ಎಲಾನ್‌ ಮಸ್ಕ್‌ ಮೇಲೆ ಕಣ್ಣಿಟ್ಟ ಚೀನಾ, ಸ್ಟಾರ್‌ಲಿಂಕ್‌ ನಾಶಕ್ಕೆ ಪ್ಲಾನ್‌ ರೆಡಿ!

masthmagaa.com:

ಚೀನಾ ಮತ್ತು ಅಮೆರಿಕ ಈಗ ಬದ್ದವೈರಿಗಳು ಅನ್ನೋದಕ್ಕಿಂತ ಪ್ರಬಲ ಪ್ರತಿಸ್ಪರ್ಧಿಗಳು ಅಂತ ಹೇಳಬಹುದು. ಇದೊಂತರ ಕೋಲ್ಡ್‌ವಾರ್‌ ಅಂದ್ರೆ ಶೀತಲ ಸಮರದ ರೀತಿಯ ವಾತಾವಾರಣ. ಶೀತಲ ಸಮರದಲ್ಲಿ ಅಮೆರಿಕ-ರಷ್ಯಾ ನೇರಾನೇರ ಯುದ್ಧ ಒಂದು ಮಾಡ್ಲಿಲ್ಲ ಆದ್ರೆ ಅದನ್ನ ಬಿಟ್ಟು ಉಳಿದೆಲ್ಲವನ್ನ ಮಾಡಿದ್ವು. ಅದ್ರಲ್ಲಿ ಪ್ರಮುಖವಾಗಿ ತಂತ್ರಜ್ಞಾನ ಮತ್ತು ಆವಿಷ್ಕಾರದ ಸಮರ ಇತ್ತು. ಅಂದ್ರೆ ಅಮೆರಿಕ ಏನಾದ್ರು ಒಂದು ಹೊಸ ಆಯುಧ ಅಥವಾ ಮುಂದುವರೆದ ತಂಜ್ರಜ್ಞಾನ ತಂದ್ರೆ ರಷ್ಯಾ ಕೂಡ ಅದಕ್ಕಿಂತ ಮುಂದುವರೆದ ಆಯುಧ ಅಥವಾ ತಂತ್ರಜ್ಞಾನ ತರೋಕೆ ನೋಡ್ತಿತ್ತು. ಇಲ್ಲಾ ಅಂದ್ರೆ ಆ ಆಯುಧ ಅಥವಾ ತಂತ್ರಜ್ಞಾನವನ್ನ ಹೇಗೆ ಹೊಡೆದು ಹಾಕಬೇಕು ಅಂತ ನೋಡ್ತಿದ್ವು. ಈಗ ಚೀನಾ ಮತ್ತು ಅಮೆರಿಕದ ಮಧ್ಯೆ ಕೂಡ ಅಂತಹದೇ ಪೈಪೋಟಿ ಶುರುವಾಗಿದೆ. ಎಲಾನ್‌ ಮಸ್ಕ್‌ರ ಸ್ಟಾರ್‌ಲಿಂಕ್‌ ಸ್ಯಾಟ್‌ಲೈಟ್‌ಗಳನ್ನ ಹೇಗೆ ನಾಶ ಪಡಿಸಬೇಕು ಅಂತ ಚೀನಾದ ವಿಜ್ಞಾನಿಗಳು ಯೋಜನೆ ಒಂದನ್ನ ಸಿದ್ದಪಡಿಸಿರೋದಾಗಿ ವರದಿಯಾಗಿದೆ. ವಿಶ್ವದ ನಂ 1 ಶ್ರೀಮಂತ ಎಲಾನ್‌ ಮಸ್ಕ್‌ ತಮ್ಮ ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಸಂಸ್ಥೆ ಮೂಲಕ ಸ್ಟಾರ್‌ಲಿಂಕ್‌ ಸ್ಯಾಟ್‌ಲೈಟ್‌ಗಳನ್ನ ಅಭಿವೃದ್ಧಿಪಡಿಸ್ತಾ ಇದ್ದಾರೆ. ಈ ಸ್ಯಾಟ್‌ಲೈಟ್‌ಗಳು ಕೆಳಹಂತದಲ್ಲೇ ಕಾರ್ಯನಿರ್ವಹಿಸಲಿದ್ದು, ವಿ‍ಶ್ವಾದ್ಯಂತ ಅದ್ರಲ್ಲೂ ಇಂಟರ್‌ನೆಟ್‌ ಸಂಪರ್ಕವೇ ಇರದ ರಿಮೋಟ್‌ ಏರಿಯಾಗಳಲ್ಲಿ ಕೂಡ ಇಂಟರ್‌ನೆಟ್‌ ಸಂಪರ್ಕ ಒದಗಿಸುವ ಉದ್ದೇಶ ಹೊಂದಿವೆ. ಇದುವರೆಗು ಸ್ಪೇಸ್‌ ಎಕ್ಸ್‌ 2,300 ಕ್ಕೂ ಅಧಿಕ ಸ್ಟಾರ್‌ಲಿಂಕ್‌ ಸ್ಯಾಟ್‌ಲೈಟ್‌ಗಳನ್ನ ಕಕ್ಷೆಗೆ ತಲುಪಿಸಿದೆ. ಒಟ್ಟು 30 ಸಾವಿರ ಸ್ಯಾಟ್‌ಲೈಟ್‌ಗಳನ್ನ ಕಳಿಸೋ ಯೋಜನೆ ಇಟ್ಕೊಂಡಿದೆ. ಆದ್ರೆ ಚೀನಾ ಮಾತ್ರ ಇದನ್ನ ಬೇರೆ ರೀತಿಯಲ್ಲೇ ನೋಡ್ತಿದೆ. ಸ್ಟಾರ್‌ಲಿಂಕ್‌ನಿಂದ ಅಮೆರಿಕದ ಡ್ರೋನ್‌, ಫೈಟರ್‌ಜೆಟ್‌ಗಳ ಡೇಟಾ ಸ್ಪೀಡ್‌ ಅಥವಾ ಇಂಟರ್‌ನೆಟ್‌ ಸ್ಪೀಡ್‌ ನೂರು ಪಟ್ಟು ಜಾಸ್ತಿ ಆಗುತ್ತೆ. ಇದ್ರಿಂದ ಅಮೆರಿಕ ಸೇನೆಯ ಮತ್ತು ಆಯುಧಗಳ ನಿಖರತೆ, ಕ್ಷಮತೆ ಎಲ್ಲಾ ಹೆಚ್ಚಾಗುತ್ತೆ. ಇದು ಯಾವತ್ತಿದ್ರು ಚೀನಾದ ರಕ್ಷಣೆಗೆ ಅಪಾಯ ತರುವಂತದ್ದೆ ಅಂತ ಅಲ್ಲಿನ ಸೇನಾ ಸಂಶೋಧಕರು ಅಂದಾಜಿಸಿದ್ದಾರೆ. ಹೀಗಾಗಿ ಒಂದು ಅಧ್ಯಯನ ನಡೆಸಿ ಅದ್ರಲ್ಲಿ ಸ್ಟಾರ್‌ಲಿಂಕ್‌ ಸ್ಯಾಟ್‌ಲೈಟ್‌ಗಳನ್ನ ನಾಶಪಡಿಸೋ ಬಗ್ಗೆ ವಿವರಿಸಿದ್ದಾರೆ. ಇದ್ರ ಪ್ರಕಾರ, ಮಿಸೈಲ್‌ಗಳನ್ನ ಬಳಸಿದ್ರೆ ಖರ್ಚು ಜಾಸ್ತಿ ಹೀಗಾಗಿ ಲೇಸರ್‌ ತಂತ್ರಜ್ಞಾನ, ಮೈಕ್ರೋವೇವ್‌ ತಂತ್ರಜ್ಞಾನ ಮತ್ತು ಕೆಲ ಚಿಕ್ಕ ಚಿಕ್ಕ ಸ್ಯಾಟ್‌ಲೈಟ್‌ ಮೂಲಕವೇ ಸ್ಟಾರ್‌ಲಿಂಕ್‌ ನೆಟ್‌ವರ್ಕ್‌ನ್ನ ನಾಶಪಡಿಸಬಹುದು ಅಂತ ಸಜೆಸ್ಟ್‌ ಮಾಡಲಾಗಿದೆ.
ಇದಕ್ಕೆ ಈಗ ಎಲಾನ್‌ಮಸ್ಕ್‌ ಆಗ್ಲಿ, ಅಮೆರಿಕ ಆಗ್ಲಿ ಏನು ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.

-masthmagaa.com

Contact Us for Advertisement

Leave a Reply