ಜೆಡಿಎಸ್‌-ಬಿಜೆಪಿ ಮೈತ್ರಿ ಪಕ್ಕಾ, ಈ ಬಗ್ಗೆ ಗೊಂದಲವಿಲ್ಲ: ಕುಮಾರಸ್ವಾಮಿ

masthmagaa.com:

ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿರೋ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಾಂತಾಗಿದೆ. ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಖುದ್ದು ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ಮಾತಾಡಿರುವ ಕುಮಾರಸ್ವಾಮಿ, ಎನ್‌ಡಿಎನಲ್ಲಿ ಜೆಡಿಎಸ್‌ ಕೂಡ ಒಂದು ಅಂಗಪಕ್ಷವಾಗಿಸೋಕೆ ನಿರ್ಧಾರ ಮಾಡಿದೆ. ಮೈತ್ರಿ ವಿಚಾರವಾಗಿ ಅಧಿಕೃತವಾಗಿ ಕೆಲವು ವಿಚಾರಗಳನ್ನು ಚರ್ಚೆ ನಡೆಸಿದ್ದೇವೆ. ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್‌ ನಮಗೆ ಕೊಡ್ತಾರೆ ಅನ್ನೋದು ಮುಖ್ಯವಲ್ಲ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಪಕ್ಷಗಳು ಗೆಲ್ಲುವುದೇ ನಮ್ಮ ಗುರಿ. ನಿಮಗೆಲ್ಲಾ (ಅಂದ್ರೆ ಜನರಿಗೆ) ಬಿಜೆಪಿ ಜೆಡಿಎಸ್‌ ಒಂದಾಗೋದು ಬೇಕಾಗಿದೆ. ಆ ಆಸೆಯನ್ನ ನಾವು ನಿರಾಸೆ ಮಾಡೋದಿಲ್ಲ. ಬಿಜೆಪಿ- ಜೆಡಿಎಸ್‌ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದು ಶಾಶ್ವತವಾದ ಮೈತ್ರಿ. ಲಾಂಗ್‌ ಟರ್ಮ್‌ನಲ್ಲಿ ಇರುತ್ತೆ ಅಂತ ಕುಮಾರಸ್ವಾಮಿ ತಿಳಿಸಿದ್ದಾರೆ. ಇತ್ತ ಈ ಕುರಿತು Xಆಪ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ ಅಧ್ಯಕ್ಷ ನಡ್ಡಾ, ಜೆಡಿಎಸ್ NDA ಮೈತ್ರಿಕೂಟದ ಭಾಗವಾಗಲು ನಿರ್ಧರಿಸಿರುವುದು ಸಂತಸ ತಂದಿದೆ. ನಾವು ಅವರನ್ನು ಹೃದಯಪೂರ್ವಕವಾಗಿ NDA ಗೆ ಸ್ವಾಗತಿಸುತ್ತೇವೆ. ಇದ್ರಿಂದ NDA ಮತ್ತಷ್ಟು ಸ್ಟ್ರಾಂಗ್‌ ಆಗಲಿದೆ. ‘ಹೊಸ ಭಾರತ, ಬಲಿಷ್ಠ ಭಾರತ’ಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಯನ್ನು ಇನ್ನಷ್ಟು ಬಲಪಡಿಸುತ್ತದೆʼ ಅಂತ ಹೇಳಿದ್ದಾರೆ. ಅತ್ತ ರಾಜ್ಯ ಬಿಜೆಪಿ ಕೂಡ ಜೆಡಿಎಸ್‌ಗೆ ಸ್ವಾಗತ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply