ಇಸ್ರೇಲ್‌ ಮೇಲೆ ಇರಾನ್‌ ಭಾರೀ ದಾಳಿ: ಇನ್ನೊಂದು ಯುದ್ಧದ ಕಾವು ಶುರು

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್‌ ಇರಾನ್‌ ಮೇಲೆ ದಾಳಿ ಮಾಡೇ ಬಿಟ್ಟಿದೆ. ಬರೋಬ್ಬರಿ 300 ಡ್ರೋನ್‌ಗಳು ಹಾಗೂ ಹಲವು ಮಿಸೈಲ್‌ಗಳು ಇಸ್ರೇಲ್‌ ಕಡೆಗೆ ನುಗ್ಗಿದ್ದುಅದನೆಲ್ಲಾ ಹೊಡೆದುರುಳಿಸಿದ್ದೇವೆ ಅಂತ ಇಸ್ರೇಲ್‌ ಹೇಳಿದೆ, ಇವುಗಳಿಂದ ಬಹಳ ಕಮ್ಮಿ ಡ್ಯಾಮೇಜ್‌ ಆಗಿದೆ ಇಸ್ರೇಲ್‌ ಸೈನ್ಯ ತಿಳಿಸಿದೆ. ದಾಳಿ ಶುರು ಆದ ಬೆನ್ನಲ್ಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ತಮ್ಮ ವಾರ್‌ ಕ್ಯಾಬಿನೆಟನ್ನ ಮೀಟಿಂಗ್‌ಗೆ ಕರೆದು ಮಾತಾಡಿದ್ದಾರೆ. ಜೊತೆಗೆ ದಾಳಿ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆ ಫೋನ್‌ಕಾಲ್‌ನಲ್ಲಿ ಮಾತನಾಡಿದ್ದಾರೆ. ಜೋ ಬೈಡೆನ್‌ ಇರಾನಿ ಮಿಸೈಲ್‌ ಹಾಗೂ ಡ್ರೋನ್‌ಗಳನ್ನ ಹೊಡೆದುರುಳಿಸೋಕೆ ಇಸ್ರೇಲ್‌ಗೆ ಅಮೆರಿಕ ಹೆಲ್ಪ್‌ ಮಾಡಿದೆ ಅಂತೇಳಿದ್ದಾರೆ. ಅಲ್ಲದೆ ತಮ್ಮ ರಾಷ್ಟ್ರೀಯ ಭದ್ರತಾ ತಂಡದ ಜೊತೆ ಮೀಟಿಂಗ್‌ ಮಾಡಿದ್ದಾರೆ. ಆದ್ರೆ ಆಶ್ಚರ್ಯ ಅನ್ನಿಸೋಹಾಗೆ ಬೈಡೆನ್‌ ʻಇಸ್ರೇಲ್‌ ಇರಾನ್‌ ಮೇಲೆ ಪ್ರತಿದಾಳಿ ಮಾಡಿದ್ರೆ ನಾವು ಹೆಲ್ಪ್‌ ಮಾಡಲ್ಲʼ ಅಂದಿದ್ದಾರೆ ಅನ್ನೋ ರಿಪೋರ್ಟ್‌ಗಳು ಬರ್ತಿವೆ. ಇನ್ನು ದಾಳಿ ಬಗ್ಗೆ ಮಾತನಾಡಿರೋ ಪಿಎಂ ನೇತನ್ಯಾಹು, ʻನಮ್ಮ ತತ್ವ ಸ್ಪಷ್ಟವಾಗಿದೆ, ನಮಗೆ ತೊಂದರೆ ಕೊಟ್ಟೋರಿಗೆ ನಾವು ತೊಂದರೆ ಕೊಡ್ತೇವೆ. ಆ ಮೂಲಕ ನಮ್ಮನ್ನ ನಾವು ಡಿಫೆಂಡ್‌ ಮಾಡ್ಕೊಳ್ತೇವೆ. ನಾವು ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ. ಇಸ್ರೇಲ್‌, ನಮ್ಮ ಸೇನೆ ಹಾಗೂ ಇಲ್ಲಿನ ಜನರ ಬಲವಾಗಿದೆ. ನಮ್ಮ ರಕ್ಷಣೆಗೂ, ಆಕ್ರಮಣಕ್ಕೂ ನಾವು ಸನ್ನದವಾಗಿದ್ದೇವೆ. ಇಸ್ರೇಲ್‌ ಜನರು ಸೇನೆಯ ಆದೇಶವನ್ನ ಪಾಲನೆ ಮಾಡಿ. ನಾವೆಲ್ಲಾ ಒಟ್ಟಾಗಿ ನಮ್ಮ ಶತ್ರುಗಳನ್ನ ಹಿಮ್ಮೆಟ್ಟಿಸೋಣʼ ಅಂತ ಕರೆ ಕೊಟ್ಟಿದ್ದಾರೆ. ಅತ್ತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭಾನುವಾರ ಎಮರ್ಜೆನ್ಸಿ ಮೀಟಿಂಗ್‌ ಕರೆದಿದೆ. ಇನ್ನು ದಾಳಿ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಇರಾನ್‌ ಶಾಶ್ವತ ನಿಯೋಗ ಅಧಿಕೃತ ಹೇಳಿಕೆ ಪ್ರಕಟ ಮಾಡಿದೆ. ಇದ್ರಲ್ಲಿ ʻಇದು ಸಿರಿಯಾದಲ್ಲಿನ ನಮ್ಮ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯೆ. ವಿಶ್ವಸಂಸ್ಥೆ ನಮ್ಮ ಮೇಲೆ ನಡೆದ ದಾಳಿ ಬಗ್ಗೆ ಯಾವುದೇ ಆಕ್ಷನ್‌ ತಗೊಂಡಿಲ್ಲ. UN ಭದ್ರತಾ ಮಂಡಳಿ ಅಂತರಾಷ್ಟ್ರೀಯ ಶಾಂತಿ, ಭದ್ರತೆ ಕಾಪಾಡುವಲ್ಲಿ ಫೇಲಾಗಿದೆ. ಹಾಗಾಗಿ ನಮ್ಮ ಕಾನೂನುಬದ್ಧ ರಕ್ಷಣೆಗಾಗಿ ವಿಶ್ವಸಂಸ್ಥೆಯ ಚಾರ್ಟರ್‌ನ ಆರ್ಟಿಕ್‌ 51ರ ಅಡಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದೇವೆ. ನಮ್ಮ ಪ್ರಕಾರ ಈ ವಿಚಾರ ಇಲ್ಲಿಗೆ ಮುಗಿದಿದೆ. ಆದ್ರೆ ಇಸ್ರೇಲ್‌ ಮತ್ತೇನಾದ್ರೂ ತಪ್ಪು ಮಾಡಿದ್ರೆ ನಮ್ಮ ರೆಸ್ಪಾನ್ಸ್‌ ಗಂಭೀರವಾಗಿರುತ್ತೆ. ಇದು ಇರಾನ್‌ ಹಾಗೂ ಇಸ್ರೇಲ್‌ ಆಡಳಿತದ ಮಧ್ಯ ಇರೋ ಸಂಘರ್ಷ ಅಂತೇಳಿದೆ. ಆದ್ರೆ ಕೊನೆಗೆ ʻಈ ವಿಚಾರದಿಂದ ಅಮೆರಿಕ ದೂರ ಇರ್ಬೇಕುʼ ಅಂತ ಬೋಲ್ಡ್‌ ಲೆಟರ್‌ನಲ್ಲಿ ಬರೆದಿದೆ. ಇನ್ನು ಈ ದಾಳಿ ಶುರುವಾಗಿರೋದ್ರಿಂದ ಮಿಡ್ಲ್‌ ಈಸ್ಟ್‌ನಲ್ಲಿ ವಿಮಾನ ಹಾರಾಟ ನಿರ್ಬಂಧ ಮಾಡಲಾಗಿದೆ.

ಇತ್ತ ಈ ದಾಳಿ ಬಗ್ಗೆ ರಿಯಾಕ್ಟ್‌ ಮಾಡಿರೋ ಭಾರತೀಯ ವಿದೇಶಾಂಗ ಇಲಾಖೆ, ‘ಇಸ್ರೇಲ್‌ ಹಾಗೂ ಇರಾನ್‌ ಮಧ್ಯೆ ಉದ್ವಿಗ್ನತೆ ಹೆಚ್ಚಾಗ್ತಿರೋದ್ರ ಬಗ್ಗೆ ಭಾರತ ಕಳವಳ ಹೊಂದಿದೆ. ಈ ಬೆಳವಣಿಗೆ ಮಿಡ್ಲ್‌ ಈಸ್ಟ್‌ನ ಶಾಂತಿ ಹಾಗೂ ಭದ್ರತೆಗೆ ಇನ್ನಷ್ಟು ಹೊರೆಯಾಗಲಿದೆʼ ಅಂತೇಳಿದೆ. ಜೊತೆಗೆ ಇಸ್ರೇಲ್ ಹಾಗೂ ಇರಾನ್‌ಗಳಿಗೆ ಪ್ರಯಾಣ ಮಾಡದಂತೆ ಜನರಿಗೆ ಅಡ್ವೈಸರಿ ನೀಡಿದೆ. ಇನ್ನು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪ್ರತಿಕ್ರಿಯಿಸಿ ʻಇರಾನ್‌ ತನ್ನ ಹಿತ್ತಲಿನಲ್ಲೇ ಅವ್ಯವಸ್ಥೆ ಬಿತ್ತುವ ಉದ್ದೇಶ ಹೊಂದಿದೆ ಎಂಬುದನ್ನ ಇದು ಮತ್ತೊಮ್ಮೆ ತೋರಿಸಿದೆʼ ಅಂತೇಳಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ರಿಯಾಕ್ಟ್‌ ಮಾಡಿ, ʻಇರಾನ್‌ ಮೇಲಿನ ದಾಳಿಯನ್ನ ನಿಸ್ಸಂದೇಹವಾಗಿ ಖಂಡಿಸ್ತೇವೆ ಹಾಗೂ ನಾವು ಇಸ್ರೇಲ್‌ ಜೊತೆ ನಿಲ್ಲುತ್ತೇವೆʼ ಅಂದಿದ್ದಾರೆ.

ಇವ್ರೆಲ್ಲರ ಮಧ್ಯೆ ಅಮೆರಿಕ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರಿಯಾಕ್ಟ್‌ ಮಾಡಿ, ʻನಾನು ಅಮೆರಿಕದ ಅಧ್ಯಕ್ಷ ಆಗಿದಿದ್ರೆ…ಈ ದಾಳಿ ನಡೀತಾನೇ ಇರ್ಲಿಲ್ಲ. ಇಸ್ರೇಲ್‌ ಮೇಲೆ ದಾಳಿ ಆಗೋಕೆ ನಾನು ಬಿಡ್ತಾನೆ ಇರಲಿಲ್ಲʼ ಅಂತೇಳಿದ್ದಾರೆ.

ವಿಶ್ವಸಂಸ್ಥೆ ಜನರಲ್‌ ಸೆಕ್ರೆಟರಿ ಅಂಟೋನಿಯೋ ಗುಟೆರಸ್‌, ಪ್ರತಿಕ್ರಿಯಿಸಿ ʻಮಿಡ್ಲ್‌ ಈಸ್ಟ್‌ನಲ್ಲಿ ಹಲವು ಫ್ರಂಟ್‌ಗಳಲ್ಲಿ ಯುದ್ಧ ಶುರುವಾಗೋದನ್ನ ಅವಾಯ್ಡ್‌ ಮಾಡಿʼ ಅಂತ ಇಸ್ರೇಲ್‌, ಇರಾನ್‌ಗಳಿಗೆ ಕರೆ ಕೊಟ್ಟಿದ್ದಾರೆ. ಅತ್ತ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ ಕೂಡ ಈ ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿ, ʻಈ ಪ್ರದೇಶದ ಜನರನ್ನ ಯುದ್ಧದ ಅಪಾಯಗಳಿಗೆ ರಕ್ಷಿಸೋ ಬಗ್ಗೆ ಯೋಚ್ನೆ ಮಾಡ್ಬೇಕುʼ ಉಭಯ ದೇಶಗಳು ಇದನ್ನ ಗಮನದಲ್ಲಿಟ್ಟುಕೊಳ್ಬೇಕು ಅಂದಿದೆ. ಅತ್ತ ಫ್ರಾನ್ಸ್‌, ಇರಾನ್‌ ಈ ಪ್ರದೇಶದಲ್ಲಿ ಅಸ್ಥಿರತೆ ಉಂಟು ಮಾಡುವಲ್ಲಿ ಇನ್ನೊಂದು ಲೆವೆಲ್‌ಗೆ ಹೋಗಿದೆʼ ಅಂತ ಟೀಕಿಸಿದೆ.

-masthmagaa.com

Contact Us for Advertisement

Leave a Reply