ʻಇಸ್ರೇಲ್‌ ಯುದ್ಧ ನಿಲ್ಲಿಸಿʼ ಭಾರತಕ್ಕೆ ಇರಾನ್‌ ಮನವಿ!

masthmagaa.com:

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಏಕಾಏಕಿ ದಾಳಿ ಮಾಡಿ ಇಂದಿಗೆ ಸರಿಯಾಗಿ ಒಂದು ತಿಂಗಳು ಕಳೆದಿದ್ದು, ಸದ್ಯಕ್ಕೆ ಯುದ್ಧ ನಿಲ್ಲೋ ಯಾವ ಲಕ್ಷಣಗಳು ಕಾಣ್ತಿಲ್ಲ. ಆದ್ರೆ ಗಾಜಾ ಸಿಟಿ ಮೇಲೆ ನಿರಂತರ ದಾಳಿ ಮಾಡ್ತಿರೋ ಇಸ್ರೇಲ್‌, ನಗರದ ಸಂಪೂರ್ಣ ಮುತ್ತಿಗೆಗೆ ತಯಾರಿ ನಡೆಸುತ್ತಿದ್ದು, ಅಂತಿಮ ಘಟ್ಟಕ್ಕೆ ತಲುಪಿರೋ ರೀತಿ ಕಾಣ್ತಿದೆ. ಯಾಕಂದ್ರೆ ನಿನ್ನೆಯಷ್ಟೆ ಗಾಜಾ ಪಟ್ಟಿಯನ್ನ ಎರಡು ಭಾಗ ಮಾಡಿದ್ದೀವಿ ಅಂತ ಇಸ್ರೇಲ್‌ ಹೇಳಿದೆ. ಜೊತೆಗೆ ಉತ್ತರದಲ್ಲಿರೋ ನಾಗರಿಕರು ದಕ್ಷಿಣಕ್ಕೆ ತೆರಳುವಂತೆ ಮತ್ತೆ ಮತ್ತೆ ಹೇಳ್ತಿದೆ. ಇದ್ನೆಲ್ಲಾ ನೋಡ್ತಿದ್ರೆ ಇನ್ನೇನು ಇಸ್ರೇಲ್‌ ‌ ಗಾಜಾ ಒಳಗೆ ನುಗ್ಗಿ ಹಮಾಸ್‌ ಉಗ್ರರನ್ನ ಹೊಡೆದುಹಾಕಲು ಸಜ್ಜಾಗಿದೆ ಅನ್ನೋದು ಗೊತ್ತಾಗ್ತಿದೆ. ಅದೂ ಅಲ್ದೆ ಹಮಾಸ್‌ ಉಗ್ರರನ್ನ ಸಂಪೂರ್ಣ ನಾಶ ಮಾಡಿದ್ಮೇಲೆ ಗಾಜಾ ನಾಗರಿಕರಿಗೆ ಭದ್ರತೆ ಕೊಡೋದು ನಮ್ಮ ಜವಾಬ್ದಾರಿ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರೋ ನೆತನ್ಯಾಹು, ನಾವು ಹಮಾಸ್‌ ಉಗ್ರರನ್ನ ಸೋಲಿಸ್ತೀವಿ. ಬಳಿಕ ಗಾಜಾ ಹಾಗೂ ಮಿಡಲ್‌ ಈಸ್ಟ್‌ನ ಜನರಿಗೆ ನಿಜವಾದ ಭವಿಷ್ಯ ಕಟ್ಟಿಕೊಡ್ತೀವಿ. ಆ ಭವಿಷ್ಯದಲ್ಲಿ ಒಂದು ಹೋಪ್‌ ಇರುತ್ತೆ ಒಳ್ಳೆ ಜೀವನ ಇರುತ್ತೆ. ಈ ರೀತಿ ಮಾಡ್ಬೇಕು ಅಂದ್ರೆ ಮೊದಲು ನಾವು ಯುದ್ಧದಲ್ಲಿ ಗೆಲ್ಬೇಕು ಅಂತ ನೆತನ್ಯಾಹು ಗಾಜಾ ನಾಗರಿಕರಿಗೆ ನಾವಿದ್ದೀವಿ ಅನ್ನೋ ರೀತಿಯಲ್ಲಿ ಮಾತಾಡಿದ್ದಾರೆ. ಇದೇ ವೇಳೆ ಕದನ ವಿರಾಮದ ಬಗ್ಗೆ ಮಾತಾಡಿರೋ ನೆತನ್ಯಾಹು, ಕಂಪ್ಲೀಟ್‌ ಸೀಸ್‌ಫೈರ್‌ ಇರೋಲ್ಲ. ಆದ್ರೆ ಮಾನವೀಯ ನೆರವಿಗಾಗಿ ಟ್ಯಾಕ್ಟಿಕಲ್‌ ವಿರಾಮ ಇರತ್ತೆ ಅಂತ ತಿಳಿಸಿದ್ದಾರೆ.

