ಫುಟ್‌ಬಾಲ್‌ ಮಾಂತ್ರಿಕ ಪೀಲೆ ನಿಧನ!

masthmagaa.com:

ಫುಟ್‌ಬಾಲ್‌ ದಂತಕತೆ, ಮೂರು ಬಾರಿ ವಿಶ್ವಕಪ್‌ ವಿಜೇತ ಬ್ರೆಜಿಲ್‌ ತಂಡದ ಆಟಗಾರ ಪೀಲೆ ನಿಧನರಾಗಿದ್ದಾರೆ. ಪೀಲೆ ಅಂತಾನೇ ಖ್ಯಾತಿಯಾದ ಎಡ್ಸನ್​ ಅರಾಂಟೆಸ್​ ಡು ನಸಿಮೆಂಟೊ ಅಕ್ಟೋಬರ್ 13, 1940ರಲ್ಲಿ ಬ್ರೆಜಿಲ್‌ನಲ್ಲಿ ಜನಿಸಿದ್ರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ 82 ವರ್ಷದ ಪೀಲೆ ಅವರು ಸಾವೋ ಪೌಲೋದಲ್ಲಿರುವ ಆಲ್ಬರ್ಟ್‌ ಐನ್‌ಸ್ಟೀನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಫುಟ್ಬಾಲ್‌ ಮಾಂತ್ರಿಕ ಕೊನೆಯುಸಿರೆಳೆದಿದ್ದಾರೆ. ಪೀಲೆ ಸಾವಿಗೆ ಜಗತ್ತಿನ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇವರ ಅಂತಿಮ ಸಂಸ್ಕಾರ ಬ್ರೆಜಿಲ್‌ನ ಸಾಂಟೋಸ್‌ನಲ್ಲಿ ಮಂಗಳವಾರ ನೇರವೇರಲಿದೆ. ಪೀಲೆ ಅವರ ಪಾರ್ಥೀವ ಶರೀರವನ್ನ ಮೂರು ದಿನಗಳ ಕಾಲ ಸಾವೋ ಪೌಲೋದಲ್ಲಿರುವ ವಿಲಾ ಬೆಲ್ಮಿರೊ ಸ್ಟೇಡಿಯಂನಲ್ಲಿ ಇರಿಸಲಾಗುವುದು. ಅಲ್ಲಿ ಅಭಿಮಾನಿಗಳು ತಮ್ಮ ಅಂತಿಮ ಗೌರವವನ್ನ ಸಲ್ಲಿಸಬಹುದು. ಕರುಳಿನ ಕ್ಯಾನ್ಸರ್‌ ಚಿಕಿತ್ಸೆಗಾಗಿ ಪೀಲೆ ಅವರು ನವಂಬರ್‌ 29ರಂದು ಸಾವೋ ಪೌಲೋ ಆಸ್ಪತ್ರೆಗೆ ದಾಖಲಾಗಿದ್ರು. 2021ರ ಸೆಪ್ಟಂಬರ್‌ನಲ್ಲಿ ಆಪರೇಷನ್‌ ಮೂಲಕ ಕ್ಯಾನ್ಸರ್‌ ಗಡ್ಡೆಯನ್ನ ತೆಗೆಯಲಾಗಿತ್ತು. ಆದರೆ ಆರೋಗ್ಯದಲ್ಲಿ ಮಾತ್ರ ಯಾವುದೇ ಸುಧಾರಣೆ ಕಂಡಿದ್ದಿಲ್ಲ. ಹಾಗಾಗಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ರು. ಇನ್ನು ಇತ್ತೀಚಿಗಷ್ಟೇ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ನಾನು ಗೆದ್ದು ಬರುವೆ ಅಂತ ಕೂಡ ಹೇಳಿದ್ರು. ಆದ್ರೆ ಪೀಲೆ ಅವ್ರ ಆರೋಗ್ಯ ಕೈಹಿಡಿಯಲಿಲ್ಲ. ಇನ್ನು ತಮ್ಮ 16ನೇ ವಯಸ್ಸಿನಲ್ಲೇ ಬ್ರೆಜಿಲ್‌ ರಾಷ್ಟ್ರೀಯ ತಂಡವನ್ನ ಪ್ರತಿನಿಧಿಸಿದ ಪೀಲೆ ಅವ್ರು ಬ್ರೆಜಿಲ್‌ ಫುಟ್‌ಬಾಲ್‌ ತಂಡದ ಸಾರ್ವಕಾಲಿಕ ಶ್ರೇಷ್ಠ ಆಟಗಾರರೆನಿಸಿದ್ದಾರೆ. 