ಸೇಲ್ಸ್‌ ಗರ್ಲ್‌ ಆಗಿದ್ದ ಮಮತಾ ದೊಡ್ಡ ರಾಜ್ಯದ ಸಿಎಂ ಆಗಿದ್ದು ಹೇಗೆ?

masthmagaa.com:

ಫ್ರೆಂಡ್ಸ್​​, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯ ರೋಚಕ ಇತಿಹಾಸ ನಿಮಗೆ ಗೊತ್ತಾ..? ಅವರು ರಾಜಕೀಯದಲ್ಲಿ ಬೆಳೆದು ಬಂದಿದ್ದು ಹೇಗೆ..? ದೀದಿ ಮದುವೆಯಾಗದೇ ಇರಲು ಏನ್ ಕಾರಣ..? ಒಂದು ಕಾಲದಲ್ಲಿ ಕಾಂಗ್ರೆಸ್ ಯುವನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ ನಂತರ ಹೊಸ ಪಕ್ಷ ಕಟ್ಟಿದ್ದು ಹೇಗೆ? ಈಗ ಬಿಜೆಪಿಯ ಕಡುವಿರೋಧಿಯಾಗಿರೋ ಮಮತಾ, ಒಂದು ಟೈಮಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದ್ರು ಅನ್ನೋದು ನಿಮಗೆ ಗೊತ್ತಾ..? ಎಲ್ಲವನ್ನೂ ಡೀಟೇಲಾಗಿ ಹೇಳ್ತೀವಿ ನೋಡಿ..

ಮಮತಾ ಬ್ಯಾನರ್ಜಿ 1955ರ ಜನವರಿ 5ರಂದು ಕೊಲ್ಕತ್ತಾದ ಬೆಂಗಾಲಿ ಹಿಂದೂ ಫ್ಯಾಮಿಲಿಯಲ್ಲಿ ಹುಟ್ಟಿದ್ರು. ಇವ್ರ ತಂದೆ ಹೆಸರು ಪ್ರೊಮಿಲೇಶ್ವರ್‌ ಬ್ಯಾನರ್ಜಿ, ತಾಯಿ ಗಾಯತ್ರಿ ದೇವಿ. ಮಮತಾ ಬ್ಯಾನರ್ಜಿಗೆ 17 ವರ್ಷ ಆಗಿದ್ದಾಗ ತಂದೆ ಅನಾರೋಗ್ಯಕ್ಕೀಡಾಗಿ, ಸರಿಯಾಗಿ ಚಿಕಿತ್ಸೆ ಸಿಗದೇ ಸಾವನಪ್ಪಿದ್ರು. ಮಮತಾ ಬ್ಯಾನರ್ಜಿ ಕೊಲ್ಕತ್ತಾದ ಜೋಗಮಾಯ ದೇವಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಮತ್ತು ಅದೇ ಕಾಲೇಜಿನಲ್ಲಿ ಇಸ್ಲಾಮಿಕ್ ಇತಿಹಾಸದ ವಿಚಾರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದುಕೊಂಡ್ರು. ನಂತರ ಬಿ.ಎಡ್, ಕಾನೂನು ಪದವಿ ಕೂಡ ಪಡ್ಕೊಂಡ್ರು. ಈ ವೇಳೆ ಮಮತಾ ಬ್ಯಾನರ್ಜಿ ಹಲವು ಕಷ್ಟಗಳನ್ನು ಕೂಡ ಎದುರಿಸಿದ್ರು. ಮಕ್ಕಳಿಗೆ ಟ್ಯೂಷನ್ ನೀಡೋದ್ರಿಂದ ಹಿಡಿದು, ಸೇಲ್ಸ್ ಗರ್ಲ್ ಆಗಿಯೂ ಕೆಲಸ ಮಾಡಿದ್ರು.

ಮಮತಾ ಬ್ಯಾನರ್ಜಿ 15ನೇ ವಯಸ್ಸಿಗೇ ರಾಜಕೀಯದ ಮೇಲೆ ಆಕರ್ಷಣೆ ಹೊಂದಿದ್ರು. ಆಗ ದೇಶದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ರು. ಹಾಗಾಗಿ ಮಮತಾ ಬ್ಯಾನರ್ಜಿ ಕೂಡ ಅವರಂತೆ ಆಗಬೇಕು ಅಂತ ಕನಸು ಕಂಡಿದ್ರು. ಜೋಗಮಾಯಾ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿದ್ಯಾರ್ಥಿ ಪರಿಷದ್‌ ಸ್ಥಾಪಿಸಿದ್ರು. ಇದು ಕಾಂಗ್ರೆಸ್​​​ನ ಸ್ಟೂಡೆಂಟ್‌ ವಿಂಗ್‌ ಆಗಿತ್ತು. ನಂತರ ಓದು ಎಲ್ಲಾ ಮುಗಿದ್ಮೇಲೆ ಕಾಂಗ್ರೆಸ್ ಸೇರೋ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ರು. 1970ರಲ್ಲಿ ಅತಿ ಬೇಗನೇ ಸ್ಥಳೀಯ ಕಾಂಗ್ರೇಸ್‌ನಲ್ಲಿ ಉನ್ನತ ಸ್ಥಾನಕ್ಕೆ ಏರಿದ್ರು. ಪಶ್ಚಿಮ ಬಂಗಾಳದಲ್ಲಿ 1976ರಿಂದ 1980ರವರೆಗೆ ಮಹಿಳಾ ಕಾಂಗ್ರೆಸ್​​​​​ನ​ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ರು. 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಭಾರತದ ಅತ್ಯಂತ ಕಿರಿಯ ಸಂಸದರಾದ್ರು. ಈ ಚುನಾವಣೆಯಲ್ಲಿ ಅವರು ಸೋಲಿಸಿದ್ದು ಸಾಮಾನ್ಯ ಅಭ್ಯರ್ಥಿಯನ್ನಲ್ಲ.. ಕಮ್ಯೂನಿಸ್ಟ್ ಪಕ್ಷದಲ್ಲೇ ದೊಡ್ಡ ಹೆಸರು ಮಾಡಿದ್ದ ಸೋಮನಾಥ್ ಚಟರ್ಜಿಯನ್ನು.. ಈ ಮೂಲಕ ದೀದಿ ದೈತ್ಯ ಸಂಹಾರಿ ಅನ್ನೋ ಬಿರುದು ಪಡ್ಕೊಂಡ್ರು. ಮುಂದೆ ಅಖಿಲ ಭಾರತ ಯುವ ಕಾಂಗ್ರೆಸ್​​​​​ನ ಕಾರ್ಯದರ್ಶಿಯೂ ಆದ್ರು. ಆದ್ರೆ 1989ರಲ್ಲಿ ಕಾಂಗ್ರೆಸ್​​​ನಲ್ಲಿ ಇವರ​​​​​​​​ ವಿರೋಧಿಗಳು ಹೆಚ್ಚಿದ ಕಾರಣ ಮಮತಾ ಬ್ಯಾನರ್ಜಿ ತಮ್ಮ ಸ್ಥಾನ ಕಳೆದುಕೊಂಡ್ರು. ಆದ್ರೂ ಕೂಡ 1991ರಲ್ಲಿ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ರು. ಈ ವೇಳೆ ಪಿವಿ ನರಸಿಂಹರಾವ್ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ಮಾನವ ಸಂಪನ್ಮೂಲ, ಯುವಜನ ಮತ್ತು ಕ್ರೀಡೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯಖಾತೆ ಸಚಿವೆಯನ್ನಾಗಿ ಮಾಡಲಾಯ್ತು.. ಪಶ್ಚಿಮ ಬಂಗಾಳದಲ್ಲಿ ಅವ್ರ ಬೆಂಬಲಿಗರು ಪ್ರೀತಿಯಿಂದ ದೀದಿ ಅಂತ ಕರೆಯೋಕೆ ಶುರು ಮಾಡಿದ್ರು.

ಕಾಂಗ್ರೆಸ್​​ನಲ್ಲಿ ತಮ್ಮ ನಿರ್ಧಾರಗಳಿಗೆ, ಚಿಂತನೆಗಳಿಗೆ ಬೆಲೆ ಸಿಗದೇ ಇದ್ದಾಗ 1997ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್​​ನಿಂದ ಹೊರಬಂದ್ರು. ಹಾಗಂತ ಸುಮ್ಮನೆ ಕೂರಲಿಲ್ಲ.. ಬೇರೆ ಪಕ್ಷಕ್ಕೂ ಸೇರಲಿಲ್ಲ.. ಪಶ್ಚಿಮ ಬಂಗಾಳದ ಲೋಕಲ್ ಪಾರ್ಟಿಯಾಗಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಸ್ಥಾಪಿಸಿದರು. ಇದು ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್​ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು. ಒಮ್ಮೆ ಸಮಾಜವಾದಿ ಪಕ್ಷದ ಸಂಸದ ದರೋಗಾ ಪ್ರಸಾದ್‌ ಸರೋಜ್‌ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದರಿಂದ ಅವರನ್ನ ಮಮತಾ ಬ್ಯಾನರ್ಜಿ ಕೊರಳಪಟ್ಟಿ ಹಿಡಿದು ಲೋಕಸಭೆಯ ಸದನದ ಬಾವಿಯಿಂದ ಹೊರಗೆ ಎಳೆದುಕೊಂಡು ಹೋಗಿ ಅಬ್ಬರಿಸಿದ್ದರು. ನಂತ್ರ 1998ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 7ರಲ್ಲಿ ಗೆದ್ದುಕೊಂಡ್ರು. 1999ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಬಿಜೆಪಿ ನೇತೃತ್ವದ ಎನ್​​​ಡಿಎ ಒಕ್ಕೂಟ ಸೇರಿಕೊಂಡ್ರು. ಆಗ ಅವರಿಗೆ ರೈಲ್ವೆ ಖಾತೆ ನೀಡಲಾಯ್ತು.

2000ನೇ ಇಸವಿಯಲ್ಲಿ ಮಮತಾ ತಮ್ಮ ಮೊದಲ ರೈಲ್ವೇ ಬಜೆಟ್‌ ಮಂಡಿಸಿದ್ರು. ಆಗ ಅವರು ತವರು ರಾಜ್ಯ ಪಶ್ಚಿಮ ಬಂಗಾಳಕ್ಕೆ ಏನೆಲ್ಲಾ ಭರವಸೆಯನ್ನು ನೀಡಿದ್ರೋ ಅದೆಲ್ಲವನ್ನು ಪೂರ್ಣಗೊಳಿಸಿದ್ರು. ಆದ್ರೆ 2001ರ ಆರಂಭದಲ್ಲಿ ಸರ್ಕಾರದ ಕೆಲ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಸಂಪುಟದಿಂದ ಹೊರನಡೆದ್ರು. 2001ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಯುಪಿಎ ಜೊತೆ ಮೈತ್ರಿ ಮಾಡಿಕೊಂಡ್ರು. ಅಲ್ಲು ಏನು ಸಕ್ಸಸ್ ಕಾಣಲಿಲ್ಲ.. ಹೀಗಾಗಿ ಮತ್ತೆ 2004ರಲ್ಲಿ ಎನ್​ಡಿಎ ಒಕ್ಕೂಟ ಸೇರಿ ಸಚಿವೆಯಾದ್ರು. ಆದ್ರೆ 2004ರ ಲೋಕಸಭೆ ಚುನಾವಣೆಯಲ್ಲಿ ಇಡೀ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಮಮತಾ ಬ್ಯಾನರ್ಜಿ ಮಾತ್ರ ಗೆಲುವು ದಾಖಲಿಸಿದ್ರು. 2006ರ ವಿಧಾನಸಭೆ ಚುನಾವಣೆಯಲ್ಲೂ ಸೋಲು ಕಂಡ ಟಿಎಂಸಿ, ಅರ್ಧದಷ್ಟು ಸಿಟ್ಟಿಂಗ್ ಎಂಎಲ್ಎಗಳು ಸೋತು ಹೋದ್ರು. ಇನ್ನು ಲೋಕಸಭೆಯಲ್ಲಿ ಏಕೈಕ ಟಿಎಂಸಿ ಸಂಸದೆಯಾಗಿದ್ದ ಮಮತಾ, ಬಾಂಗ್ಲಾದೇಶದಿಂದ ವಲಸೆ ಪ್ರಮಾಣ ಹೆಚ್ಚಾದ ವಿಚಾರದಲ್ಲಿ ಒಂದು ನಿಲುವಳಿ ಸೂಚನೆ ಮಂಡಿಸಿದ್ರು. ಆದ್ರೆ ಅದಕ್ಕೆ ಸ್ಪೀಕರ್ ಸೋಮನಾಥ್ ಚಟರ್ಜಿ ಅವಕಾಶ ನೀಡದೇ ಇದ್ದಿದ್ದರಿಂದ, ಉಪಸಭಾಪತಿಯಾಗಿದ್ದ ಚರಣ್​​ಜಿತ್ ಸಿಂಗ್ ಅಟ್ವಾಲ್ ಮೇಲೆ ತಮ್ಮ ರಾಜೀನಾಮೆ ಪತ್ರ ಎಸೆದು ಹೊರಬಂದಿದ್ರು.

2005ರಲ್ಲಿ ಬುದ್ಧದೇಬ್ ಭಟ್ಟಾಚಾರ್ಜೀಯ ಕಮ್ಯೂನಿಸ್ಟ್ ಸರ್ಕಾರ ಉದ್ಯಮಗಳ ಅಭಿವೃದ್ಧಿಗಾಗಿ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ತು. ಅದರ ವಿರುದ್ಧ ಮಮತಾ ಬ್ಯಾನರ್ಜಿ ಹೋರಾಟ ಶುರು ಮಾಡಿದ್ರು. ಇದು ದೀದಿಗೆ ತುಂಬಾ ಹೆಸರು ತಂದ ಕೊಡ್ತು. ಅದ್ರಲ್ಲೂ 2006ರಲ್ಲಿ ಸಿಂಗೂರಿನಲ್ಲಿ ಟಾಟಾ ನ್ಯಾನೋ ಕಾರು ಉತ್ಪಾದಕ ಘಟಕ ಸ್ಥಾಪನೆಗೆ ಪ್ಲಾನ್ ಮಾಡಲಾಗಿತ್ತು. ಆದ್ರೆ ದೀದಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ರು. ಸ್ಟ್ರೈಕ್ ಎಲ್ಲಾ ಮಾಡಿದ್ರು. ಟಿಎಂಸಿ ಶಾಸಕರು ವಿಧಾನಸಭೆಯಲ್ಲಿ ಫರ್ನೀಚರ್ ಧ್ವಂಸ ಮಾಡಿ, ಗಲಾಟೆ ಮಾಡಿದ್ರು. ಈ ವೇಳೆ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಪರ್ಸನಲ್ ಆಗಿ, ರತನ್ ಟಾಟಾಗೇ ಒಂದು ಮೆಸೇಜ್ ಹಾಕಿ, ಗುಜರಾತ್​​​ಗೆ ಬನ್ನಿ.. ಇಲ್ಲಿ ನ್ಯಾನೋ ಕಾರು ಘಟಕ ಸ್ಥಾಪನೆಗೆ ಕೆಲವೇ ದಿನಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡೋದಾಗಿ ಹೇಳಿದ್ರು. ಅದರಂತೆ ಸಿಂಗೂರಿನ ಟಾಟಾ ನ್ಯಾನೋ ಘಟಕ ಗುಜರಾತ್​​ಗೆ ಬಂತು.

ನಂತರ 2007ರಲ್ಲಿ ನಂದಿಗ್ರಾಮದಲ್ಲಿ 10 ಸಾವಿರ ಎಕರೆ ಪ್ರದೇಶವನ್ನು ಸ್ಪೆಷಲ್ ಎಕನಾಮಿಕ್ ಝೋನ್ ಆಗಿ ಅಭಿವೃದ್ಧಿಪಡಿಸಲು ಕಮ್ಯೂನಿಸ್ಟ್ ಸರ್ಕಾರ ಪ್ಲಾನ್ ಮಾಡ್ತು. ಅದರ ವಿರುದ್ಧ ಕೂಡ ಮಮತಾ ಪ್ರತಿಭಟನೆ ಶುರು ಮಾಡಿದ್ರು. ಈ ವೇಳೆ ಭಾರಿ ಹಿಂಸಾಚಾರ ಕೂಡ ನಡೀತು. ಪೊಲೀಸರ ಗುಂಡಿಗೆ 14 ಮಂದಿ ಬಲಿಯಾದ್ರೆ, 70ಕ್ಕೂ ಹೆಚ್ಚು ಮಂದಿ ಗಾಯಗೊಂಡ್ರು. ಈ ಘಟನೆ ದೀದಿಗೆ ಪಶ್ಚಿಮ ಬಂಗಾಳದಲ್ಲಿ ತುಂಬಾ ಜನಪ್ರಿಯತೆ ತಂದು ಕೊಡ್ತು. 2009ರ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಜೊತೆ ಸೇರಿಕೊಂಡು 26 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು. ದೀದಿ ಮತ್ತೆ ಯುಪಿಎ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾದ್ರು.

