2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್…!‌

masthmagaa.com:

ಏಶಿಯನ್ ಗೇಮ್ಸ್‌ನಲ್ಲಿ ಚಿನ್ನದ ಬೇಟೆಯಾಡಿದ ಭಾರತ ತಂಡಕ್ಕೆ ಹಾಗೂ ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಮತ್ತೊಂದು ಖುಷಿ ವಿಚಾರ ಸಿಕ್ಕಿದೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಇರಬೇಕಾಗಿತ್ತು ಅಂತ ನಾವು-ನೀವು ಅದೆಷ್ಟೋ ಬಾರಿ ಅಂದುಕೊಂಡಿರ್ತೀವಿ. ಅದರಂತೆ ಕೊನೆಗೂ ಇಂಟರ್‌ನ್ಯಾಶನಲ್‌ ಒಲಿಂಪಿಕ್ಸ್‌ ಕಮಿಟಿ (‌IOC) ಹಾಗೂ 2028ರ ಒಲಿಂಪಿಕ್ಸ್‌ನ ಆಯೋಜಕರಾದ ಅಮೇರಿಕಾದ ಲಾಸ್‌ ಏಂಜಲೀಸ್‌ನ ಆಯೋಜಕ ಸಮಿತಿ ಈ ಕುರಿತು ಗ್ರೀನ್‌ ಸಿಗ್ನಲ್‌ ನೀಡಿದೆ. ಮುಂಬೈನಲ್ಲಿ ನಡೆಯುವ 141ನೇ IOC ಅಧಿವೇಶನದಲ್ಲಿ ಈ ವಿಚಾರ ಅಫೀಶಿಯಲ್‌ ಆಗಿ ಹೊರಬೀಳಲಿದೆ.

ಈ ಕುರಿತು ಮಾತನಾಡಿರುವ ICC ಛೇರ್‌ಪರ್ಸನ್‌ ʻಗ್ರೆಗ್‌ ಬಾರ್ಕ್ಲೆʼ ಅವರು “LA28ನ ಸಮಿತಿಯ ಈ ಶಿಫಾರಸ್ಸಿನಿಂದ ನಮಗೆ ಸಂತೋಷವಾಗಿದೆ, ಇದು ಅಂತಿಮ ನಿರ್ಧಾರ ಅಲ್ಲದೇ ಇದ್ರೂ ಸಹ, ಶತಮಾನದಲ್ಲೇ ಮೊದಲ ಬಾರಿಗೆ ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ನಾವು ಕ್ರಿಕೆಟ್ ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಲ್ಯಾಂಡ್ ಮಾರ್ಕ್ ನಿರ್ಧಾರ” ಅಂತ ಹೇಳಿದ್ದಾರೆ.

ಕ್ರಿಕೆಟ್‌ ಸೇರಿದಂತೆ ಸ್ಕ್ವಾಷ್‌, ಲಾಕ್ರೋಸ್‌, ಬೇಸ್‌ಬಾಲ್ ಮತ್ತು ಫ್ಲಾಗ್‌ ಫುಟ್ಬಾಲ್‌ಗಳನ್ನು 2028ರ ಒಲಿಂಪಿಕ್ಸ್‌ಗೆ ಸೇರಿಸುವುದಾಗಿ ಈ ಸಮಿತಿ ಹೇಳಿದೆ. ಈ ಮೂಲಕ ಮತ್ತೊಮ್ಮೆ ಒಲಿಂಪಿಕ್ಸ್‌ಗೆ ಸೇರುವ ಯುದ್ಧದಲ್ಲಿ ಕ್ರಿಕೆಟ್‌ ಗೆಲ್ಲುವ ಹಂತದಲ್ಲಿ ಇದೆ ಅಂತಾನೆ ಹೇಳ್ಬೋದು.

ಅಂದ್ಹಾಗೆ ಒಲಿಂಪಿಕ್ಸ್‌ಗೆ ಕ್ರಿಕೆಟ್ ಎಂಟ್ರಿ ಕೊಟ್ಟಿರೋದು ಇದೇ ಮೊದಲೇನಲ್ಲ. 1900ರ ಒಲಿಂಪಿಕ್ಸ್‌ನಲ್ಲಿ ಇಂಗ್ಲೆಂಡ್‌ ಹಾಗೂ ಫ್ರಾನ್ಸ್‌ ಒಂದು ಪಂದ್ಯವನ್ನು ಆಡಿದ್ದವು. ಗೋಲ್ಡ್‌ ಮೆಡಲ್‌ಗಾಗಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲುವು ದಾಖಲಿಸಿತ್ತು. ಕ್ರಿಕೆಟ್‌ನಿಂದ ಈಗ ಒಲಿಂಪಿಕ್ಸ್‌ಗೇ ಒಂದು ಮೆರುಗು ಬರುತ್ತೇ ಅನ್ನೋದು ಸುಳ್ಳಲ್ಲ, ಯಾಕಂದ್ರೆ ಭಾರತ ಸೇರಿದಂತೆ ಉಳಿದ ಕ್ರಿಕೆಟ್‌ ಆಡುವ ದೇಶಗಳಲ್ಲಿ ಈ ಆಟಕ್ಕಿರುವ ಕ್ರೇಜ಼್ ಹಾಗೂ ಮಾರ್ಕೆಟ್‌ ಅಂತದ್ದು. ಈ ಲೆಕ್ಕಾಚಾರವನ್ನ ನೋಡಿದ್ರೆ ನಿಮಗೇ ಅರ್ಥ ಆಗುತ್ತೆ ನೋಡಿ:

2024ರಲ್ಲಿ ನಡೆಯಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನ ಪ್ರಸಾರ ಹಕ್ಕುಗಳ ಒಟ್ಟು ಮೌಲ್ಯ ಭಾರತದಲ್ಲಿ ಸುಮಾರು 20 ಮಿಲಿಯನ್ ಡಾಲರ್ಸ್; ಅಂದ್ರೆ ಸುಮಾರು 164 ಕೋಟಿ ರುಪಾಯಿ. ತಜ್ಙರ ಅಂದಾಜಿನ ಪ್ರಕಾರ ಕ್ರಿಕೆಟ್‌; ಒಲಿಂಪಿಕ್ಸ್‌ಗೆ ಕಾಲಿಟ್ರೆ ಈ ಮೌಲ್ಯ ಬರೋಬ್ಬರಿ 10 ಪಟ್ಟು; ಅಂದ್ರೆ ಸುಮಾರು 1,640 ಕೋಟಿಗಳಷ್ಟು ಆಗ್ಬೋದು ಅಂತ ಊಹಿಸಲಾಗಿದೆ.

ಆದರೆ ಇಲ್ಲೊಂದು ಸಮಸ್ಯೆ ಇದೆ ಸ್ನೇಹಿತರೇ, ಈಗಿನ ನಿಯಮದ ಪ್ರಕಾರ ಒಲಿಂಪಿಕ್ಸ್‌ನಲ್ಲಿ 310 ಮೆಡಲ್‌ ಇವೆಂಟ್‌ಗಳು/ಆಟಗಳನ್ನೋಳಗೊಂಡಂತೆ 10,500 ಅಥ್ಲೀಟ್‌ಗಳಷ್ಟೇ ಭಾಗವಹಿಸೋಕೆ ಅವಕಾಶ ಇದೆ. ಹಾಗಾಗಿ ಈ ಐದು ಆಟಗಳ ಸೇರ್ಪಡೆಯಿಂದ ಬಾಕ್ಸಿಂಗ್‌, ವೈಟ್‌ ಲಿಫ್ಟಿಂಗ್‌, ಪೆಂಟಾತ್ಲಾನ್‌ ಆಟಗಳು ಒಲಿಂಪಿಕ್ಸ್‌ನಿಂದ ಹೊರಗುಳೀಬೋದು ಅಂತ ನಂಬಲಾಗಿದೆ.

-masthmagaa.com

Contact Us for Advertisement

Leave a Reply