ಗಾಜಾ ಇಬ್ಭಾಗ ಎಂದ ಇಸ್ರೇಲ್‌! ಕೆಲವೇ ಗಂಟೆಗಳಲ್ಲಿ ಅಂತಿಮ ಯುದ್ಧ!

masthmagaa.com:

ಹಮಾಸ್‌-ಇಸ್ರೇಲ್‌ ನಡುವಿನ ಭೀಕರ ಕಾಳಗ 30ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ರಾತ್ರೀ ಇಡೀ ಗಾಜಾ ಸಿಟಿಯನ್ನ ಇಸ್ರೇಲ್‌ ಸೇನೆ ಸುತ್ತುವರೆದಿದೆ. ಜೊತೆಗೆ ಗಾಜಾ ಸಿಟಿಯನ್ನ ಇಬ್ಬಾಗ ಮಾಡಿದ್ದೀವಿ. ಉತ್ತರ ಮತ್ತು ದಕ್ಷಿಣ ಅಂತ ಪ್ರತ್ಯೇಕಗೊಳಿಸಿದ್ದೀವಿ ಅಂತ ಇಸ್ರೇಲ್‌ ಸೇನಾ ವಕ್ತಾರ ಡೇನಿಯಲ್‌ ಹಗರಿ ಹೇಳಿದ್ದಾರೆ. ಜೊತೆಗೆ ಹಮಾಸ್‌ ವಿರುದ್ಧದ ಈ ಯುದ್ಧ ಮಹತ್ವದ ಘಟ್ಟ ತಲುಪುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್‌ ಪಡೆಗಳು ಗಾಜಾ ಒಳಗಡೆ ಎಂಟ್ರಿ ಕೊಡುವ ಸಾಧ್ಯತೆಯಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ದ ಅಂತಿಮ ಘಟ್ಟಕ್ಕೆ ತಲುಪಲಿದೆ ಅಂತ ಹೇಳಲಾಗ್ತಿದೆ. ಇನ್ನೊಂದ್‌ ಕಡೆ ಗಾಜಾದಲ್ಲಿ ಜಗತ್ತೇ ಬೆಚ್ಚಿಬೀಳುವಂತ ಹಮಾಸ್‌ ಉಗ್ರರ ರಾಕೆಟ್‌ ಲೋಕ ಬಯಲಾಗಿದೆ. ಸಿಕ್ಕ ಸಿಕ್ಕ ಕಡೆಯಲ್ಲಾ ಹಮಾಸ್‌ಗಳು ತಮ್ಮ ರಾಕೆಟ್‌ ಲಾಂಚರ್‌ಗಳನ್ನ ಇಟ್ಟಿರೋದು ಗೊತ್ತಾಗಿದೆ. ಮಕ್ಕಳ ಸ್ವಿಮಿಂಗ್‌ಪೂಲ್‌, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿ ತಮ್ಮ ರಾಕೆಟ್‌ ಲಾಂಚರ್‌ಗಳನ್ನ ಬಚ್ಚಿಟ್ಟಿರೋದು ಬೆಳಕಿಗೆ ಬಂದಿದೆ. ಈ ಕುರಿತಾದ ವಿಡಿಯೋ ಒಂದನ್ನ ಇಸ್ರೇಲ್‌ ಸೇನೆ ರಿಲೀಸ್‌ ಮಾಡಿದೆ. ಹಮಾಸ್‌ ಉಗ್ರರು ನಾಗರಿಕರನ್ನ ಸೇಫ್ಟಿ ಶೀಲ್ಡ್‌ಗಳಾಗಿ ಬಳಸ್ತಾರೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ ಅಂತ ಇಸ್ರೇಲ್‌ ಸೇನೆ ಹೇಳಿದೆ. ಇತ್ತ ಹಮಾಸ್‌- ಇಸ್ರೇಲ್‌ ಯುದ್ಧ ಬಹುತೇಕ ಮಿಡಲ್‌ ಈಸ್ಟ್‌ನಾದ್ಯಂತ ಹರಡೋ ಸೂಚನೆ ಸಿಕ್ತಾ ಇದೆ. ಈಗ ಲೆಬನಾನ್‌ ಮೇಲೂ ಇಸ್ರೇಲ್‌ ತನ್ನ ದಾಳಿ ಮುಂದುವರೆಸಿದೆ. ನಿನ್ನೆ ರಾತ್ರಿ ಲೆಬನಾನ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌ ಮಾಡಿದ್ದು, ದಾಳಿಯಲ್ಲಿ ಮೂವರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ 4 ಜನ ಮೃತಪಟ್ಟಿದ್ದಾರೆ ಅಂತ ಲೆಬನಾನ್‌ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಇಸ್ರೇಲ್‌ ದಾಳಿಗೆ ತಕ್ಕ ಉತ್ತರ ಕೊಡಲು ನಾವು ಇಸ್ರೇಲ್‌ ಮೇಲೆ ಹಲವು ಬಾರಿ ರಾಕೆಟ್‌ ದಾಳಿ ಮಾಡಿದ್ದೀವಿ ಅಂತ ಲೆಬನಾನ್‌ನ ಹೆಜ್ಬೊಲ್ಲ ಸಂಘಟನೆ ಹೇಳಿಕೆ ಕೊಟ್ಟಿದೆ. ಜೊತೆಗೆ ನಾಗರಿಕರ ವಿರುದ್ಧ ಇಸ್ರೇಲ್‌ ನಡೆಸುತ್ತಿರೋ ಅಪರಾಧಕ್ಕೆ ಬೆಲೆ ತೆರಲೇಬೇಕು ಅಂತ ಹೆಜ್ಬೊಲ್ಲ ಅಧಿಕಾರಿ ಹಸ್ಸನ್‌ ಫದ್ಲಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಇನ್ನು ಲೆಬನಾನ್‌ ಮೇಲಿನ ದಾಳಿಯನ್ನ ಅಲ್ಲಿನ ಪ್ರಧಾನಿ ನಜೀಬ್‌ ಮಿಕಟಿ ಖಂಡಿಸಿದ್ದಾರೆ. ಇದೊಂದು ಘೋರ ಅಪರಾಧ ಅಂತ ಕರೆದಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ದೂರು ದಾಖಲಿಸೋದಾಗಿ ಲೆಬನಾನ್‌ ವಿದೇಶಾಂಗ ಸಚಿವ ಅಬ್ದಲ್ಲಾ ಬೌ ಹಬಿಬಿ ತಿಳಿಸಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ನಾವು ಯುದ್ಧಕ್ಕೆ ಧುಮುಕಲು ಎಲ್ಲಾ ರೀತಿ ಮಾರ್ಗಗಳಿವೆ ಅಂತ ಹೆಜ್ಬೊಲ್ಲ ಚೀಫ್‌ ಇಸ್ರೇಲ್‌ಗೆ ವಾರ್ನ್‌ ಮಾಡಿದ್ದ. ಇದಾದ ಕೆಲವೇ ಹೊತ್ತಲ್ಲಿ ಇಸ್ರೇಲ್‌, ಲೆಬನಾನ್‌ ಮೇಲೆ ದಾಳಿ ಪ್ರಾರಂಭಿಸಿತ್ತು. ಈಗ ಅದನ್ನ ನಾವು ಒಪ್ಪಲ್ಲ ಅಂತ ಲೆಬನಾನ್‌ ಸರ್ಕಾರ ಹೇಳಿದೆ.

ಇನ್ನೊಂದ್‌ ಕಡೆ ಮಿಡಲ್‌ ಈಸ್ಟ್‌ನ ಗುಪ್ತಚರ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಅಮೆರಿಕ ಗುಪ್ತಚರ ಇಲಾಖೆ CIA ಡೈರಕ್ಟರ್‌ ವಿಲಿಯಮ್‌ ಜೆ ಬರ್ನ್ಸ್‌ ಅವರು ಇಸ್ರೇಲ್‌ಗೆ ಬಂದಿಳಿದಿದ್ದಾರೆ. ಈ ಭಾಗದ ಪಾಲುದಾರ ರಾಷ್ಟ್ರಗಳ ಜೊತೆಯಲ್ಲಿ ತಮ್ಮ ಗುಪ್ತಚರ ಸಹಕಾರವನ್ನ ವಿಸ್ತರಿಸುವ ಉದ್ಧೇಶದಿಂದ ಬರ್ನ್ಸ್‌ ಈ ಭೇಟಿ ಕೊಟ್ಟಿದ್ದಾರೆ ಅಂತ ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮಧ್ಯ ಪ್ರಾಚ್ಯ ರಾಷ್ಟ್ರಗಳ ಪ್ರವಾಸದಲ್ಲಿರೋ ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್‌ ಅವರು ಇರಾಕ್‌ಗೆ ದಿಢೀರ್‌ ಭೇಟಿ ಕೊಟ್ಟಿದ್ದಾರೆ. ಈ ನಡುವೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮತ್ತೊಮ್ಮೆ ಇಸ್ರೇಲ್‌- ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದಂತೆ ಮಾತಾಡಿದ್ದಾರೆ. ʻಯಾರ ಕೈಗಳು ಕ್ಲೀನಾಗಿಲ್ಲ. ಹಮಾಸ್‌ ಮತ್ತು ಇಸ್ರೇಲ್‌ ಇಬ್ರೂ ಅಪರಾಧ ಎಸಗಿದ್ದಾರೆ ಅಂತ ಒಬಾಮ ಹೇಳಿದ್ದಾರೆ. ಜೊತೆಗೆ ಹಮಾಸ್‌ನ ಕ್ರಮಗಳು ಮತ್ತು ಪ್ಯಾಲಸ್ತೈನ್‌ನ ಪ್ರದೇಶಗಳನ್ನ ಆಕ್ರಮಿಸಿಕೊಂಡಿರೋ ಇಸ್ರೇಲ್‌ನ ನಡೆ ಇವರೆಡೂ ಭಯಾನಕವಾಗಿದೆ. ಈ ಯುದ್ಧಕ್ಕೆ ಪರಿಹಾರ ಅಂದ್ರೆ ರಿಯಾಲಿಟಿಯನ್ನ ಅರ್ಥ ಮಾಡಿಕೊಂಡು ಸಾಲ್ವ್‌ ಮಾಡಿಕೊ‍ಳ್ಳಬೇಕು ಅಂತ ಒಬಾಮ ಅಭಿಪ್ರಾಯಪಟ್ಟಿದ್ದಾರೆ. ಅತ್ತ ಗಾಜಾ ಮೇಲೆ ಅಣ್ವಸ್ತ್ರ ಬಳಸೋ ಆಯ್ಕೆಯಿದೆ ಅಂತ ಹೇಳಿದ್ದ ಇಸ್ರೇಲ್‌ನ ಹೆರಿಟೇಜ್‌ ಮಿನಿಸ್ಟರ್‌ ಅಮಿಚೈ ಎಲಿಯಾಹುರನ್ನ ಎಲ್ಲಾ ಸರ್ಕಾರಿ ಮೀಟಿಂಗ್‌ಗಳಿಂದ ಸಸ್ಪೆಂಡ್‌ ಮಾಡಲಾಗಿದೆ, ಮುಂದಿನ ಆದೇಶದವರೆಗೂ ಎಲಿಯಾಹು ಇಸ್ರೇಲ್‌ ಸರ್ಕಾರದ ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply