ನಮಗೆ ಕ್ಷಿಪಣಿ ಆಫರ್! ಅವರಿಗೆ UPI ಪವರ್! ಭಾರತ‌ಕ್ಕೆ ಹೃದಯ ತೆರೆದಿಟ್ಟ ಫ್ರಾನ್ಸ್‌!

masthmagaa.com:

ಎರಡು ದಿನಗಳ ಫ್ರಾನ್ಸ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿನ್ನೆ ಭರ್ಜರಿ ಸ್ವಾಗತ ಮಾಡಲಾಗಿತ್ತು. ಇದೀಗ ಫ್ರಾನ್ಸ್‌ ತನ್ನ ಶಕ್ತಿಶಾಲಿ ʻSCALP ʼ ಮಿಸೈಲ್‌ ಅನ್ನ ಭಾರತಕ್ಕೆ ನೀಡಲು ಆಫರ್‌ ಮಾಡಿದೆ. ಸುಮಾರು 1,300 ಕೆಜಿ ತೂಕ ಹೊಂದಿರೋ ಈ ಮಿಸೈಲ್‌ನ್ನ ಬ್ರಿಟನ್‌ನ ಯುರೋಫೈಟರ್‌ ಟೈಫೂನ್‌ ಅಥವಾ ಫ್ರಾನ್ಸ್‌ನ ರಫೇಲ್‌ನಂತಹ ವಿಮಾನಗಳಿಂದ ಲಾಂಚ್‌ ಮಾಡಬಹುದು. ಸುಮಾರು 550 ಕಿ.ಮೀ ದೂರದ ಟಾರ್ಗೆಟ್‌ಗಳನ್ನ ದ್ವಂಸ ಮಾಡೋ ಸಾಮರ್ಥ್ಯ ಹೊಂದಿದೆ. SCALP ಮಿಸೈನ್‌ನ್ನ ಯುರೋಪಿನ ಪ್ರತಿಷ್ಠಿತ MBDA ಕಂಪನಿ ನಿರ್ಮಿಸಿದ್ದು, ಸದ್ಯ ಯುಕ್ರೇನ್‌ ಯುದ್ಧದಲ್ಲಿ ಬಳಸಲಾಗ್ತಿರೋ ಲಾಂಗೆಸ್ಟ್‌ ರೇಂಜ್‌ ಮಿಸೈಲ್‌ ಆಗಿದೆ. ಈ ಹಿಂದೆ ಇರಾಕ್‌, ಲಿಬಿಯಾ, ಸಿರಿಯಾ ಸೇರಿದಂತೆ ಹಲವು ಯುದ್ಧಗಳಲ್ಲಿ ಬಳಸಲಾಗಿದೆ. ಈಗ ಇದನ್ನ ಭಾರತಕ್ಕೆ ಕೊಡ್ತೀವಿ ಅಂತ ಫ್ರಾನ್ಸ್‌ ಹೇಳಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈಗಾಗಲೇ ರಕ್ಷಣೆ, ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳು ಉತ್ತಮ ಬಾಂಧವ್ಯ ಹೊಂದಿವೆ. ಅಲ್ದೆ ಮತ್ತೆ 26 ರಾಫೆಲ್‌ ಜೆಟ್‌ ಖರೀದಿಗೆ ಮಾತುಕತೆ ನಡೆಸಲಾಗ್ತಿದೆ.

ಇನ್ನು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಅವ್ರು ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ Grand Cross of the Legion of Honour ಅನ್ನ ನೀಡಿ ಗೌರವಿಸಿದ್ದಾರೆ. ಇದ್ರೊಂದಿಗೆ ಮೋದಿಯವರು ಈ ಪ್ರಶಸ್ತಿಯನ್ನ ಪಡೆದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ. ಇನ್ನು ಇಂದು ನಡೆಯಲಿರೋ ಫ್ರಾನ್ಸ್‌ನ ವಾರ್ಷಿಕ ʻಬಾಸ್ಟಿಲ್ ಡೇʼ ಪರೇಡ್‌ನಲ್ಲಿ ಭಾಗಿಯಾಗಲಿರುವ ಮೋದಿಯವರು, ಮ್ಯಾಕ್ರನ್ ಅವರ ಜೊತೆ ವ್ಯಾಪಾರ ಹೂಡಿಕೆ, ರಕ್ಷಣೆ, ಬಾಹ್ಯಾಕಾಶ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಇತ್ತ ಪ್ಯಾರಿಸ್‌ನಲ್ಲಿರುವ ಭಾರತೀಯರನ್ನ ಉದ್ದೇಶಿಸಿ ಮಾತಾಡಿರುವ ಮೋದಿ, ಈ ಅದ್ಧೂರಿ ಸ್ವಾಗತದಿಂದ ಸಂತೋಷವಾಗಿದ್ದು, ಫ್ರಾನ್ಸ್‌ ಜೊತೆಗಿನ ನನ್ನ ಬಾಂಧವ್ಯ ತುಂಬಾ ಹಳೆದು ಹಾಗೂ ನಾನು ಅದನ್ನ ಮರೆಯೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಭಾರತದ ಪೇಮೆಂಟ್‌ ಸಿಸ್ಟಮ್‌ UPI ಅನ್ನ ಫ್ರಾನ್ಸ್‌ನಲ್ಲಿ ಬಳಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಮುಂದಿನ ದಿನಗಳಲ್ಲಿ ಪ್ಯಾರಿಸ್‌ನಲ್ಲಿರುವ ಪ್ರಸಿದ್ಧ ಐಫೆಲ್‌ ಟವರ್‌ನಿಂದಲೇ ಅದಕ್ಕೆ ಚಾಲನೆ ಸಿಗಲಿದೆ. ಈ ಮೂಲಕ ಭಾರತೀಯ ಪ್ರವಾಸಿಗರು ಭಾರತದ ರೂಪಾಯಿಯನ್ನೇ ಮುಂದಿನ ದಿನಗಳಲ್ಲಿ ಫ್ರಾನ್ಸ್‌ನಲ್ಲಿ ಪಾವತಿ ಮಾಡಬಹುದು ಅಂತ ಮೋದಿ ತಿಳಿಸಿದ್ದಾರೆ. ಈ ಮೂಲಕ ಫ್ರಾನ್ಸ್‌ ಹಾಗೂ ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಜೊತೆಗೆ ಫ್ರಾನ್ಸ್‌ ಸರ್ಕಾರದ ಸಹಾಯದಿಂದ ಮಾರ್ಸಿಲ್ಲೆಯಲ್ಲಿ ಭಾರತದ ಹೊಸ ಕೌನ್ಸುಲೇಟ್‌ ಕಚೇರಿಯನ್ನ ಓಪನ್‌ ಮಾಡಲಾಗುತ್ತೆ. ಅಲ್ದೆ ಫ್ರಾನ್ಸ್‌ನಲ್ಲಿ ಮಾಸ್ಟರ್‌ ಡಿಗ್ರಿ ಮಾಡ್ತಿರೋ ವಿದ್ಯಾರ್ಥಿಗಳಿಗೆ 5 ವರ್ಷಗಳ ಲಾಂಗ್‌ ಟರ್ಮ್‌ ಪೋಸ್ಟ್‌ ಸ್ಟಡಿ ವೀಸಾ ನೀಡಲಾಗುತ್ತೆ. ಇನ್ನು ಕೆಲವು ವಾರಗಳು ಅಥ್ವಾ ತಿಂಗಳೊಳಗೆ Cergy Prefectureನಲ್ಲಿ ತಮಿಳು ತತ್ವಜ್ಞಾನಿ ತಿರುವಳ್ಳುವರ್‌ ಅವ್ರ ಪ್ರತಿಮೆಯನ್ನ ನಿರ್ಮಿಸಲಾಗುತ್ತದೆ ಅಂತ ಮೋದಿ ಅನೌನ್ಸ್‌ ಮಾಡಿದ್ದಾರೆ. ಇನ್ನು ಫ್ರೆಂಚ್‌ ಪತ್ರಿಕೆ ಒಂದಕ್ಕೆ ಸಂದರ್ಶನ ನೀಡಿದ್ದು ಅದ್ರಲ್ಲಿ, ಜನಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರ ಮತ್ತು ಅತಿದೊಡ್ಡ ಡೆಮಾಕ್ರಸಿ ಇಲ್ಲದೇ UNSC ಇಡೀ ವಿಶ್ವದ ಪರವಾಗಿ ಹೇಗೆ ಮಾತಾಡೋಕೆ ಸಾಧ್ಯ ಅಂತ ಕೇಳಿದ್ದಾರೆ. ಮತ್ತೊಂದ್‌ ಕಡೆ UNSCಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸ್ಥಾನಮಾನ ನೀಡಲು ಮೊದಲಿನಿಂದಲೂ ಬೆಂಬಲಿಸಿಕೊಂಡ ಬಂದಿರುವ ಫ್ರಾನ್ಸ್‌ಗೆ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂದ್ಹಾಗೆ ಫ್ರಾನ್ಸ್‌ ಕೇವಲ UNSCಗಷ್ಟೇ ಅಲ್ಲ ಬಹಳ ಸಲ ಭಾರತಕ್ಕೆ ಹೆಲ್ಪ್‌ ಮಾಡಿದೆ. ಇವತ್ತು ಚಂದ್ರಯಾನ-3 ರಾಕೆಟ್‌ ಲಾಂಚ್‌ ಆಗ್ತಿರೋ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಪಗ್ರಹ ಉಡಾವಣಾ ಕೇಂದ್ರ ಸ್ಥಾಪಿಸೋಕು ಫ್ರಾನ್ಸ್‌ ಸಹಾಯ ಮಾಡಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿಂದಲೂ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಇದೆ. ಭಾರತ 1998ರಲ್ಲಿ ನ್ಯೂಕ್ಲಿಯರ್‌ ಟೆಸ್ಟ್‌ ಮಾಡಿದಾಗ್ಲೂ ಸಪೋರ್ಟ್‌ ಮಾಡಿತ್ತು. ಅಷ್ಟೆ ಅಲ್ದೆ ಕೋಲ್ಡ್‌ ವಾರ್‌ ಟೈಮ್‌ನಲ್ಲಿ ಹಿಂದೂ ಮಹಾಸಾಗರದಲ್ಲಿ ತನ್ನ ಮೊದಲ ಆದ್ಯತೆಯ ಮಿತ್ರರಾಷ್ಟ್ರ ಭಾರತ ಅಂತ ಅನೌನ್ಸ್‌ ಮಾಡಿತ್ತು. 1983ರಿಂದ ಉಭಯ ದೇಶಗಳು ʻವರುಣʼ ಹೆಸರಿನ ಜಂಟಿ ನೌಕಾ ಯುದ್ಧಭ್ಯಾಸ ನಡೆಸುತ್ತಾ ಬಂದಿವೆ. ಇನ್ನು ರಕ್ಷಣೆ ವಿಚಾರಕ್ಕೆ ಬಂದ್ರೆ ಭಾರತದಲ್ಲಿ 6 ಸ್ಕಾರ್ಪೀನ್‌ ಜಲಾಂತರ್ಗಾಮಿ ನೌಕೆಗಳನ್ನ ನಿರ್ಮುಸುವ ಒಪ್ಪಂದಕ್ಕೆ 2005ರಲ್ಲಿ ಸಹಿ ಹಾಕಲಾಗಿದೆ.

-masthmagaa.com

Contact Us for Advertisement

Leave a Reply