ಗೇಟ್‌ ವೇ ಆಫ್‌ ಇಂಡಿಯಾದಲ್ಲಿ ಕುವೈತ್‌ ಬೋಟ್‌ ತಡೆದ ಮುಂಬೈ ಪೊಲೀಸ್‌!

masthmagaa.com:

ಕುವೈತ್‌ನಿಂದ ಸಾಗಿ ಬರ್ತಿದ್ದ ಬೋಟ್‌ ಒಂದನ್ನ ಮುಂಬೈನ ಕಣ್ಗಾವಲು ತಂಡ ಗೇಟ್‌ವೇ ಆಫ್‌ ಇಂಡಿಯಾ ಬಳಿ ತಡೆದು ನಿಲ್ಲಿಸಿರೋ ಘಟನೆ ಫೆಬ್ರುವರಿ 06 ರಂದು ನಡೆದಿದೆ. ಮೂವರಿದ್ದ ಈ ದೋಣಿ ಮೇಲೆ ಪೊಲೀಸರು ತಕ್ಷಣವೇ ತನಿಖೆ ಪ್ರಾರಂಭಿಸಿದ್ರು. ಆದ್ರೆ ದೋಣಿಯಲ್ಲಿ ಯಾವ್ದೇ ರೀತಿ ಅನುಮಾನಾಸ್ಪದ ಅನ್ನೋ ರೀತಿ ಏನೂ ಕೂಡ ಪತ್ತೆ ಆಗಿಲ್ಲ. ಆದ್ರೆ ಈ ದೋಣಿಯಲ್ಲಿದ್ದ ಮೂವರು ಮಾತ್ರ ತಮಿಳುನಾಡಿನ ಕನ್ಯಾಕುಮಾರಿ ಮೂಲದವರು ಅಂತ ತಿಳಿದು ಬಂದಿದೆ. ಈ ಮೂವರು ಕುವೈತ್‌ನ ಮೀನುಗಾರಿಕಾ ಕಂಪನಿಯೊಂದ್ರಲ್ಲಿ ಕೆಲಸ ಮಾಡ್ತಿದ್ರು. ಆದ್ರೆ ಕಂಪನಿ ಸರಿಯಾಗಿ ಸಂಬಳ ಕೊಡದೇ, ಕಠಿಣ ಕೆಲಸಗಳನ್ನ ಕೊಟ್ಟು ಇವ್ರಿಗೆ ಟಾರ್ಚರ್‌ ನೀಡಿದ್ರು. ಅಷ್ಟೇ ಅಲ್ದೇ ಇವ್ರ ಪಾಸ್‌ಪೋರ್ಟ್‌ಗಳನ್ನ ಕೂಡ ವಶಪಡಿಸಿಕೊಂಡಿದ್ರು. ಆದ್ರಿಂದ ಬೇರೆ ದಾರಿ ತೋಚದೆ ಈ ಮೂವರು ಅಲ್ಲಿಂದ ಎಸ್ಕೇಪ್‌ ಆದ್ರೆ ಸಾಕು ಅಂತ ತಮ್ಮ ಕಂಪನಿಯ ಬೋಟ್‌ನ್ನೇ ಹಾರಿಸ್ಕೊಂಡು ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ. ಹೀಗಂತ ಖುದ್ದು ಈ ಮೂವರು ಪೊಲೀಸ್‌ ಬಳಿ ಹೇಳ್ಕೊಂಡಿದ್ದಾರೆ. ಸದ್ಯ ಈ ಮೂವರು ಕುಲಾಬಾ ಸ್ಟೇಷನ್‌ನಲ್ಲಿ ಪೊಲೀಸರ ವಶದಲ್ಲಿದ್ದಾರೆ. ಆದ್ರೆ ಈ ಘಟನೆಯಿಂದ ಭಾರತೀಯ ಕಡಲ ಭದ್ರತೆಯಲ್ಲಿನ ಲೋಪಗಳ ಬಗ್ಗೆ ಪೊಲೀಸರಲ್ಲಿ ಕಳವಳ ಉಂಟುಮಾಡಿದೆ. ಯಾಕಂದ್ರೆ 2008ರಲ್ಲಿ ನಡೆದ ಮುಂಬೈ ದಾಳಿ ವೇಳೆ ಉಗ್ರರು ಕೂಡ ಇದೇ ಸಮುದ್ರ ಮಾರ್ಗದಲ್ಲಿ ಬಂದು ಯಾರ್ಗೂ ಗೊತ್ತಾಗದ ಹಾಗೇ ಮುಂಬೈ ತಲುಪಿದ್ರು. ನಂತ್ರ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.

-masthmagaa.com

Contact Us for Advertisement

Leave a Reply