಗಳನ್ನ ತಮ್ಮಲ್ಲೇ ಇಟ್ಟುಕೊಂಡಿರಬಹುದು ಅಂತ ಶಂಕೆ ವ್ಯಕ್ತಪಡಿಸಲಾಗಿದೆ. ಇದೇ ವೇಳೆ ಈಗ ವಾಸವಾಗಿರೋ ಮನೆಯಲ್ಲಿ ಅಂದ್ರೆ, ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿರುವ ಜೋ ಮತ್ತು ಜಿಲ್ ಬೈಡೆನ್ ಅವರ ಎರಡನೇ ಮನೆಯಲ್ಲಿ ಯಾವುದೇ ದಾಖಲೆಗಳು ಕಂಡುಬಂದಿಲ್ಲ ಅಂತ ತನಿಖಾಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ದೇ ಈಗ ಸಿಕ್ಕಿರೋ ದಾಖಲೆಗಳನ್ನ ಸಂಪೂರ್ಣವಾಗಿ ರಕ್ಷಣೆ ಮಾಡಲಾಗಿದ್ದು ನ್ಯಾಯಾಂಗಕ್ಕೆ ವರ್ಗಾವಣೆ ಮಾಡಿದ್ದೀವಿ ಅಂತ ರಾಬರ್ಟ್‌ ಹುರ್ ಹೇಳಿದ್ದಾರೆ. ಅಂದ್ಹಾಗೆ ಈ ಹಿಂದೆ ಕೂಡ ಟ್ರಂಪ್‌ ಅಧ್ಯಕ್ಷರಾಗಿದ್ದ ಸಮಯದಲ್ಲಿ ಭದ್ರತೆಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನ ತಮ್ಮಲ್ಲೇ ಇಟ್ಕೊಂಡಿದ್ದಾರೆ ಅಂತ ಆರೋಪಿಸಿ ಅವರ ಮೇಲೆ ಅಲ್ಲಿನ ತನಿಖಾ ಸಂಸ್ಥೆಗಳು ತನಿಖೆ ಮಾಡಿದ್ವು. ಆ ಕೇಸ್‌ ಇನ್ನೂ ನಡೀತಾನೆ ಇದೆ. ಈಗ ಅದೇ ರೀತಿ ಬೈಡೆನ್‌ ಮನೆಯಲ್ಲೂ ಹುಡುಕಾಟ ನಡೆಸಿದ್ದು ಅಲ್ಲೂ ಕೂಡ ದೇಶಕ್ಕೆ ಸಂಬಂಧ ಪಟ್ಟ ರಹಸ್ಯ ದಾಖಲೆಗಳು ಸಿಕ್ಕಿರೋದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಇನ್ನು ಇದು ಸಹಜವಾಗಿ ಅಲ್ಲಿನ ರಾಜಕೀಯದಲ್ಲೂ ದೊಡ್ಡ ಕೋಲಾಹಲ ಸೃಷ್ಠಿಸಿದ್ದು, ರಿಪಬ್ಲಿಕನ್ ಪಕ್ಷ ಅಂದ್ರೆ ಬೈಡೆನ್‌ರ ವಿರೋಧಿ ಪಕ್ಷದವರು ಇದು ಗಂಭೀರ ವಿಚಾರ ಅಂತ ಹೇಳಿ ಭಾರಿ ಆಕ್ರೋಶ ಹೊರಹಾಕ್ತಿದ್ದಾರೆ. ಆದ್ರೆ ಬೈಡೆನ್‌ ಅವರ ಬೆಂಬಲಿಗರು ಮಾತ್ರ ಇದು ಬೈಡೆನ್‌ ಅವರಿಗೇನೇ ಗೊತ್ತಿಲ್ಲ. ಅವರ ಮನೆಯಲ್ಲಿ ಈ ರೀತಿಯ ದಾಖಲೆಗಳು ಸಿಕ್ಕಿರೋದಕ್ಕೆ ಸ್ವತಃ ಬೈಡೆನ್‌ ಅವರೇ ಆಶ್ಚರ್ಯಕ್ಕೀಡಾಗಿದ್ದಾರೆ ಅಂತ ಹೇಳ್ತಿದ್ದಾರೆ.

-masthmagaa.com

Contact Us for Advertisement

Leave a Reply