ದೇಶದಲ್ಲಿ ಹೆಚ್ಚಾಗ್ತಿದೆ ಹನಿಟ್ರ್ಯಾಪ್‌ ! ಪಾಕ್‌ ಸ್ಪೈಗೆ ಹಣಕಾಸು ಸಚಿವಾಲಯದ ಮಾಹಿತಿ ರವಾನೆ?

masthmagaa.com:

ದೇಶದ ಭದ್ರತೆಗೆ ಟೆರರಿಸ್ಟ್‌ಗಳು, ಶತ್ರು ಸೈನ್ಯಗಳ ಶಸ್ತ್ರಾಸ್ತ್ರಗಳು ಸವಾಲಾಗಬಹುದು ಅಂದ್ಕೊಂಡಿದ್ರೆ, ಈಗ ಹನಿಟ್ರ್ಯಾಪ್‌ ಅನ್ನೋದು ಅವೆಲ್ಲದಕ್ಕಿಂತ ಅಪಾಯಕಾರಿ ಆಯುಧವಾಗಿ ಕಂಡುಬರ್ತಿದೆ. ಇತ್ತೀಚೆಗೆ ತಾನೆ DRDO ವಿಜ್ಞಾನಿಯೊಬ್ರು ಹನಿಟ್ರ್ಯಾಪ್‌ ಆಗಿ ದೇಶದ ರಹಸ್ಯ ಮಾಹಿತಿಗಳನ್ನ ಪಾಕ್‌ ಗೂಡಚಾರಿಣಿಗೆ ಕೊಟ್ಟ ಬೆನ್ನಲ್ಲೇ ಈಗ ಮತ್ತೊಂದು ಅಂತಹದ್ದೇ ಕೇಸ್‌ ಬಯಲಾಗಿದೆ. ನವೀನ್‌ ಪಾಲ್‌ ಅನ್ನೋ ಹಣಕಾಸು ಸಚಿವಾಲಯದ ಉದ್ಯೋಗಿಯೊಬ್ಬ ಪಾಕಿಸ್ತಾನದ ಕರಾಚಿಯ ಮಹಿಳೆಯೊಬ್ಬಳಿಗೆ ಸಚಿವಾಲಯದ ಕ್ಲಾಸಿಫೈಡ್‌ ಮಾಹಿತಿ ಶೇರ್‌ ಮಾಡಿದಾನೆ ಅಂತ ಗೊತ್ತಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿಯನ್ನ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನವೀನ್‌ ಹಾಗೂ ಪಾಕ್‌ ಮಹಿಳೆ ಸೋಷಿಯಲ್‌ ಮೀಡಿಯಾ ಮೂಲಕ ಪರಿಚಯವಾಗಿದ್ದು, ವಾಟ್ಸಾಪ್‌ನಲ್ಲಿ ಚಾಟ್‌ ಮಾಡ್ತಿದ್ರು. ಸ್ಟಾರ್ಟಿಂಗ್‌ನಲ್ಲಿ ಮಹಿಳೆ ಫೋನ್‌ ನಂಬರ್‌ ಉತ್ತರ ಪ್ರದೇಶದ ಬರೇಲಿಯದ್ದು ಅಂತ ಮಾಹಿತಿ ಲಭ್ಯವಾಗಿತ್ತು. ಆದ್ರೆ IP ಅಡ್ರೆಸ್‌ ಟ್ರೇಸ್‌ ಮಾಡಿದಾಗ ಅದು ಪಾಕ್‌ನ ಕರಾಚಿಯದ್ದು ಅನ್ನೋದು ಬೆಳಕಿಗೆ ಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ. ನವೀನ್‌ ಶೇರ್‌ ಮಾಡಿದ್ದ ಮಾಹಿತಿಗಳಲ್ಲಿ ಜಿ20 ಹಾಗು ಹಣಕಾಸು ಸಚಿವಾಲಕ್ಕೆ ಸಂಬಂಧಪಟ್ಟ ಮಹತ್ವದ ಅಂಶಗಳು ಇದ್ವು ಅಂತ ತನಿಖೆಯಲ್ಲಿ ಗೊತ್ತಾಗಿದೆ.
ಅಷ್ಟೆ ಅಲ್ದೆ ಆರೋಪಿ ನವೀನ್‌ ತನ್ನ ಮೊಬೈಲ್‌ನಲ್ಲಿ ʻಸೀಕ್ರೆಟ್‌ʼ ಅನ್ನೊ ಫೈಲ್‌ ಹೊಂದಿದ್ದು, ಅದ್ರಲ್ಲಿ ಹಲವು ಪ್ರಮುಖ ಡಾಕ್ಯುಮೆಂಟ್‌ಗಳನ್ನ ಸೇವ್‌ ಮಾಡಿಟ್ಟುಕೊಂಡಿದ್ದ. ಜೊತೆಗೆ ರಾಜಸ್ಥಾನ ಮೂಲದ ಮಹಿಳೆಯೊಬ್ರು ಆರೋಪಿ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್‌ ಮಾಡಿರೋದು ಕಂಡು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸರು ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೆ DRDO ವಿಜ್ಞಾನಿ ಪ್ರದೀಪ್‌ ಕುರಲ್ಕರ್‌ ಅವ್ರನ್ನ ಹನಿಟ್ರ್ಯಾಪ್‌ ಕೇಸ್‌ನಲ್ಲಿ ಬಂಧಿಸಲಾಗಿದೆ. ಇನ್ನು ಮೊನ್ನೆಯಷ್ಟೇ ಇದೇ ರೀತಿ BSF ಮಾಹಿತಿಗಳನ್ನ ಪಾಕ್‌ ಏಜೆಂಟ್‌ಗೆ ರವಾನಿಸಿರೋ ಕೇಸ್‌ನಲ್ಲಿ ಸಿಬ್ಬಂದಿಯೊಬ್ರನ್ನ ಗುಜರಾತ್‌ ಪೊಲೀಸರು ಅರೆಸ್ಟ್‌ ಮಾಡಿದ್ರು.

-masthmagaa.com

Contact Us for Advertisement

Leave a Reply