ನಂತ್ರ 2011ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಪ್ರಚಂಡ ಗೆಲುವು ತಂದು ಕೊಡ್ತು. ಈ ಮೂಲಕ 34 ವರ್ಷಗಳ ಕಮ್ಯೂನಿಸ್ಟ್ ಆಡಳಿತಕ್ಕೆ ಅಂತ್ಯ ಬರೆದ್ರು. ನಂತರ 2016ರಲ್ಲಂತೂ ಯುಪಿಎಯಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧಿಸಿದ ಟಿಎಂಸಿ, 294 ಕ್ಷೇತ್ರಗಳ ಪೈಕಿ 211ರಲ್ಲಿ ಗೆದ್ದು ಅದ್ದೂರಿ ಗೆಲುವು ದಾಖಲಿಸಿತು.

ಇನ್ನು ಇವರ ಮೇಲೆ ಸಿಪಿಎಂ ಅಂದ್ರೆ ಕಮ್ಯೂನಿಸ್ಟ್​​​ ಪಕ್ಷದಿಂದ ಹಲವಾರು ಭಾರಿ ದಾಳಿ ಕೂಡ ನಡೀತು. ಹಲ್ಲೆ ನಡೆಸಲಾಯ್ತು. ಇದ್ರಿಂದ ಮಮತಾ ದೀದಿ ಮತ್ತಷ್ಟು ಗಟ್ಟಿಯಾಗುತ್ತಲೇ ಸಾಗಿದ್ರು ಅಂತ ಹೇಳ್ಬೋದು.. ಬಿಳಿ ಸೀರೆ.. ಆಭರಣ ಇಲ್ಲ.. ಮೇಕಪ್ ಇಲ್ಲ.. ಅದ್ಧೂರಿತನ ಇಲ್ಲ.. ಕಾಲಿಗೆ ಹವಾಯ್ ಚಪ್ಪಲ್.. ಇದು ದೀದಿಯ ಗುರುತಾಯ್ತು.. ಈ ಅವಧಿಯಲ್ಲಿ ದೀದಿ ವಿರುದ್ಧ ಹಲವು ಹಗರಣ, ಆರೋಪಗಳು ಕೂಡ ಕೇಳಿ ಬಂದಿವೆ. ಈ ಸಲ ಚುನಾವಣೆಯಲ್ಲಿ ದೀದಿ 16.21 ಲಕ್ಷ ರೂಪಾಯಿ ಮೊತ್ತದ ಆಸ್ತಿ ಹೊಂದಿರೋದಾಗಿ ಘೋಷಿಸಿದ್ದಾರೆ. ಇನ್ನು ಟಿಎಂಸಿಯಲ್ಲಿ ಸ್ವಜನ ಪಕ್ಷಪಾತ ಜಾಸ್ತಿಯಾಗಿದೆ. ಮಮತಾ ಅಳಿಯ ಅಭಿಷೇಕ್ ಬ್ಯಾನರ್ಜಿ ಸರ್ಕಾರದಲ್ಲಿ ಕೈಯಾಡಿಸೋದು ಜಾಸ್ತಿಯಾಗ್ತಿದೆ ಅಂತ ಆರೋಪಿಸಿ ಈ ಸಲ ಚುನಾವಣೆಯಲ್ಲಿ ಹಲವು ಟಿಎಂಸಿ ನಾಯಕರು ಬಿಜೆಪಿ ಸೇರಿದ್ದರು.

ಇದರಲ್ಲಿ ಪ್ರಮುಖವಾಗಿ ಸುವೇಂದು ಅಧಿಕಾರಿ. ನಂದಿಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಮತಾ ಬ್ಯಾನರ್ಜಿಯ ಚಾಣಕ್ಯನಂತೆ ಕೆಲಸ ಮಾಡಿದ್ದವರು ಸುವೇಂದು. ಆದ್ರೆ ಈ ಸಲ ಬಿಜೆಪಿ ಸೇರಿ ಮಮತಾ ಬ್ಯಾನರ್ಜಿಯನ್ನೇ ಸೋಲಿಸಿದ್ದಾರೆ. ಗೆದ್ದು ಅಧಿಕಾರ ಹಿಡಿದರೂ ಮಮತಾ ನಂದಿಗ್ರಾಮದಲ್ಲಿ ಸೋತು ಅವಮಾನ ಎದುರಿಸಲು ಕಾರಣರಾಗಿದ್ದಾರೆ ಈ ಸುವೇಂದು ಅಧಿಕಾರಿ. ಈ ಮೂಲಕ ಟಿಎಂಸಿಯ ಮೂರನೇ ಸಲದ ಗೆಲುವಿನ ಖುಷಿ ಒಂಚೂರು ಕಮ್ಮಿ ಆಗುವಂತಾಗಿದೆ.

-masthmagaa.com

Contact Us for Advertisement

Leave a Reply