ಆಫ್ರಿಕಾದ ದೇಶ ಗಿನಿಯಾದಲ್ಲಿ ಸೇನಾ ಕ್ಷಿಪ್ರಕ್ರಾಂತಿ!

masthmagaa.com:

ಆಫ್ರಿಕಾದ ದೇಶ ಗಿನಿಯಾದಲ್ಲಿ ಸೇನಾ ಕ್ಷಿಪ್ರಕ್ರಾಂತಿ ನಡೆದಿದೆ. ಇಲ್ಲಿನ ಸ್ಪೆಷಲ್ ಫೋರ್ಸ್​ ಅಧಿಕಾರವನ್ನು ಕಿತ್ತುಕೊಂಡು, ಅಧ್ಯಕ್ಷ ಅಲ್ಫಾ ಕೋಂಡೆಯನ್ನು ಅರೆಸ್ಟ್ ಮಾಡಿದೆ. ನಾವು ಅಧ್ಯಕ್ಷರನ್ನು ವಶಕ್ಕೆ ಪಡೆದು, ಸಂವಿಧಾನವನ್ನು ವಿಸರ್ಜಿಸಲು ನಿರ್ಧರಿಸಿದ್ದೇವೆ. ದೇಶದ ಭೂ ಮತ್ತು ವಾಯುಗಡಿಯನ್ನು ಬಂದ್ ಮಾಡಲಾಗಿದೆ ಅಂತ ಸೇನಾ ಸಮವಸ್ತ್ರದಲ್ಲಿರೋ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು ತಮ್ಮ ಕ್ಷಿಪ್ರಕ್ರಾಂತಿಗೆ ಯಾರಾದ್ರೂ ವಿರೋಧ ವ್ಯಕ್ತಪಡಿಸಿದ್ರೆ ಅಂಥವರನ್ನು ಬಂಡುಕೋರರು ಅಂತ ಭಾವಿಸಲಾಗುತ್ತೆ. ಸದ್ಯದಲ್ಲೇ ಗವರ್ನರ್​​ಗಳು ಮತ್ತು ಇತರೆ ಅಧಿಕಾರಿಗಳನ್ನು ಬದಲಿಸುತ್ತೇವೆ ಅಂತ ಕೂಡ ಸೇನೆ ಹೇಳಿದೆ. ರಾಜಧಾನಿ ಕೋನಾಕ್ರಿಯಲ್ಲಿರೋ ಸರ್ಕಾರಿ ಹೆಡ್​ ಕ್ವಾಟ್ರಸ್​​ನಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಇದ್ರ ಬೆನ್ನಲ್ಲೇ ದೇಶದಾದ್ಯಂತ ಸೇನಾ ಕರ್ಫ್ಯೂ ಹೇರಲಾಗಿದೆ. ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಅದ್ರಲ್ಲಿ ಅಧ್ಯಕ್ಷ ಅಲ್ಫಾ ಕೋಂಡೆ ಒಂದು ಸೋಫಾ ಮೇಲೆ ಕೂತಿದ್ದಾರೆ. ಅವರ ಸುತ್ತಲೂ ಸೈನಿಕರು ನಿಂತಿರೋದನ್ನು ನೋಡಬಹುದು. ಇದ್ರಲ್ಲಿ ಯೋಧನೊಬ್ಬ ಅಧ್ಯಕ್ಷರ ಬಳಿ ಬಂದು ಸೇನೆ ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ಯಾ ಅಂತ ಪ್ರಶ್ನಿಸಿದ್ದು, ಅದಕ್ಕೆ 83 ವರ್ಷದ ಅಲ್ಫಾ ಕೋಂಡೆ ಉತ್ತರಿಸಲು ನಿರಾಕರಿಸಿದ್ದಾರೆ. ಇದ್ರ ಬೆನ್ನಲ್ಲೇ ಸರ್ಕಾರಿ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಶೇಷ ಸೇನಾಪಡೆಯ ಮುಖ್ಯಸ್ಥ ಲೆಫ್ಟಿನೆಂಟ್-ಕರ್ನಲ್ ಮಮಾಡಿ ಡೌಂಬೌಯಾ, ಸರ್ಕಾರದ ದುರಾಡಳಿತ ಈ ದಂಗೆಗೆ ಕಾರಣ ಅಂತ ಹೇಳಿದ್ದಾರೆ. ನಾವು ಇನ್ಮುಂದೆ ಒಬ್ಬ ವ್ಯಕ್ತಿ ಕೈಗೆ ದೇಶದ ರಾಜಕೀಯ, ಅಧಿಕಾರ ಒಪ್ಪಿಸೋದಿಲ್ಲ.. ಬದಲಿಗೆ ಜನರಿಗೇ ಅಧಿಕಾರ ಒಪ್ಪಿಸ್ತೀವಿ.. ಗಿನಿಯಾ ತುಂಬಾ ಸುಂದರವಾದ ದೇಶ. ದೇಶದ ಮೇಲೆ ಇನ್ನಷ್ಟು ಅತ್ಯಾಚಾರ ನಡೆಯೋಕೆ ಬಿಡೋದಿಲ್ಲ ಅಂತ ಹೇಳಿದ್ದಾರೆ. ಈ ವೇಳೆ ಅವರು ರಾಷ್ಟ್ರ ಧ್ವಜವನ್ನು ಹೊದ್ದುಕೊಂಡಿರೋದನ್ನು ನೋಡಬಹುದು.

1.3 ಕೋಟಿ ಜನಸಂಖ್ಯೆ ಇರೋ ಈ ದೇಶದಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿ ಇದೆ. ಆದ್ರೂ ಕೂಡ ರಾಜಕೀಯ ಅಸ್ಥಿರತೆಯಿಂದಾಗಿ ಇದು ಅತ್ಯಂತ ಬಡದೇಶಗಳಲ್ಲಿ ಒಂದಾಗಿದೆ. ಇಲ್ಲಿ 2020ರಲ್ಲಿ ವಿವಾದಾಸ್ಪದ ಚುನಾವಣೆ ನಡೆದಿತ್ತು. ಇದ್ರಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ನಡೆದು, ಚುನಾವಣೆಯಲ್ಲಿ ಮೋಸ ನಡೆದಿದೆ ಅಂತ ಕೂಡ ಆರೋಪಗಳು ಕೇಳಿ ಬಂದಿದ್ವು. ಇದ್ರಲ್ಲಿ ಅಲ್ಫಾ ಕೋಂಡೆ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ರು. ಇದ್ರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದು ಹಲವಾರು ಜನ ಪ್ರಾಣ ಬಿಟ್ಟಿದ್ರು. ನೂರಾರು ಮಂದಿಯನ್ನು ಅರೆಸ್ಟ್ ಕೂಡ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply