ಸಂಸತ್‌ ಉದ್ಘಾಟನೆ ಗಲಾಟೆ: ನಾನ್‌ ಬರ್ತೀನಿ ಅಂದ ದೊಡ್ಡಗೌಡ್ರು!

masthmagaa.com:

ನೂತನ ಸಂಸತ್‌ ಭವನವನ್ನ ರಾಷ್ಟ್ರಪತಿ ಬದಲಾಗಿ ಪ್ರಧಾನಿ ಮೋದಿ ಉದ್ಘಾಟಿಸ್ತಿದಾರೆ ಅಂತ ವಿರೋಧ ಪಕ್ಷಗಳು ತೀವ್ರ ಆಕ್ರೋಶ ಹೊರಹಾಕ್ತಿದಾರೆ. ಅಲ್ದೇ 19 ಪ್ರತಿಪಕ್ಷಗಳ ಸಂಸತ್‌ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿವೆ. ಇದೀಗ ವಿದೇಶಿ ಪ್ರವಾಸದಿಂದ ಹಿಂದಿರುಗಿರೊ ಮೋದಿ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥನಿ ಅಲ್ಬನೀಸ್‌ ಮಾತ್ರವಲ್ದೇ ಮಾಜಿ ಪ್ರಧಾನಿ, ಆಡಳಿತ ಹಾಗೂ ವಿರೋಧ ಪಕ್ಷಗಳ ಸಂಸದರು ಭಾಗವಹಿಸಿದ್ರು. ಅದು ಪ್ರಜಾಪ್ರಭುತ್ವದ ಶಕ್ತಿ. ಅವರೆಲ್ಲರೂ ಒಟ್ಟಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು ಅಂತ ಹೇಳುವ ಮೂಲಕ ಪ್ರತಿಪಕ್ಷಗಳಿಗೆ ಪರೋಕ್ಷವಾಗಿ ತಿವಿದಿದ್ದಾರೆ. ಇನ್ನೊಂದ್‌ ಕಡೆ ಈ ವಿಚಾರ ಸುಪ್ರೀಂಕೋರ್ಟ್‌ನ ಬಾಗಿಲನ್ನೂ ತಟ್ಟಿದೆ. ಸಂಸತ್‌ ಭವನವನ್ನ ಭಾರತದ ರಾಷ್ಟ್ರಪತಿ ಅವ್ರಿಂದ ಉದ್ಘಾಟನೆ ಮಾಡಿಸುವಂತೆ, ಲೋಕಸಭಾ ಕಾರ್ಯದರ್ಶಿಗೆ ನಿರ್ದೇಶನ ಅಥ್ವಾ ಸಲಹೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಲೋಕಸಭಾ ಕಾರ್ಯದರ್ಶಿ ರಾಷ್ಟ್ರಪತಿಯವ್ರಿಗೆ ಆಮಂತ್ರಣ ನೀಡದೇ ಸಂವಿಧಾನವನ್ನ ಉಲ್ಲಂಘಿಸಿದ್ದಾರೆ ಅಂತ ಉಲ್ಲೇಖಿಸಿದ್ದಾರೆ. ಇತ್ತ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸೋದಾಗಿ ತೆಲುಗು ದೇಶಂ ಪಕ್ಷ (TDP) ತಿಳಿಸಿದೆ. ಲೋಕಸಭಾ ಪ್ರಧಾನ ಕಾರ್ಯದರ್ಶಿ ಅವ್ರಿಂದ ಆಹ್ವಾನ ಸ್ವೀಕರಿಸಲಾಗಿದೆ. ಈಗಾಗಲೇ ನಮ್ಮ ಪಕ್ಷದ ರಾಜ್ಯಸಭಾ ಸಂಸದ ರವೀಂದ್ರ ಅವ್ರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ ಅಂತ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಕೂಡ ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇತ್ತ ಸಂಸತ್‌ ಭವನದ ಉದ್ಘಾಟನೆಯನ್ನ ವಿರೋಧ ಪಕ್ಷಗಳು ಬಹಿಷ್ಕರಿಸ್ತಿರೋದು ಸರಿಯಲ್ಲ ಅಂತ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರೋ ಅವ್ರು, ಉದ್ಘಾಟನೆ ಸಮಾರಂಭದ ವಿಚಾರವನ್ನ ಆದಿವಾಸಿ ಮಹಿಳೆಯ ಘನತೆಯೊಂದಿಗೆ ತಳುಕು ಹಾಕ್ತಿರೋದು ತಪ್ಪು. ರಾಷ್ಟ್ರಪತಿ ಚುನಾವಣೆ ವೇಳೆ ಅವಿರೋಧ ಆಯ್ಕೆಗೆ ವಿರೋಧ ಪಕ್ಷಗಳು ಅನುವು ಮಾಡಿಕೊಟ್ಟಿರಲಿಲ್ಲ ಅನ್ನೊದನ್ನ ಯೋಚಿಸಬೇಕು ಅಂತ ಟೀಕಿಸಿದ್ದಾರೆ. ಇನ್ನು ಸಂಸತ್ ಭವನದ ನೂತನ ಕಟ್ಟಡವನ್ನು ಉದ್ಘಾಟಿಸುವ ಹಕ್ಕು ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ. ಅದನ್ನು ಅವರೇ ಮಾಡಬೇಕೇ ಹೊರತು ಪಾಕಿಸ್ತಾನದ ಪ್ರಧಾನಿ ಅಲ್ಲ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ. ಇದೇ ವೇಳೆ ಆಂಧ್ರ ಪ್ರದೇಶದ YSR ಕಾಂಗ್ರೆಸ್‌, ಒಡಿಶಾದ ಬಿಜು ಜನಾತದಳ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗಿಯಾಗೋಕೆ ಒಪ್ಪಿವೆ.

-masthmagaa.com

Contact Us for Advertisement

Leave a Reply