ಯುಕ್ರೇನ್​ನಲ್ಲಿ ಭಾರತದ ಒತ್ತೆಯಾಳುಗಳು! ರಷ್ಯಾ ಆರೋಪ, ಭಾರತ ನಕಾರ

masthmagaa.com:

ಯುಕ್ರೇನ್​​ ಖಾರ್ಕೀವ್ ಪ್ರದೇಶದಲ್ಲಿ ಯುಕ್ರೇನ್ ಸೇನೆ ಭಾರತೀಯರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ ಅಂತ ರಷ್ಯ ಹೇಳಿಕೊಂಡಿದೆ. ಆ ಭಾರತೀಯರು ರಷ್ಯಾ ಬೆಲ್ಗೋರೋಡ್​ಗೆ ಹೊರಟಿದ್ರು. ಆದ್ರೆ ಅವರನ್ನು ಯುಕ್ರೇನ್ ಸ್ಥಳೀಯ ಆಡಳಿತ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ಅವರನ್ನು ಹ್ಯೂಮನ್ ಶೀಲ್ಡ್ ರೀತಿ ಬಳಸಲು ಯುಕ್ರೇನ್ ಸೇನೆ ಪ್ಲಾನ್ ಮಾಡಿದೆ. ಭಾರತ ಒಪ್ಪಿಗೆ ಸೂಚಿಸಿದ್ರೆ ರಷ್ಯಾದ ಸೇನೆ ಭಾರತೀಯ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕೆ ಕೆಲಸ ಮಾಡಲು ರೆಡಿ ಇದೆ. ಅವರನ್ನು ರಷ್ಯಾದ ಪ್ರದೇಶಕ್ಕೆ ಕರೆತಂದು ಅಲ್ಲಿಂದ ರಷ್ಯಾದ ಮಿಲಿಟರಿ ಸಾರಿಗೆ ಮೂಲಕ ಅಥವಾ ಭಾರತದ ವಿಮಾನಗಳ ಮೂಲಕ ಕಳುಹಿಸಿಕೊಡಲು ಸಿದ್ಧವಿದೆ ಅಂತ ಕೂಡ ರಷ್ಯಾ ಮಿಲಿಟರಿ ವಕ್ತಾರ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್​ಗೆ ಕರೆ ಮಾಡಿ ಯುಕ್ರೇನ್ ಮತ್ತು ಖಾರ್ಕೀವ್​ನ ಸದ್ಯದ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ರು. ಅಲ್ಲಿ ಇನ್ನೂ ಸಿಲುಕಿರುವ ಸಾವಿರಾರು ಭಾರತೀಯರ ಬಗ್ಗೆ ಕೂಡ ವಿಚಾರಿಸಿದ್ರು. ಈ ವೇಳೆ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡೋದಾಗಿಯೂ ರಷ್ಯಾ ಭರವಸೆ ನೀಡಿತ್ತು. ಇದಾದ ಸ್ವಲ್ಪ ಹೊತ್ತಿನ ಬಳಿಕ ರಷ್ಯಾ ಭಾರತೀಯರು ಒತ್ತೆಯಾಳುಗಳಾಗಿರೋ ಬಗ್ಗೆ ಮಾಹಿತಿ ನೀಡಿದೆ.

ಇದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಯುಕ್ರೇನ್ ವಿದೇಶಾಂಗ ಇಲಾಖೆ, ರಷ್ಯನ್ ಸೈನಿಕರು ಖಾರ್ಕೀವ್ ಮತ್ತು ಸುಮಿ ನಗರದಲ್ಲಿ ಭಾರತ, ಚೀನಾ, ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಅಂತ ಹೇಳಿದೆ..

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಂ ಬಗ್ಚಿ, ಭಾರತ ಸರ್ಕಾರ ಯುಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಯಾವುದೇ ಭಾರತೀಯನನ್ನು ಒತ್ತೆಯಾಳಾಗಿ ಇರಿಸಿಕಿಕೊಂಡಿರೋ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿಲ್ಲ. ಖಾರ್ಕೀವ್ ಮತ್ತ ಸುತ್ತಮುತ್ತ ಸಿಲುಕಿರುವ ಭಾರತೀಯರನ್ನು ಪಶ್ಚಿಮ ಯುಕ್ರೇನ್​​ಗೆ ಸಾಗಿಸಲು ಅಗತ್ಯವಾದ ರೈಲ್ವೆ ವ್ಯವಸ್ಥೆಯನ್ನು ಕಲ್ಪಿಸುವಂತೆ ನಾವು ಯುಕ್ರೇನ್ ಸರ್ಕಾರದ ಬಳಿ ಮನವಿ ಮಾಡಿದ್ದೀವಿ ಅಂತ ಹೇಳಿದ್ದಾರೆ. ಅಂದಹಾಗೆ ಖಾರ್ಕೀವ್​ ಬಹುತೇಕ ರಷ್ಯಾದ ಕಂಟ್ರೋಲ್​​ಗೆ ಒಳಗಾಗಿದೆ.

ಇನ್ನು ವಿಶ್ವಂಸ್ಥೆಯಲ್ಲಿ ಮಾತಾಡಿರೋ ಭಾರತದ ಪ್ರತಿನಿಧಿ ಟಿಎಸ್ ತಿರುಮೂರ್ತಿ, ರಷ್ಯಾ ಮತ್ತು ಯುಕ್ರೇನ್ ಎರಡೂ ದೇಶಗಳು ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಅನುವು ಮಾಡಿಕೊಡಬೇಕು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply