ಅಮೆರಿಕದಲ್ಲಿ ದಾವಣಗೆರೆ ಮೂಲದ ಕುಟುಂಬದ ಮೂವರ ನಿಗೂಢ ಸಾವು!

masthmagaa.com:

ದಾವಣಗೆರೆ ಮೂಲದ ಟೆಕ್ಕಿ ದಂಪತಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಮೆರಿಕಾದ ಮೆರಿಲ್ಯಾಂಡ್‌ನ ಬಾಲ್ಟಿಮೋರ್​ನಲ್ಲಿ ನಡೆದಿದೆ. ಮೃತರನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ, ಪ್ರತಿಭಾ ಹಾಗೂ ಯಶ್ ಅಂತ ಗುರುತಿಸಲಾಗಿದೆ. ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದ ಯೋಗೇಶ್ ಹಾಗೂ ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್​ ಆಗಿದ್ದರು. ಮೊದಲು ಪತ್ನಿ ಹಾಗೂ ಪುತ್ರನಿಗೆ ಗುಂಡಿಕ್ಕಿ ತಾನು ಸಹ ಗುಂಡು ಹಾಕಿಸಿಕೊಂಡು ಸಾವನ್ನಪ್ಪಿರುವುದಾಗಿ ಸದ್ಯ ಪೊಲೀಸ್ ಮಾಹಿತಿಯಿಂದ ಗೊತ್ತಾಗಿದೆ. ಅದ್ರೆ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಂದ್ಹಾಗೆ ಒಂದೇ ಕುಟುಂಬದ ಮೂವರ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಸಾವಿಗೆ ನಿಖರ ಕಾರಣ ತಿಳಿಸುವಂತೆ ಮತ್ತು ಮೃತದೇಹ ತರಿಸಿಕೊಡುವಂತೆ ಮೃತ ಯೋಗೇಶ್ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್​ ಮಾಹಿತಿ ನೀಡಿದ್ದು, ಈಗಾಗಲೇ ವಿದೇಶಾಂಗ ಇಲಾಖೆ ಜೊತೆ ಸಂಪರ್ಕ‌ ಮಾಡಲಾಗಿದೆ. ಸ್ಥಳೀಯವಾಗಿ ಪೊಲೀಸ್ ಅಧಿಕಾರಿಗಳು ಸಾವು ಸಂಭವಿಸಿದ ಬಗ್ಗೆ ತನಿಖೆ ಮಾಡುತ್ತಿದ್ದಾರೆ‌. ಶವ ಸ್ವದೇಶಕ್ಕೆ ತರುವುದು ಇನ್ನಷ್ಟು ದಿನ ವಿಳಂಬ ಆಗಬಹುದು ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply