masthmagaa.com:

ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಮತ್ತೆ ಮಹಾಮಾರಿ ಹಾವಳಿ ಇಟ್ಟಿದೆ. ಚೀನಾದ ಷಿನ್​ಜಿಯಾಂಗ್ ಪ್ರಾಂತ್ಯದ ಕಾಶ್​ಗರ್ ನಗರದಲ್ಲಿ 137 ಜನರಿಗೆ ಸೋಂಕು ದೃಢಪಟ್ಟಿದೆ ಅಂತ ಚೀನಾದ ಹೆಲ್ತ್ ಕಮಿಷನ್ ತಿಳಿಸಿದೆ. ಹೊಸದಾಗಿ ದೃಢಪಟ್ಟ ಎಲ್ಲಾ ಪ್ರಕರಣಗಳು ಗಾರ್ಮೆಂಟ್ ಫ್ಯಾಕ್ಟರಿಯ ಲಿಂಕ್ ಹೊಂದಿದೆ. ಆದ್ರೆ ಯಾರಿಗೂ ಕೊರೋನಾ ಸೋಂಕಿನ ಲಕ್ಷಣಗಳು ಇಲ್ಲ, ಎಲ್ಲವೂ ಎಸಿಂಪ್ಟೊಮ್ಯಾಟಿಕ್ ಕೇಸಸ್ ಆಗಿವೆ ಅಂತ ಸರ್ಕಾರ ತಿಳಿಸಿದೆ. ಪಾಸಿಟಿವ್ ಬಂದರೂ ರೋಗದ ಲಕ್ಷಣ ಇಲ್ಲದಿದ್ದರೆ ಚೀನಾ ಸರ್ಕಾರ ಅದನ್ನು ಪಾಸಿಟಿವ್ ಅಂತ ಪರಿಗಣಿಸಲ್ಲ ಅನ್ನೋದು ಇಲ್ಲಿ ಗಮನಾರ್ಹ.

ಅಂದ್ಹಾಗೆ ಶನಿವಾರ ಕಾಶ್​ಗರ್​ನಲ್ಲಿ 17 ವರ್ಷದ ಹುಡುಗಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಇದು ಚೀನಾದಲ್ಲಿ ಅಕ್ಟೋಬರ್ 14ರ ಬಳಿಕ ದೃಢಪಟ್ಟ ಮೊದಲ ಸ್ಥಳೀಯ ಪ್ರಕರಣವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಷಿನ್​ಜಿಯಾಂಗ್ ಪ್ರಾಂತ್ಯದ ಸುಮಾರು 50 ಲಕ್ಷ ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿತು. ಈ ವೇಳೆ ಕೊರೋನಾ ಪಾಸಿಟಿವ್ ಬಂದಿದ್ದ 17 ವರ್ಷದ ಹುಡುಗಿಯ ಪೋಷಕರು ಗಾರ್ಮೆಂಟ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಇದುವರೆಗೆ 30 ಲಕ್ಷ ಜನರನ್ನ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 137 ಜನರಿಗೆ ಪಾಸಿಟಿವ್ ಬಂದಿದೆ. ಉಳಿದವರಿಗೆ ಮಂಗಳವಾರ ಪರೀಕ್ಷೆ ನಡೆಸಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ 17 ವರ್ಷದ ಹುಡುಗಿಗೆ ಕೊರೋನಾ ಪಾಸಿಟಿವ್ ಬಂದಿರೋದನ್ನು ಸರ್ಕಾರ ತಕ್ಷಣ ಹೇಳಿರಲಿಲ್ಲ. ಆದ್ರೆ ಕಾಶ್​ಗರ್​ ಏರ್​ಪೋರ್ಟ್​ನಿಂದ ವಿಮಾನಗಳ ಹಾರಾಟವನ್ನು ದಿಢೀರ್ ಅಂತ ರದ್ದು ಮಾಡಲಾಗಿತ್ತು. ಪೊಲೀಸರು ಕೂಡ ಮಾಸ್ಕ್ ಧರಿಸುವಂತೆ ಮತ್ತು ವದಂತಿಗಳನ್ನು ನಂಬಬೇಡಿ ಅಥವಾ ಹಬ್ಬಿಸಬೇಡಿ ಅಂತೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಕಾಶ್​​ಗರ್​ ನಿವಾಸಿಗಳು ಏನಾಗ್ತಿದೆ ಅನ್ನೋ ಗೊಂದಲಕ್ಕೆ ಒಳಗಾಗಿದ್ದರು. ಬಳಿಕವೇ ಕೊರೋನಾ ಪ್ರಕರಣವೊಂದು ದೃಢಪಟ್ಟಿದೆ ಅನ್ನೋದು ಗೊತ್ತಾಗಿದ್ದು.

ಚೀನಾದ ಈ ನಂಬರ್ಸ್​ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. 137 ಜನರಲ್ಲಿ ಒಬ್ಬರಿಗೂ ಕೊರೋನಾ ಲಕ್ಷಣಗಳಿಲ್ಲ ಅಂದ್ರೆ ಹೇಗೆ..? ಇದು ನಿಜಾನಾ..? ಅಥವಾ ಏನಾದ್ರೂ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರಾ..? ವೈರಾಣುವಿನ ಬೇರೆ ತಳಿ ಏನಾದ್ರೂ ಚೀನಾದಲ್ಲಿ ಇದೆಯಾ..? ಅಂತೆಲ್ಲಾ ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

ಚೀನಾದಲ್ಲಿ ಇದುವರೆಗೆ 85,810 ಜನರಿಗೆ ಕೊರೋನಾ ಸೋಂಕು ತಗುಲಿದ್ದು 4,634 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 80,911 ಸೋಂಕಿತರು ಗುಣಮುಖರಾಗಿದ್ದು, 265 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಚೀನಾದ ನ್ಯಾಷನಲ್ ಹೆಲ್ತ್​​ ಕಮಿಷನ್ ತಿಳಿಸಿದೆ.

-masthmagaa.com

Contact Us for Advertisement

Leave a Reply