ಲೋಕ ಕಹಳೆಗೆ ಶುರುವಾದ ಮತದಾನ: ಮಣಿಪುರದಲ್ಲಿ ಗುಂಡಿನ ಸದ್ದು!

masthmagaa.com:

ದೇಶದ 102 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದೆ. ಮೊದಲ ಹಂತದಲ್ಲಿ ಸುಮಾರು 60% ವೋಟಿಂಗ್‌ ನಡೆದಿದೆ. 2019ರಲ್ಲಿ 69.43% ಮತದಾನ ನಡೆದಿತ್ತು. ಇನ್ನು 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ಸುಸೂತ್ರವಾಗಿ ನಡೆದ್ರೆ, ಈಶಾನ್ಯ ರಾಜ್ಯಗಳಾದ ಮಣಿಪುರ, ನಾಗಾಲ್ಯಾಂಡ್‌ಗಳಲ್ಲಿ ಮತದಾನಕ್ಕೆ ಅಡ್ಡಿವುಂಟಾಗಿದೆ. ಹಿಂಸಾಚಾರ ಪೀಡಿತ ಮಣಿಪುರದ ಎರಡು ಮತಗಟ್ಟೆಗಳ ಬಳಿ ಮತದಾನದ ವೇಳೆ ಬಂದೂಕು ಸದ್ದು ಮಾಡಿದೆ. ಒಂದ್ಕಡೆ ಪೂರ್ವ ಇಂಪಾಲ್‌ನ ಬಳಿಯ ಮತಗಟ್ಟೆ ಬಳಿ ಶಸ್ತ್ರಧಾರಿ ದುಷ್ಕರ್ಮಿಗಳ ಗುಂಡೇಟಿಗೆ ಒಬ್ಬರು ಗಾಯಗೊಂಡಿದ್ದಾರೆ. ಅಲ್ದೇ ಗುಂಡಿನ ದಾಳಿ ಬಳಿಕ ಈ ದುಷ್ಕರ್ಮಿಗಳು ಮತಗಟ್ಟೆಗಳಿಗೆ ನುಗ್ಗಿ, ಅಲ್ಲಿದ್ದ ಚುನಾವಣಾ ದಾಖಲೆಗಳನ್ನ ಸುಟ್ಟು ಹಾಕಿದ್ದಾರೆ.. EVM ಧ್ವಂಸಗೊಳಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಸತತ ಮೂರು ಬಾರಿ ಗುಂಡಿನ ಶಬ್ದ ಕೇಳಿಬಂದಿರೊ ವಿಡಿಯೋವೊಂದನ್ನ ಯುವಕನೊಬ್ಬ ತನ್ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್‌ ಆಗಿದೆ. ಇನ್ನು ಗುಂಡಿನ ಸದ್ದು ಕೇಳಿ ಮತದಾನ ಮಾಡಲು ಬಂದ ಜನರೆಲ್ಲ ಓಡ್ತಿರೊ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಅತ್ತ ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಕ್ಷೇತ್ರಕ್ಕೂ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ಈ ವೇಳೆ ಪ್ರತ್ಯೇಕ ರಾಜ್ಯದ ಬೇಡಿಕೆಗಾಗಿ ಆಗ್ರಹಿಸಿ 6 ಜಿಲ್ಲೆಗಳ ಮತದಾರರು ಮತದಾನವನ್ನೇ ಬಹಿಷ್ಕರಿಸಿದ್ದಾರೆ. ಪೂರ್ವ ನಾಗಾಲ್ಯಾಂಡ್‌ನ ಪೀಪಲ್ಸ್‌ ಆರ್ಗನೈಜೇಶನ್‌ ಕರೆ ನೀಡಿದ್ದ ಮತದಾನ ಬಹಿಷ್ಕಾರಕ್ಕೆ ಆರು ಜಿಲ್ಲೆಗಳ ಒಟ್ಟು 4 ಲಕ್ಷಕ್ಕೂ ಅಧಿಕ ಮತದಾರರು ಮಧ್ಯಾಹ್ನ 1 ಗಂಟೆಗೆ ವರೆಗೆ ಮತವನ್ನೇ ಚಲಾಯಿಸಿರ್ಲಿಲ್ಲ. ಅಲ್ದೇ ಲೋಕಸಭಾ ಎಲೆಕ್ಷನ್‌ಗೆ ಪಬ್ಲಿಕ್‌ ಏಮರ್ಜೆನ್ಸಿ ಘೋಷಿಸಿದ್ದ ಈ ಸಂಘಟನೆ ಎಲ್ಲ ಪಕ್ಷಗಳ ಎಲೆಕ್ಷನ್ ಕ್ಯಾಂಪೇನ್‌ಗೂ ಅಡ್ಡಿಪಡಿಸಿತ್ತು ಅಂತ ಮಾಹಿತಿ ಲಭ್ಯ ಆಗಿದೆ.

-masthmagaa.com

Contact Us for Advertisement

Leave a Reply