ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದಲೂ ಅದಾನಿ ಔಟ್!

masthmagaa.com:

ಹಿಂಡನ್‌ಬರ್ಗ್‌ ಸಂಸ್ಥೆಯ ವರದಿಯಿಂದ ಗೌತಮ್‌ ಅದಾನಿ ಸಾಮ್ರಾಜ್ಯ ಅಕ್ಷರಶಃ ಅಧಃ ಪತನ ಕಾಣ್ತಾಯಿದೆ. ಒಂದೇ ಒಂದು ವರದಿ ಅದಾನಿಯವರ ಸಂಪತ್ತಿನ ಕೋಟೆಗೆ ಸಿಡಿಲಿನಂತೆ ಬಡಿದಿದ್ದು ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗ್ತಿದೆ. ಪರಿಣಾಮ ಈಗ ಅದಾನಿ ವಿಶ್ವದ ಟಾಪ್‌ 10 ಶ್ರೀಮಂತರ ಪಟ್ಟಿಯಿಂದಲೂ ಹೊರಬಂದಿದ್ದಾರೆ. ಅದಾನಿ ಸಮೂಹದ ಸಂಸ್ಥೆಗಳ ಷೇರುಗಳ ಹೀಗೆ ಕುಸಿಯುತ್ತಾ ಹೋದ್ರೆ, ಶೀಘ್ರದಲ್ಲೇ ಅವರು ಏಷ್ಯಾದ ಶ್ರೀಮಂತ ವ್ಯಕ್ತಿ ಪಟ್ಟಿಯಿಂದಲೂ ಕೆಳಗಿಳಿಯಬಹುದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ನಲ್ಲಿ ಕಳೆದ ಸಲ 3ನೇ ಸ್ಥಾನದಲ್ಲಿದ್ದ ಅದಾನಿ, ಈಗ 11ಕ್ಕೆ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ 84.4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 6,92,080 ಕೋಟಿ ಸಂಪತ್ತನ್ನ ಹೊಂದಿ, ಭಾರತದಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಧ್ಯಕ್ಷ ಮುಖೇಶ್‌ ಅಂಬಾನಿ ಅವ್ರಿಗಿಂತ ಸ್ವಲ್ಪ ಮುಂದಿದಾರೆ ಅಷ್ಟೇ. ಮಖೇಶ್‌ ಅಂಬಾನಿ ಅವರು ಬ್ಲೂಂಬರ್ಗ್‌ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅದಾನಿಗಿಂತ ಒಂದು ಸ್ಥಾನ ಕೆಳಗೆ ಅಂದ್ರೆ 12ನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಸಂಪತ್ತು 82.2 ಬಿಲಿಯನ್‌ ಡಾಲರ್‌, ಅಂದ್ರೆ 6,74,040 ಕೋಟಿ ರೂಪಾಯಿ ಇದೆ. ಇಬ್ರ ನಡುವಿನ ಅಂತರ ಸುಮಾರು 2 ಬಿಲಿಯನ್‌ ಡಾಲರ್ ಮಾತ್ರ ಇದೆ. ಇನ್ನು ಜಗತ್ತಿನ ಕುಬೇರರ ಪಟ್ಟಿಯನ್ನ ನೋಡಿದಾಗ 189 ಬಿಲಿಯನ್‌ ಡಾಲರ್‌ ಸಂಪತ್ತಿನೊಂದಿಗೆ ಬರ್ನಾರ್ಡ್‌ ಆರ್ನಲ್ಟ್‌ ಮೊದಲ ಸ್ಥಾನದಲ್ಲಿದ್ದಾರೆ. 160 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿರೋ ಮಸ್ಕ್‌ 2ನೇ ಸ್ಥಾನದಲ್ಲಿದ್ದಾರೆ. ಇನ್ನು 124 ಬಿಲಿಯನ್‌ ಡಾಲರ್‌ ಸಂಪತ್ತಿನ ಒಡೆಯ ಜೆಫ್‌ ಬೆಜೋಸ್‌ ಮೂರನೇ ಸ್ಥಾನದಲ್ಲಿದ್ದಾರೆ. ಆದ್ರೆ ಮತ್ತೊಂದು ಕಡೆ ಅದಾನಿ ತಮ್ಮ FPO ಷೇರುಗಳನ್ನ ಯಶಸ್ವಿಯಾಗಿ ಮಾರಿದ್ದಾರೆ. ಷೇರು ಪೇಟೆಯಲ್ಲಿ ಈಗಾಗಲೇ ರೆಜಿಸ್ಟರ್‌ ಆಗಿರೋ ಕಂಪನಿ ಮತ್ತೆ ಹೊಸದಾಗಿ ಷೇರುಗಳನ್ನ ಮಾರಾಟಕ್ಕೆ ಇಡೋದನ್ನ FPO, Follow-on-Public-Offer ಅಂತ ಹೇಳ್ತಾರೆ. ಸೋ ಈ ರೀತಿ ಅದಾನಿ ತಮ್ಮ ಅದಾನಿ ಎಂಟರ್‌ಪ್ರೈಸಸ್‌ನ 20 ಸಾವಿರ ಕೋಟಿ ಮೌಲ್ಯದ ಸುಮಾರು 4.5 ಕೋಟಿ ಷೇರುಗಳನ್ನ ಪಣಕ್ಕಿಟ್ಟಿದ್ರು. ಅದಕ್ಕೀಗ 5 ಕೋಟಿಗು ಅಧಿಕ ಅಥವಾ 112% ಬಿಡ್‌ಗಳು ಸಲ್ಲಿಕೆಯಾಗಿವೆ. ಇದೇ ವೇಳೆ ಕಳೆದ ಎರಡು ಸೆಶನ್ ಗಳಲ್ಲಿ ಭಾರೀ ಕುಸಿತ ಕಂಡಿದ್ದ ಅದಾನಿ ಗ್ರೂಪ್ ಶೇರುಗಳು ಇಂದು ಕೊಂಚ ಚೇತರಿಕೆ ಕಂಡುಬಂದಿವೆ.

-masthmagaa.com

Contact Us for Advertisement

Leave a Reply