ಇತ್ತ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಫೋನ್‌ಕಾಲ್‌ನಲ್ಲಿ ನಿನ್ನೆ ಸಂಜೆ ಮಾತಾಡಿದ್ರಲ್ಲ. ಆ ಬಗ್ಗೆ ಇರಾನ್‌ ಸ್ಟೇಟ್‌ಮೆಂಟ್‌ ಒಂದನ್ನ ರಿಲೀಸ್‌ ಮಾಡಿದೆ. ಅದ್ರಲ್ಲಿ ಗಾಜಾ ಮೇಲಿನ ಇಸ್ರೇಲ್‌ ದಾಳಿಗಳನ್ನ ನಿಲ್ಸೋಕೆ ಭಾರತ ತನ್ನ ಬಳಿ ಇರೋ ಎಲ್ಲಾ ಸಾಮರ್ಥ್ಯವನ್ನ ಬಳಸಿಕೊಳ್ಳಬೇಕು ಅಂತ ರೈಸಿ ಕೇಳಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಜೊತೆಗೆ ತಕ್ಷಣವೇ ಕದನವಿರಾಮ ಘೋಷಿಸೋಕೆ ಜಾಗತಿಕವಾಗಿ ಬೇಕಾದ ಎಲ್ಲಾ ರೀತಿಯ ಬೆಂಬಲ ಕೊಡೋಕೆ ನಾವು ರೆಡಿ ಇದೀವಿ ಅಂತ ರೈಸಿ ಹೇಳಿದ್ದಾರೆ. ಅಷ್ಟೆ ಅಲ್ದೆ ಗಾಜಾ ಸಿಟಿಯ ಅಮಾಯಕ ಮಹಿಳೆಯರು ಹಾಗೂ ಮಕ್ಕಳ ಸಾವುನೋವು , ಸ್ಕೂಲ್‌, ಮಸೀದಿ, ಚರ್ಚ್‌ ಸೇರಿದಂತೆ ವಸತಿ ಕಟ್ಟಡಗಳ ಮೇಲಿನ ದಾಳಿಯನ್ನ ನಾವು ಖಂಡಿಸ್ತೀವಿ ಮತ್ತು ಅದನ್ನ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ ಅಂತ ರೈಸಿ ಕಿಡಿಕಾರಿದ್ದಾರೆ ಅಂತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನೊಂದ್‌ ಕಡೆ ಈ ಸಂಘರ್ಷ ಮಿಡಲ್‌ ಈಸ್ಟ್‌ನಲ್ಲಿ ನಿಧಾನಕ್ಕೆ ಹರಡ್ತಿದ್ದು, ಈಗಾಗಲೇ ಇಸ್ರೇಲ್‌ ಜೊತೆಗೆ ಲೆಬನಾನ್‌, ಯೆಮೆನ್‌, ಸಿರಿಯಾ ಉಗ್ರ ಸಂಘಟನೆಗಳ ನಡುವೆ ದಾಳಿ-ಪ್ರತಿದಾಳಿಗಳು ನಡೀತಿವೆ. ಇದೀಗ ಗಾಜಾ ಮೇಲಿನ ಇಸ್ರೇಲ್‌ ಆಕ್ರಮಣವನ್ನ ಡೀಲ್‌ ಮಾಡೋಕೆ ಜೋರ್ಡಾನ್‌ ಬಳಿ ಎಲ್ಲಾ ಥರದ ಆಯ್ಕೆಗಳಿವೆ ಅಂತ ಜೋರ್ಡಾನ್‌ ಪ್ರಧಾನಿ ಬಿಶಾನ್‌ ಅಲ್‌ ಖೆಸಾವ್ನೆ ಎಚ್ಚರಿಸಿದ್ದಾರೆ. ಈ ಮೂಲಕ ಇಸ್ರೇಲ್‌ ಮೇಲೆ ದಾಳಿ ಮಾಡೋಕೆ ನಾವು ಕೂಡ ಸಿದ್ಧತೆ ಮಾಡಿಕೊಂಡಿದ್ದೀವಿ ಅಂತ ಹಿಂಟ್‌ ಕೊಟ್ಟಿದ್ದಾರೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

