ಒಡಿಶಾ ರೈಲು ದುರಂತಕ್ಕೆ ಅಸಲಿ ಕಾರಣ ಪತ್ತೆ ಮಾಡಿದ ರೈಲ್ವೆ ಇಲಾಖೆ! ಏನದು?

masthmagaa.com:

ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 288ಕ್ಕೆ ಏರಿಕೆಯಾಗಿದ್ದು, 1 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಇದೀಗ ಈ ಭೀಕರ ದುರಂತಕ್ಕೆ ಕಾರಣ ಏನು ಅನ್ನೋದನ್ನ ರೈಲ್ವೆ ಇಲಾಖೆ ಪತ್ತೆ ಮಾಡಿರೋದಾಗಿ ಹೇಳಿದೆ. ಅಪಘಾತ ಅಗೋದಿಕ್ಕಿಂತ ಮೊದಲು ಈ ಮಾರ್ಗದಲ್ಲಿ ರೈಲು ಇರೋದ್ರ ಬಗ್ಗೆ ಹಾಗೂ ಅದ್ರ ನಿರ್ದಿಷ್ಟ ಸ್ಥಳದ ಮಾಹಿತಿ ನೀಡುವ ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವ್ಯವಸ್ಥೆಯಲ್ಲಿ ಮಾಡಲಾದ ಕೆಲವು ಬದಲಾವಣೆಗಳು ಈ ಘಟನೆಗೆ ಕಾರಣ ಅಂತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವ್ರು ಸ್ಪಷ್ಟಪಡಿಸಿದ್ದಾರೆ. ಇತ್ತ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡೋದಾಗಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಅನೌನ್ಸ್‌ ಮಾಡಿದ್ದಾರೆ. ಇದೇ ವೇಳೆ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಪಟ್ನಾಯಕ್‌, ಗಾಯಗೊಂಡವ್ರಿಗೆ ತಲಾ 1ಲಕ್ಷ ಪರಿಹಾರ ನೀಡಲಾಗುವುದು ಅಂತ ತಿಳಿಸಿದ್ದಾರೆ. ಇನ್ನು ರೈಲು ದುರಂತದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ನೀಡಲಾಗ್ತಿರುವ ವೈದ್ಯಕೀಯ ನೆರವನ್ನ ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವ್ರು ಭುವನೇಶ್ವರಕ್ಕೆ ಭೇಟಿ ನೀಡಿದ್ದಾರೆ. ಇತ್ತ ರೈಲು ದುರಂತದಲ್ಲಿ ಮೃತಪಟ್ಟವರಿಗೆ ಭಾರತೀಯ ಪುರುಷರ ಹಾಕಿ ತಂಡ ಒಂದು ನಿಮಿಷ ಮೌನ ಆಚರಿಸೋ ಮೂಲಕ ಸಂತಾಪ ಸೂಚಿಸಿದೆ. ಮತ್ತೊಂದ್‌ ಕಡೆ ಸರಕು ಸಾಗಣೆ ರೈಲಿನ ಎರಡು ಬೋಗಿಗಳು ಸೇರಿದಂತೆ ಪ್ಯಾಸೆಂಜರ್‌ ರೈಲುಗಳ ಮಗುಚಿ ಬಿದ್ದ ಬೋಗಿಗಳನ್ನ ಹೊರತೆಗೆಯಲಾಗಿದ್ದು, ರೈಲು ಹಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗಿದೆ. ಜೊತೆಗೆ ಬಾಲಸೋರ್‌ ರೈಲು ಹಳಿ ಮರು ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಸಲಾಗ್ತಿದ್ದು, ಘಟನಾ ಸ್ಥಳದಲ್ಲಿ ಮರು ನಿರ್ಮಾಣ ಕಾರ್ಯವನ್ನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವ್ರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತಾಡಿರುವ ವೈಷ್ಣವ್‌, ಹಾನಿಗೊಳಗಾದ ಹಳಿಗಳ ಮರು ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಬುಧವಾರ ಹೊತ್ತಿಗೆ ರೈಲು ಸಂಚಾರ ಈ ಮಾರ್ಗದಲ್ಲಿ ಮತ್ತೆ ಆರಂಭವಾಗಲಿದೆ. ಈ ಕುರಿತ ತನಿಖೆಯೂ ಪೂರ್ಣಗೊಂಡಿದೆ. ಅಪಘಾತಕ್ಕೆ ಮುಖ್ಯ ಕಾರಣವನ್ನ ಪತ್ತೆ ಮಾಡಲಾಗಿದೆ. ಅದ್ರೆ ಅದರ ಸಂಪೂರ್ಣ ವಿವರವನ್ನ ಸದ್ಯಕ್ಕೆ ನೀಡೋಕೆ ಆಗಲ್ಲ ಅದೆಲ್ಲವನ್ನೂ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವ್ರು ಮಾಡಿರುವ ʻಕವಚʼ ಮೇಲಿನ ಆರೋಪಕ್ಕೆ ಯಾವುದೇ ಆಧಾರವಿಲ್ಲ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿಲಾಗಿದೆ. ರೈಲ್ವೆ ದುರಂತ ಸಂಬಂಧ ತನಿಖೆಗೆ ತಜ್ಞರ ಸಮಿತಿ ರಚಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿದ್ದು, ಸಾರ್ವಜನಿಕರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply