ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಉಗ್ರ ಪನ್ನುನ್‌ ಆರೋಪ!

masthmagaa.com:

ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರೋ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿಚಾರವಾಗಿ ದಿನಕ್ಕೊಂದು ಬೆಳವಣಿಗೆಗಳಾಗ್ತಿವೆ. ಕೇಜ್ರಿವಾಲ್‌ ವಿರುದ್ಧ ಇದೀಗ ED ಹೊಸ ತನಿಖೆಗೆ ಮುಂದಾಗಿದೆ. ನೆನ್ನೆಯಷ್ಟೇ ಕೇಜ್ರಿವಾಲ್‌ ಅವ್ರು ಕಸ್ಟಡಿಯಲ್ಲಿದ್ದುಕೊಂಡೇ ದೆಹಲಿ ನೀರಿನ ಸಮಸ್ಯೆಗೆ ನಿರ್ದೇಶನ ನೀಡಿದ್ರು. ಪತ್ರ ಬರೆದು ಏನೇನ್‌ ಮಾಡ್ಬೇಕು ಅಂತ ತಮ್ಮ ಸಚಿವರಿಗೆ ಸೂಚಿಸಿದ್ರು. ಈ ಕುರಿತು ಈಗ ED ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದಾರೆ. ಕಸ್ಟಡಿಯಲ್ಲಿ ಸ್ಟೇಷನರಿಗಳಿಗೆ ಅಂದ್ರೆ ಪೆನ್ನು.. ಪೇಪರ್‌ಗಳಿಗೆ ಅನುಮತಿ ಇಲ್ದೇ ಅದ್ಹೇಗೆ ಕೇಜ್ರಿವಾಲ್‌ ಪತ್ರ ಬರೆದ್ರು ಅಂತ ED ತನಿಖೆ ನಡೆಸಲಿದೆ ಅಂತ ವರದಿಯಾಗಿದೆ. ಅಲ್ದೇ ಸದ್ಯ ಕಸ್ಟಡಿಯಲ್ಲಿರೋ ಕೇಜ್ರಿವಾಲ್‌ ಅವ್ರನ್ನ ನೋಡಲು ಕೇವಲ ಅವ್ರ ಪತ್ನಿ ಸುನಿತಾ ಕೇಜ್ರಿವಾಲ್‌ ಮತ್ತು ಪರ್ಸನಲ್‌ ಅಸಿಸ್ಟೆಂಟ್‌ ಬಿಭಾವ್‌ ಕುಮಾರ್‌ರಿಗೆ ಅನುಮತಿ ಇದೆ. ಬಿಟ್ರೆ ಕೇಜ್ರಿವಾಲ್‌ರ ವಕೀಲರಿಗೆ ಮೀಟ್‌ ಮಾಡಲು ಅವಕಾಶವಿದೆ. ಆದ್ರೆ ಕೇಜ್ರಿವಾಲ್‌ ಅವ್ರ ಪತ್ರವನ್ನ ಓದಿ ಹೇಳಿದ ದೆಹಲಿ ಸಚಿವೆ ಅತಿಶಿ, ದೆಹಲಿ ನೀರಿನ ಸಮಸ್ಯೆ ಬಗ್ಗೆ ದೆಹಲಿ ಪ್ರಧಾನ ಕಾರ್ಯದರ್ಶಿ ಮತ್ತು ಇತರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಈ ರೀತಿ ಸೂಚಿಸೋಕೆ ಕೇಜ್ರಿವಾಲ್‌ ಅವ್ರು ತಮಗೆ ನಿರ್ದೇಶಿಸಿದ್ದಾರೆ ಅಂತೇಳಿದ್ರು. ಸೋ ಈ ಬಗ್ಗೇನೂ ED ತನಿಖೆ ನಡೆಸಲಿದೆ…ಅತಿಶಿ ಅವ್ರನ್ನೂ ಪ್ರಶ್ನಿಸಲಾಗುತ್ತೆ ಅಂತ ED ಮೂಲಗಳು ಹೇಳಿವೆ.

ಇನ್ನೊಂದೆಡೆ ಚುನಾವಣಾ ಬಾಂಡ್‌ಗಳ ವಿಚಾರವಾಗಿ ಇದೀಗ ಆಪ್‌ ಪಕ್ಷ ಬಿಜೆಪಿ ಮುಂದೆ ಕೆಲವು ಪ್ರಶ್ನೆಗಳನ್ನಿಟ್ಟಿದೆ. ದೆಹಲಿ ಮದ್ಯ ಹಗರಣದ ಕಿಂಗ್‌ಪಿನ್‌ ಆಗಿರೋ ಶರತ್‌ ಚಂದ್ರ ರೆಡ್ಡಿಯವ್ರಿಂದ 60 ಕೋಟಿ ರೂಪಾಯಿ ಯಾಕೆ ಪಡೆದ್ರಿ? ಶರತ್‌ ಚಂದ್ರ ಮದ್ಯ ಹಗರಣದ ಆರೋಪಿ ಅಂತ ED ಅಧಿಕಾರಿಗಳು ಹೇಳಿದ್ಮೇಲೂ ಅವ್ರಿಂದ ಹಣ ಪಡೆದಿರೋದು ಯಾಕೆ? ಬಿಜೆಪಿಗೂ ಶರತ್‌ ಚಂದ್ರ ರೆಡ್ಡಿಗೂ ಏನ್‌ ಸಂಬಂಧ? ಹಣ ಪಡೆದ ಮೇಲೆ ತನಿಖೆ ನಡೀತಿರೋ ಎರಡು ವರ್ಷಗಳ ಕಾಲ ಈ ವಿಷಯ ಯಾಕೆ ಗೌಪ್ಯವಾಗಿಟ್ರಿ? ಅಂತ ಆಪ್‌ ಪ್ರಶ್ನೆಗಳ ಬಾಣ ಬಿಟ್ಟಿದೆ.

ಇನ್ನು ಕೇಜ್ರಿವಾಲ್‌ ಅವ್ರ ಬಂಧನ ಸಂಬಂಧ ಆಪ್‌ ಪಕ್ಷ ಎಲ್ಲಾ ಮಾರ್ಗಗಳಿಂದಲೂ ಪ್ರತಿಭಟನೆಗೆ ಮುಂದಾಗ್ತಿದೆ. ಅತ್ತ ಮಾರ್ಚ್‌ 31ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿಗೆ ಸಿದ್ದತೆ ನಡೀತಿದ್ರೆ, ಇತ್ತ ಸೋಶಿಯಲ್‌ ಮೀಡಿಯಾಗಳಲ್ಲಿ ಕೇಜ್ರಿವಾಲ್‌ ಪರ ಅಭಿಯಾನ ಶುರುವಾಗಿದೆ. ಆಪ್‌ ನಾಯಕರು ತಮ್ಮ ನಾಯಕನಿಗಾಗಿ ʻಡಿಪಿ ಕ್ಯಾಂಪೇನ್‌ʼ ಶುರು ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾ.. Xನಲ್ಲಿ ಆಪ್‌ ನಾಯಕರು ತಮ್ಮ ಡಿಪಿಯನ್ನ ಬದಲಾಯಿಸಿದ್ದಾರೆ. ಬದಲಿಗೆ ಕೇಜ್ರಿವಾಲ್‌ ಅವ್ರ ಪೋಸ್ಟರ್‌ ಒಂದನ್ನ ಹಾಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಕೇಜ್ರಿವಾಲ್‌ ಜೈಲಿನ ಕಂಬಿಗಳ ಹಿಂದೆ ಇರೋ ತರ ಎಡಿಟ್‌ ಮಾಡಲಾಗಿದೆ. ಅಷ್ಟೇ ಅಲ್ದೇ… ಆ ಪೋಸ್ಟರ್‌ ಮೇಲೆ ʻಮೋದಿ ಕಾ ಸಬ್ಸೇ ಬಡಾ ಡರ್‌ ʻಕೇಜ್ರಿವಾಲ್‌ʼʼ ಅಂತ ಬರೆಯಲಾಗಿದೆ. ಅಂದ್ರೆ ಪಿಎಂ ಮೋದಿಯವ್ರ ಬಹುದೊಡ್ಡ ಭಯ ʻಕೇಜ್ರಿವಾಲ್‌ʼ ಅಂತ ಬರೆಯಲಾಗಿದೆ.

ಇನ್ನು ಕೇಜ್ರಿವಾಲ್‌ ವಿಚಾರವಾಗಿ ದೇಶದೊಳಗೆ ಸಾಕಷ್ಟು ಆರೋಪ ಪ್ರತ್ಯಾರೋಪಗಳು ನಡೀತಿರೋ ಮಧ್ಯೆ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ದಿಢೀರ್‌ ಅಂತ ಹೆಡ್‌ಲೈನ್ಸ್‌ನಲ್ಲಿ ಪ್ರತ್ಯಕ್ಷನಾಗಿದ್ದಾನೆ. ಕೇಜ್ರಿವಾಲ್‌ ಮತ್ತು ಆಪ್‌ ಪಕ್ಷದ ವಿರುದ್ಧ ಭಾರೀ ಆರೋಪ ಮಾಡಿದ್ದಾನೆ. ಆಮ್‌ ಆದ್ಮಿ ಪಾರ್ಟಿ 2014-22ರ ಮಧ್ಯೆ ನಮ್ಮ ಖಲಿಸ್ತಾನಿ ಗುಂಪಿನಿಂದ 16 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 132.8 ಕೋಟಿ ರೂಪಾಯಿ ಹಣ ಪಡೆದಿದೆ ಅಂತ ಆರೋಪಿಸಿದ್ದಾನೆ. ಅಷ್ಟೇ ಅಲ್ದೇ, ʻ2014ರಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವ್ರು ನಮ್ಮೊಂದಿಗೆ ಡೀಲ್‌ ಮಾಡೋಕೆ ಮುಂದಾಗಿದ್ರು. ನಮಗೆ ಹಣಸಹಾಯ ಮಾಡಿದ್ರೆ, ಅದ್ರ ಬದಲಾಗಿ 1993ರ ದೆಹಲಿ ಸ್ಫೋಟದಲ್ಲಿ ಇನ್ವಾಲ್ವ್‌ ಆಗಿದ್ದ ಉಗ್ರ ದೇವಿಂದರ್‌ ಪಾಲ್‌ ಸಿಂಗ್‌ ಭಲ್ಲುರ್‌ನ್ನ ರಿಲೀಸ್‌ ಮಾಡ್ತೀವಿ ಅಂತ ಪ್ರಸ್ತಾಪಿಸಿದ್ರು. 2014ರಲ್ಲಿ ನ್ಯೂಯಾರ್ಕ್‌ನ ರಿಚ್‌ಮಂಡ್‌ ಹಿಲ್‌ನಲ್ಲಿರೋ ಗುರುದ್ವಾರದಲ್ಲಿ ಕೇಜ್ರಿವಾಲ್‌ ಮತ್ತು ಖಲಿಸ್ತಾನಿ ಬೆಂಬಲಿಗ ಸಿಖ್ಖರು ಮೀಟಿಂಗ್‌ ನಡೆಸಿದ್ರು. ಈ ವೇಳೆ ಕೇಜ್ರಿವಾಲ್‌ ಅವ್ರು ಉಗ್ರನ ರಿಲೀಸ್‌ ಮಾಡೋ ಪ್ರಸ್ತಾವನೆ ಮುಂದಿಟ್ಟಿದ್ರುʼ ಅಂತ ಆರೋಪಿಸಿದ್ದಾನೆ. ಅಂದ್ಹಾಗೆ ಖಲಿಸ್ತಾನಿ ಉಗ್ರ ಪನ್ನುನ್‌, ಕೇಜ್ರಿವಾಲ್‌ ಮತ್ತು ಆಪ್‌ ಪಾರ್ಟಿ ಮೇಲೆ ಈ ರೀತಿ ಆರೋಪ ಮಾಡೋದು ಇದೇನು ಮೊದಲಲ್ಲ. ಈ ಹಿಂದೆ ಜನವರಿ ತಿಂಗಳಲ್ಲಿ ಕೇಜ್ರಿವಾಲ್‌ ಮತ್ತು ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌ ಅವ್ರು 6 ಮಿಲಿಯನ್‌ ಡಾಲರ್‌ ಅಂದ್ರೆ 49.8 ಕೋಟಿ ರೂಪಾಯಿ ಪಡೆದಿದ್ರು ಅಂತಾನೂ ಆರೋಪಿಸಿದ್ದ.

-masthmagaa.com

Contact Us for Advertisement

Leave a Reply