ರಾಜ್ಯದ ಅನೇಕ ಕಡೆ ಶುರುವಾಯ್ತು ಚಿರತೆ ಹಾವಳಿ: ಯುವತಿ ಬಲಿ!

masthmagaa.com:

ರಾಜ್ಯದಲ್ಲಿ ಗಡಿ ವಿವಾದ, ಧರ್ಮಗಲಾಟೆ, ಬೆಲೆಯೇರಿಕೆ ಹೀಗೆ ಏನೇನೋ ಸಮಸ್ಯೆಗಳು ಇವೆ. ಅವುಗಳ ಜೊತೆಗೆ ಈಗ ದೊಡ್ಡ ಸಮಸ್ಯೆಯೊಂದು ಸರ್ಕಾರ ಮತ್ತು ಜನ ಇಬ್ರ ನಿದ್ದೆಗೆಡಸಿದ್ತಿದೆ… ಅದು ಚಿರತೆ ಕಾಟ… ಹೌದು ರಾಜ್ಯ ರಾಜಧಾನಿ ಬೆಂಗಳೂರು, ಸೇರಿ ಮೈಸೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಕಡೆ ಚಿರತೆ ಆತಂಕ ಮತ್ತೆ ಶುರುವಾಗಿದೆ. ಬೆಂಗಳೂರಿನ ತುರಹಳ್ಳಿ ರಾಜ್ಯ ಅರಣ್ಯದ ಸುತ್ತ ಎರಡು ವಾರಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಈಗ ಮತ್ತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಜಟ್ಟಿಗರಹಳ್ಳಿ, ನೈಸ್‌ರೋಡ್‌, ನಂದಿಬೆಟ್ಟ, ದೇವನಹಳ್ಳಿ ಹೀಗೆ ಬೆಂಗಳೂರಿನ 4 ಮೂಲೆಗಳಲ್ಲಿ 4 ಚಿರತೆಗಳು ಕಾಟ ಕೊಡ್ತಿವೆ. ನಿನ್ನೆ ತುರಹಳ್ಳಿ ಬಳಿ ಜಿಂಕೆಯನ್ನ ಬೇಟೆಯಾಡಿರುವ ಚಿರತೆಯ ವಿಡಿಯೋ ವೈರಲ್ ಆದ ನಂತರ ಜನ ಭಯಭೀತರಾಗಿದ್ದಾರೆ. ಕೆಂಗೇರಿ ಸಮೀಪದ ಕೋಡಿಪಾಳ್ಯ, ಚಟ್ಟಿಪಾಳ್ಯ ನಿವಾಸಿಗಳಲ್ಲಿ ಭೀತಿ ಹೆಚ್ಚಿಸಿದೆ. ಐಟಿಸಿ ಪ್ಯಾಕ್ಟರಿಯಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಇಂದು ಸಹ‌ ಚೀತಾ ಕೂಂಬಿಂಗ್ ಮುಂದುವರೆದಿದೆ. 2 ತಂಡಗಳಿಂದ ಚಿರತೆಯ ಚಲನ ವಲನಗಳ‌ ಮೇಲೆ ನಿಗಾ ಇಡಲಾಗಿದೆ. ಒಬ್ಬೊಬ್ಬರೇ ಓಡಾಡದಂತೆ ಅಧಿಕಾರಿಗಳು ಸೂಚನೆ ನೀಡಿದಾರೆ. ನೈಸ್‌ ರಸ್ತೆಯಲ್ಲಿ ಚಿರತೆ ಇದೆ ಎಚ್ಚರಿಕೆ ಎಂಬ ಬೋರ್ಡ್‌ ಹಾಕಲಾಗಿದೆ. ತುರಹಳ್ಳಿಯಲ್ಲಿ ಚಿರತೆ ದಾಳಿ ನಡೆಸಿದ ರಸ್ತೆಯತ್ತ ಜನರ ಸಂಚಾರ ಸ್ಥಗಿತಗೊಂಡಿದೆ. ಇಡೀ ರಸ್ತೆ ಸಂಪೂರ್ಣ ಖಾಲಿಯಾಗಿದೆ. ಬೆಳ್ಳಂಬೆಳಗ್ಗೆ ವಾಕಿಂಗ್ ಬರುತ್ತಿದ್ದವರೆಲ್ಲಾ ತಡವಾಗಿ ರಸ್ತೆಗೆ ಇಳಿದಿದ್ದಾರೆ. ಅತ್ತ ಮೈಸೂರಿನ ಟಿ ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಯಿಂದ ಮೇಘನಾ ಅನ್ನೋ ಯುವತಿ ಮೃತಪಟ್ಟಿದ್ದಾರೆ. ಇದು ಮೈಸೂರಿನಲ್ಲಿ ಚಿರತೆ ದಾಳಿಗೆ ಬಲಿಯಾದ ಎರಡನೇ ಘಟನೆಯಾಗಿದೆ. ಇದರ ಬೆನ್ನಲ್ಲೇ ಆ ಚಿರತೆ ಹಿಡಿಯೋಕೆ ಗುಂಡು ಹಾರಿಸೋ ಆದೇಶ ನೀಡಲಾಗಿದ್ದು ಮೃತ ಯುವತಿಯ ಮನೆಯವ್ರಿಗೆ ಪರಿಹಾರ ನೀಡಲಾಗಿದೆ. ಇನ್ನು ಅತ್ತ ಶಿವಮೊಗ್ಗದಲ್ಲಿ ಕೂಡ ಚಿರತೆಯೊಂದು 15 ದಿನಗಳಲ್ಲಿ 3 ಹಸುಗಳನ್ನ ತಿಂದು ಹಾಕಿತ್ತು. ಇದೀಗ ಆ ಚಿರತೆಯನ್ನೂ ಸೆರೆಹಿಡಿದಿರೋದಾಗಿ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಆ ಕಡೆ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಬೃಂದಾವನದಲ್ಲಿ ಕೂಡ ತಿಂಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ಇದ್ರ ಪರಿಣಾಮ 25 ದಿನಗಳಿಂದ ಸುಮಾರು 70 ಲಕ್ಷ ರುಪಾಯಿ ನಷ್ಟ ಆಗಿತ್ತು. ಈ ಹಿನ್ನಲೆಯಲ್ಲಿ ಈಗ ಮತ್ತೆ ಬೃಂದಾವನ ಪ್ರವೇಶವನ್ನ ಮುಕ್ತಗೊಳಿಸಲಾಗಿದೆ. ಇನ್ನು ಮೈಸೂರಿನ ಘಟನೆ ಬಗ್ಗೆ ಟ್ವೀಟ್‌ ಮಾಡಿರೋ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಚಿರತೆ ದಾಳಿಗೆ ತುತ್ತಾಗ್ತಿರೋರ ಸಂಖ್ಯೆ ದಿನೇದಿನೇ ಅಧಿಕವಾಗ್ತಾ ಇದೆ. ಅರಣ್ಯ ಇಲಾಖೆ ಗಾಢ ನಿದ್ರೆಯಲ್ಲಿದ್ದಂತೆ ಇದೆ. ಇನ್ನೆಷ್ಟು ಜೀವಗಳು ಹೋಗಬೇಕು ಅಂತ ಪ್ರಶ್ನಿಸಿದಾರೆ.

-masthmagaa.com

Contact Us for Advertisement

Leave a Reply