masthmagaa.com:

ರಾಜ್ಯದ ಹಲವೆಡೆ ಇವತ್ತು ಕೂಡ ಮಳೆಯ ಆರ್ಭಟ ಮುಂದುವರದಿದೆ. ಭಾರಿ ವರ್ಷಧಾರೆ ಮತ್ತು ಪ್ರವಾಹಕ್ಕೆ ಕಲಬುರಗಿ ತತ್ತರಿಸಿ ಹೋಗಿದೆ. ಇದರ ನಡುವೆ ಸೊನ್ನ ಬ್ಯಾರೇಜ್​ನಿಂದ 5.11 ಲಕ್ಷ ಕ್ಯೂಸೆಕ್ಸ್​ ನೀರನ್ನ ಭೀಮಾ ನದಿಗೆ ಬಿಡಲಾಗಿದೆ. ಹೀಗಾಗಿ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು ನದಿ ಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೇ ಹೊತ್ತಲ್ಲಿ ಅಫಜಲಪುರ ತಾಲೂಕಿನಲ್ಲಿ ಭೀಮಾ ನದಿ ಗರಿಷ್ಠ ಪ್ರವಾಹದ ಮಟ್ಟವನ್ನು ತಲುಪಲಿದೆ ಅಂತ ಕೇಂದ್ರ ನೀರಾವರಿ ಆಯೋಗ (central water commission) ಮುನ್ಸೂಚನೆ ನೀಡಿದೆ. ಭೀಮಾ ನದಿ ತೀರದ ಜನ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಕಲಬುರಗಿ ಡಿಸಿ ಮನವಿ ಮಾಡಿದ್ದಾರೆ.

ಸದ್ಯ ವಾಯುಭಾರ ಕುಸಿತವು ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ಕೇಂದ್ರೀಕೃತವಾಗಿದ್ದು ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಪುಣೆಯಲ್ಲಿ ಈಗಾಗಲೇ ಮೂರು ಜನ ಮಳೆಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದ ಅಣೆಕಟ್ಟುಗಳಿಂದ ಭಾರಿ ಪ್ರಮಾಣದಲ್ಲಿ ನೀರನ್ನ ಹೊರಬಿಡುತ್ತಿರುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಭಾರಿ ಮಳೆಯಾಗುತ್ತಿರೋದ್ರಿಂದ ಮೂರು ರಾಜ್ಯಗಳಲ್ಲಿ ಒಟ್ಟು 24 ಎನ್​ಡಿಆರ್​ಎಫ್ ತಂಡಗಳನ್ನ ನಿಯೋಜಿಸಲಾಗಿದೆ.

ತೆಲಂಗಾಣದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಬರೋಬ್ಬರಿ 5,000 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಅಂತ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು ಕೇಂದ್ರ ಸರ್ಕಾರ 1,350 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ತೆಲಂಗಾಣದಲ್ಲಿ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ 32ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಅಂತ ಸರ್ಕಾರ ಹೇಳಿದೆ. ಅದ್ರಲ್ಲೂ ಹೈದರಾಬಾದ್​ ಒಂದರಲ್ಲೇ 25 ಜನ ಸಾವನ್ನಪ್ಪಿದ್ದಾರೆ.

-masthmagaa.com

Contact Us for Advertisement

Leave a Reply