3 ಬಾರಿ ವಿಶ್ವಕಪ್‌ ವಿಜೇತ ತಂಡದ ಸದಸ್ಯರಾಗಿದ್ರು. 1958, 1962 ಹಾಗೂ 1970ರಲ್ಲಿ ಬ್ರೆಜಿಲ್‌ ತಂಡ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಈ ಮೂಲಕ 3 ವಿಶ್ವಕಪ್‌ ಗೆದ್ದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. 92 ಪಂದ್ಯಗಳಿಂದ 77 ಗೋಲು ಬಾರಿಸಿ ಬ್ರೆಜಿಲ್ ತಂಡದ ಪರವಾಗಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ನಿವೃತ್ತಿ ಹೊಂದಿದ್ರು. ಇತ್ತೀಚೆಗೆ ಈ ದಾಖಲೆಯನ್ನ ನೇಮರ್‌ ಸರಿಗೆಟ್ಟಿದ್ದಾರೆ. ಜೊತೆಗೆ ಫಿಫಾ ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಅನ್ನೊ ದಾಖಲೆಯನ್ನ ಕೂಡ ಪೀಲೆ ಹೊಂದಿದ್ದಾರೆ. 17 ವರ್ಷ 239 ದಿನಗಳಾಗಿದ್ದಾಗ ವಿಶ್ವಕಪ್‌ನ ವೇದಿಕೆಯಲ್ಲಿ ತಮ್ಮ ಮೊದಲ ಗೋಲು ಗಳಿಸಿ ಈ ದಾಖಲೆ ಬರೆದಿದ್ದಾರೆ. ಈ ದಾಖಲೆ ಇನ್ನು ಕೂಡ ಮುರಿಯದೇ ಹಾಗೇ ಉಳಿದುಕೊಂಡಿದೆ. ಅಲ್ದೇ ವಿಶ್ವಕಪ್ ಚಾಂಪಿಯನ್ ತಂಡದ ಅತ್ಯಂತ ಕಿರಿಯ ಆಟಗಾರ ಅನ್ನೊ ದಾಖಲೆ ಕೂಡ ಪೀಲೆ ಹೆಸರಿನಲ್ಲಿದೆ. ಇನ್ನು ಪೀಲೆ ತಮ್ಮ ವೃತ್ತಿ ಜೀವನದ ಬಹುಪಾಲು ಅವಧಿಯನ್ನು ಬ್ರೆಜಿಲಿಯನ್ ಕ್ಲಬ್ ಸ್ಯಾಂಟೋಸ್ ಪರವಾಗಿ ಆಡಿದ್ರು. 1956ರಿಂದ 1974ರವರೆಗೆ ಈ ಕ್ಲಬ್ ಪರವಾಗಿ ಪೀಲೆ 660 ಪಂದ್ಯಗಳಲ್ಲಿ 643 ಗೋಲುಗಳನ್ನು ಗಳಿಸಿದ್ದರು. ಅವರ ಫುಟ್ಬಾಲ್ ವೃತ್ತಿಜೀವನದ ಕೊನೆಯ ಎರಡು ವರ್ಷಗಳಲ್ಲಿ ಅಮೆರಿಕದ ನ್ಯೂಯಾರ್ಕ್ ಕಾಸ್ಮೊಸ್ ಕ್ಲಬ್ ಪರವಾಗಿ ಆಡಿದ್ರು. ಇನ್ನು ಬ್ರೆಜಿಲ್‌ನ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿರೊ ಲುಲಾ ಪೀಲೆ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಹಾಗೂ ಬ್ರೆಜಿಲ್‌ನ ಹೆಸರನ್ನ ಆಕಾಶದ ಎತ್ತರಕ್ಕೆ ಒಯ್ದ ಪೀಲೆ ಅವ್ರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಅಲ್ದೇ ದೇಶಾದ್ಯಂತ 3 ದಿನಗಳ ಕಾಲ ಶೋಕಾಚರಣೆಯನ್ನ ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply