ಬ್ರಿಟನ್‌ ರಾಜಕೀಯದಲ್ಲಿ ಬಿರುಗಾಳಿ: ಹಣಕಾಸು ಮಂತ್ರಿ ಭಾರತ ಮೂಲದ ರಿಷಿ ಸುನಾಕ್‌ ರಾಜೀನಾಮೆ.! ಏನಿದು ಹೊಸ ಲೆಕ್ಕಾಚಾರ?

masthmagaa.com:

ಬ್ರಿಟನ್ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಯುನೈಟೆಡ್‌ ಕಿಂಗ್ಡಮ್‌ನ ಭಾವಿ ಪ್ರಧಾನಿ ಅಂತ ಬಿಂಬಿಸಲಾಗ್ತಿದ್ದ ಭಾರತ ಮೂಲದ ರಿಷಿ ಸುನಾಕ್‌ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬ್ರಿಟನ್‌ನ ಕನ್ಸರ್ವೇಟಿವ್‌ ಪಾರ್ಟಿಯಲ್ಲಿ ಪ್ರಭಾವಿ ಸ್ಥಾನಹೊಂದಿದ್ದ ರಿಷಿ, ಪ್ರಸ್ತುತ ಬೋರಿಸ್‌ ಜಾನ್ಸನ್‌ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸ್ತಿದ್ರು. ಇದೀಗ ಬೋರಿಸ್‌ ಅವರ ನಾಯಕತ್ವಕ್ಕೆ ಬೇಸತ್ತು ಈ ರಾಜೀನಾಮೆ ನೀಡಿದ್ದಾರೆ ಅಂತ ಹೇಳಲಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರೋ ರಿಷಿ, ʻಜನರು ಸರಿಯಾಗಿ, ಸಮರ್ಥವಾಗಿ, ಹಾಗೂ ಗಂಭೀರವಾಗಿ ಸರ್ಕಾರವನ್ನ‌ ತನ್ನ ಕಾರ್ಯ ನಿರ್ವಹಿಸಬೇಕು ಅಂತ ಬಯಸುತ್ತಾರೆ. ಆದ್ರೆ ಇಂತಹ ಸಂಧರ್ಭದಲ್ಲಿ ಹಣಕಾಸು ಸಚಿವನಾಗಿ ನಾನು ಮುಂದುವರೆಯೋಕೆ ಆಗ್ತಿಲ್ಲ ಅಂತ ಹೇಳಿದ್ದಾರೆ. ಇವರ ಜೊತೆಗೆ ಪಾಕ್‌ ಮೂಲದ ಸಾಜಿದ್‌ ಜಾವೇದ್‌ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇವರು ಬೋರಿಸ್‌ ಸಂಪುಟದಲ್ಲಿ ಆರೋಗ್ಯ ಮಂತ್ರಿಯಾಗಿದ್ರು. ಅಂದ್ಹಾಗೆ ಇತ್ತೀಚಿಗಷ್ಟೇ ಯುಕೆ ಪ್ರಧಾನಿ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಅಲ್ಲದೇ ಈಚಿಗೆ ನಡೆದ ಸ್ವಪಕ್ಷೀಯ ಮತದಾನ ಅಂದ್ರೆ ಪಕ್ಷದ ಒಳಗೇ ನಡೆದ ಮತದಾನದಲ್ಲೂ ಕೂಡ ಅವರ ಪಕ್ಷದ ಕೇವಲ ಅರ್ಧದಷ್ಟು ಸದಸ್ಯರು ಮಾತ್ರ ಬೋರಿಸ್‌ ಬೆಂಬಲಕ್ಕೆ ನಿಂತಿದ್ರು. ಇದಲ್ಲದೇ ಲಾಕ್‌ ಡೌನ್‌ ಪಾರ್ಟಿ ಅದು ಇದು ಅಂತ ಸಾಲು ಸಾಲು ವಿವಾದಗಳನ್ನ ಕೂಡ ಎದುರಿಸಿದ್ರು. ಇದೆಲ್ಲಾ ಸರ್ಕಾರಕ್ಕೆ ಒಂದು ರೀತಿ ಮುಜುಗರದ ವಿಚಾರವಾಗಿತ್ತು. ಅಲ್ದೇ ಬೊರಿಸ್‌ ಅವರ ನಾಯಕತ್ವಕ್ಕೆ ಕೂಡ ಪಕ್ಷದ ಒಳಗೇ ದೊಡ್ಡಮಟ್ಟದಲ್ಲಿ ವಿರೋಧ ಕೂಡ ವ್ಯಕ್ತವಾಗ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕನ್ಸರ್ವೇಟಿವ್ ಪಕ್ಷದ ಉಪಾಧ್ಯಕ್ಷ ಬಿಮ್ ಅಫೊಲಾಮಿ ಕೂಡ ಮಂಗಳವಾರ ರಾತ್ರಿ ಟಿವಿ ಮೂಲಕ ರಾಜೀನಾಮೆ ನೀಡಿದ್ದು ಇನ್ನು ಮುಂದೆ ಪ್ರಧಾನಿ ಅಡಿಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಅಂತ ಬೋರಿಸ್‌ ನಾಯಕತ್ವದ ವಿರುದ್ದ ಓಪನ್‌ ಆಗೇ ಆಕ್ರೋಶ ಹೊರಹಾಕಿದ್ದಾರೆ. ಬೋರಿಸ್‌ ಜಾನ್ಸನ್ ಸಂದರ್ಶನವೊಂದರಲ್ಲಿ ಕ್ರಿಸ್ ಪಿಂಚರ್ ಅನ್ನೋ ಸಂಸದರನ್ನ ಸರ್ಕಾರಿ ಹುದ್ದೆಗೆ ನೇಮಿಸಿದ್ದಕ್ಕಾಗಿ ಕ್ಷಮೆಯಾಚಿಸಿದ ಕೆಲವೇ ನಿಮಿಷಗಳಲ್ಲಿ ಈ ಬೆಳವಣಿಗೆಯಾಗಿದೆ. ಈ ಪಿಂಚರ್‌ ಒಬ್ಬ ವಿವಾದಗ್ರಸ್ಥ ಸಂಸದರಾಗಿದ್ದು ಎರಡೂವರೆ ವರ್ಷಗಳ ಹಿಂದೆಯೇ ಜಾನ್ಸನ್‌ ಅವರಿಗೆ ಪಿಂಚರ್‌ ವಿರುದ್ಧ ಇರುವ ದೂರುಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಹೀಗಿದ್ದೂ ಪಿಂಚರ್ ವಿರುದ್ಧ ಯಾವುದೇ ಆರೋಪಗಳು ಕಂಡು ಬಂದಿಲ್ಲ ಅಂತ ಅವರನ್ನ ಸರ್ಕಾರಿ ಹುದ್ದೆಗೆಲ್ಲಾ ನೇಮಿಸಿ ಕೊಂಡಿದ್ರು ಬೋರಿಸ್‌. ಆದ್ರೆ ನಿನ್ನೆ ಪಿಂಚರ್‌ ಅವರನ್ನ ಸರ್ಕಾರಿ ಹುದ್ದೆಗೆ ನೇಮಿಸಿದ್ದಕ್ಕೆ ಸ್ವತಃ ಪ್ರಧಾನಿಗಳೇ ಕ್ಷಮೆಯಾಚಿಸಿದ್ರು. ಇದರ ಬೆನ್ನಲ್ಲೇ ಈಗ ಈ ಬೆಳವಣಿಗೆಯಾಗಿದೆ. ಅಂದ್ಹಾಗೆ ಈ ಪಿಂಚರ್‌ನನ್ನ ಲೈಂಗಿಕ ದುರ್ನಡತೆಯ ಆರೋಪದ ಮೇಲೆ ಕಳೆದ ವಾರವಷ್ಟೇ ಕನ್ಸರ್ವೇಟಿವ್ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇತ್ತ ರಿಷಿ ಸುನಾಕ್‌ರಿಂದ ತೆರವಾದ ಸ್ಥಾನಕ್ಕೆ ನೂತನ ಸಚಿವರಾಗಿ ಇರಾಕ್‌ ಮೂಲದ ನಧೀಮ್ ಜಹಾವಿ ಅಧಿಕಾರ ಸ್ವೀಕರಿಸಿದ್ದಾರೆ. ಬ್ರಿಟನ್‌ ಸರ್ಕಾರದಲ್ಲಿ ಪ್ರಧಾನಿ ಬಳಿಕ ಎರಡನೇ ಅತ್ಯುನ್ನತ ಹುದ್ದೆ ಪಡೆದಿದ್ದ ರಿಷಿ ಏಕಾಏಕಿ ಈ ರೀತಿ ರಾಜೀನಾಮೆ ಕೊಡೋದಕ್ಕೂ ಕೆಲ ರಾಜಕೀಯ ಲೆಕ್ಕಾಚಾರ ಇದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಈಗಾಗಲೇ ಬೋರಿಸ್‌ ಜಾನ್ಸನ್‌ ಅವರ ನಾಯಕತ್ವದ ವಿರುದ್ದ ಪಕ್ಷದ ಒಳಗೇ ಅಸಮಾಧಾನದ ಹೊಗೆಯಾಡ್ತಿದೆ. ಹೆಚ್ಚು ಕಡಿಮೆ ಅರ್ಧದಷ್ಟು ವಿರೋಧಿಗಳು ಅವರಿಂದ ಪಕ್ಷದ ನಾಯಕತ್ವವನ್ನ ಕಿತ್ತುಕೊಳ್ಳಬೇಕು ಅಂತ ಹೇಳ್ತಿದ್ದಾರೆ. ಇವರು ಪಕ್ಷದ ವರ್ಚಸ್ಸಿಗೆ ತಕ್ಕಂತೆ ನಡೆದುಕೊಳ್ತಿಲ್ಲ ಅಂತ ಆರೋಪ ಮಾಡ್ತಿದ್ದಾರೆ. ಸದ್ಯ ಇದೇ ವಿಚಾರ ಈಗ ರಿಷಿ ಅವರನ್ನ ರಾಜೀನಾಮೆ ಕೊಡುವಂತೆ ಮಾಡ್ತಿದೆ. ರಿಷಿ ಅವರು ಬೋರಿಸ್‌ ಅವರನ್ನ ಓವರ್‌ಟೇಕ್‌ ಮಾಡಬೋದು ಅನ್ನೋ ವಾದಗಳು ಹುಟ್ಟಿಕೊಳ್ತಿವೆ. ಇನ್ನು ಈ ಹಿಂದೆ ಕೂಡ ಪ್ರಧಾನಿಯಾಗೋ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ರಿಷಿ ʻನಾವು ಇನ್ನೂ ಹೆಚ್ಚಿನದನ್ನು ಮಾಡಬಹುದು. ಭವಿಷ್ಯದಲ್ಲಿ ನಾನು ಈ ಕುರಿತು ನಿಜವಾಗಿಯೂ ಉತ್ಸುಕನಾಗಿದ್ದೇನೆ ಅಂತ ಹೇಳಿದ್ರು. ಆದ್ರೆ ಕಳೆದ ವಾರವಷ್ಟೇ 2030ರವರೆಗೂ ನಾನೇ ಬ್ರಿಟನ್‌ ಲೀಡರ್‌ ಅಂತ ಅಬ್ಬರಿಸಿದ್ದ ಬೋರಿಸ್‌, ನಾಯಕತ್ವವನ್ನ ದೇಶದ ವಿಚಾರದಲ್ಲೂ ಅಷ್ಟೇ, ಪಕ್ಷದ ವಿಚಾರದಲ್ಲೂ ಅಷ್ಟೇ ಯಾರಿಗೂ ಬಿಟ್ಟು ಮಾತೇ ಇಲ್ಲ ಅನ್ನೋದನ್ನ ನೇರವಾಗಿ ಹೇಳಿದ್ರು. ಸೋ ಇದರಿಂದ ರಿಷಿ ಅವರಿಗೆ ಒಂದು ರೀತಿ ಮುಜುಗರ ಮತ್ತು ಹಿನ್ನೆಡೆ. ಹೀಗಾಗಿ ಈ ರೀತಿ ರಾಜೀನಾಮೆಗಳು ಘೋಷಣೆಯಾಗಿರಬೋದು ಅಂತ ಹೇಳಲಾಗಿದೆ. ಏನೇ ಆದ್ರೂ ಇಷ್ಟು ದಿನದಿಂದ ಬೋರಿಸ್‌ರ ಬಲಗೈ ಅಂತ ಕರೆಸಿಕೊಳ್ಳುತ್ತಿದ್ದ ರಿಷಿ ಈಗ ಏಕಾಏಕಿ ಬೋರಿಸ್‌ ವಿರುದ್ದ ಬಂಡೆದ್ದಿರೋದು ಮುಂದೆ ಅವರ ಪ್ರಧಾನಿ ಕುರ್ಚಿಗೆ ಕುತ್ತು ತರುತ್ತಾ ಅನ್ನೋ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ.

-masthmagaa.com

Contact Us for Advertisement

Leave a Reply