ಅತ್ತ ಗಾಜಾ ಯುದ್ಧವನ್ನ ನಿಲ್ಲಿಸಲು ಬೇಕಾದ ಎಲ್ಲಾ ರೀತಿಯ ಪ್ರಯತ್ನವನ್ನ ಚೀನಾ ಮಾಡಲಿದೆ ಅಂತ ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಧ್ಯಕ್ಷತೆಯನ್ನ ಚೀನಾ ವಹಿಸಿಕೊಂಡಿದೆ. ಈ ಕುರಿತು ಮಾತಾಡಿರೋ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ವಾಂಗ್‌ ವೆನ್‌ಬಿನ್‌, ಭದ್ರತಾ ಸಮಿತಿಯ ಜವಾಬ್ದಾರಿಗಳನ್ನ ಫುಲ್‌ಫಿಲ್‌ ಮಾಡಲು ಮತ್ತು ಪ್ರಸ್ತುತ ಬಿಕ್ಕಟ್ಟನ್ನ ಸರಿಪಡಿಸಿ ಆ ಭಾಗದಲ್ಲಿ ಶಾಂತಿ ಕಾಪಾಡೋಕೆ ಚೀನಾ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೆ ಅಂತ ಹೇಳಿದ್ದಾರೆ. ಇನ್ನು ಇದೆಲ್ಲದರ ನಡುವೆ ನ್ಯೂಯಾರ್ಕ್‌ನಲ್ಲಿರುವ ʻಸ್ಟ್ಯಾಚು ಆಫ್‌ ಲಿಬರ್ಟಿʼ ಮುಂದೆ ಅಮೆರಿಕದಲ್ಲಿರೋ ನೂರಾರು ಯಹೂದಿಗಳು ಕದನ ವಿರಾಮ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಅತ್ತ ಈ ಭೀಕರ ಸಂಘರ್ಷದ ನಡುವೆಯೇ ಒಂದು ಲಕ್ಷ ಭಾರತೀಯ ಕಾರ್ಮಿಕರನ್ನ ನೇಮಕ ಮಾಡಿಕೊಳ್ಳಲು ಅವಕಾಶ ನೀಡುವಂತೆ ಇಸ್ರೇಲ್‌ ಕನ್‌ಸ್ಟ್ರಕ್ಷನ್‌ ಇಂಡಸ್ಟ್ರೀ ಕೇಳಿಕೊಂಡಿದೆ ಅಂತ ವರದಿಯಾಗಿದೆ. ಯುದ್ಧ ಶುರು ಆದ್ಮೇಲೆ ಇಸ್ರೇಲ್‌ನಲ್ಲಿ ಕೆಲಸ ಮಾಡ್ತಿದ್ದ ಗಾಜಾ ವರ್ಕರ್ಸ್‌ನ್ನ ಅಲ್ಲಿಂದ ತೆರವುಗೊಳಿಸಲಾಗಿದೆ. ಈ ಕಾರಣಕ್ಕೆ 90 ಸಾವಿರ ಗಾಜಾ ಕಾರ್ಮಿಕರನ್ನ ರಿಪ್ಲೇಸ್‌ ಮಾಡೋಕೆ ಭಾರತದ ಕಾರ್ಮಿಕರನ್ನ ನೇಮಕ ಮಾಡಿಕೊಳ್ಳಲು ಇಸ್ರೇಲ್‌ ಬಿಲ್ಡರ್ಸ್‌ ಅಸೋಸಿಯೇಷನ್‌ ಮುಂದಾಗಿದೆ. ಈ ಬಗ್ಗೆ ಮಾಹಿತಿ ಕೊಟ್ಟಿರೋ ಅಸೋಸಿಯೇಷನ್‌ನ ವೈಸ್‌ ಪ್ರೆಸಿಡೆಂಟ್‌ ಹೈಮ್‌ ಫಿಗ್ಲಿನ್‌, ಸದ್ಯ ನಾವು ಈ ಕುರಿತು ಭಾರತದ ಜೊತೆ ನೆಗೋಶಿಯೇಟ್‌ ಮಾಡ್ತಿದಿವಿ. ಜೊತೆಗೆ ಇಸ್ರೇಲ್‌ ಸರ್ಕಾರದ ಒಪ್ಪಿಗೆಗೆ ಕಾಯ್ತಿದಿವಿ ಹಾಗೂ ಸುಮಾರು 50 ಸಾವಿರದಿಂದ 1 ಲಕ್ಷ ಕಾರ್ಮಿಕರನ್ನ ನೇಮಕ ಮಾಡಿಕೊ‍ಳ್ಳಲು ಎದುರು ನೋಡ್ತಿದಿವಿ. ಈ ಮೂಲಕ ಯುದ್ಧದಿಂದ ನಿಂತಿರೋ ಕನ್‌ಸ್ಟ್ರಕ್ಷನ್‌ ಕೆಲಸಗಳನ್ನ ಸಹಜ ಸ್ಥಿತಿಗೆ ತರಲು ಸಾಧ್ಯವಾಗುತ್ತೆ ಅಂತ ತಿಳಿಸಿದ್ದಾರೆ. ಅಂದ್ಹಾಗೆ ಈ ರೀತಿ ಭಾರತೀಯ ವರ್ಕರ್ಸ್‌ನ್ನ ಇಸ್ರೇಲ್‌ ಹೈರ್‌ ಮಾಡಿಕೊಳ್ತಿರೋದು ಇದೇ ಮೊದಲಲ್ಲ. ಮೇ ತಿಂಗಳಲ್ಲೇ ಸುಮಾರು 42 ಸಾವಿರ ಭಾರತೀಯ ಕಾರ್ಮಿಕರನ್ನ ಇದೇ ಕನ್‌ಸ್ಟ್ರಕ್ಷನ್‌ ಇಂಡಸ್ಟ್ರೀಗೆ ನೇಮಿಸಿಕೊಳ್ಳಲು ಇಸ್ರೇಲ್‌ ವಿದೇಶಾಂಗ ಸಚಿವಾಲಯ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿದೆ.

-masthmagaa.com

Contact Us for Advertisement

Leave a Reply