ಮಾಲ್ಡೀವ್ಸ್‌ ಎಲೆಕ್ಷನ್‌: ಅಧ್ಯಕ್ಷ ಮುಯಿಝು ಪಕ್ಷಕ್ಕೆ ದೊಡ್ಡ ಗೆಲವು!

masthmagaa.com:

ಭಾರತದಿಂದ ದೂರ ಸರಿಯುತ್ತಾ ಚೀನಾದ ಹೆಗಲೇರುತ್ತಿರೋ ಮಾಲ್ಡೀವ್ಸ್‌ನಲ್ಲಿ ಮತ್ತೊಮ್ಮೆ ದೊಡ್ಡ ರಾಜಕೀಯ ಬೆಳವಣಿಗೆಯಾಗಿದೆ. ಮಾಲ್ಡೀವ್ಸ್‌ನಲ್ಲಿ ನಡೆದ ಪಾರ್ಲಿಮೆಂಟ್‌ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ , ಚೀನಾದ ಕೈಗೊಂಬೆ ಮೊಹಮ್ಮದ್‌ ಮುಯಿಝು ಅವ್ರ ಪಕ್ಷ ಭಾರಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೇರಿದೆ. ಒಟ್ಟು 93 ಸ್ಥಾನಗಳನ್ನ ಹೊಂದಿರೊ ಮಾಲ್ಡೀವ್ಸ್‌ ಪಾರ್ಲಿಮೆಂಟ್‌ನಲ್ಲಿ 70 ಸ್ಥಾನಗಳೊಂದಿಗೆ ಭಾರಿ ಬಹುಮತ ಪಡೆದು ಮುಯಿಝು ಅವರ PNC ಪಕ್ಷ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದೆ. ಇನ್ನು ಮುಯಿಝು ಅವರ ವಿರೋಧ ಪಕ್ಷ ಅಂತ ಗುರುತಿಸಿಕೊಂಡಿದ್ದ, MDP ಪಾರ್ಟಿ ಕೇವಲ 15 ಸ್ಥಾನಗಳಲ್ಲಿ ಜಯಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಮುಯಿಝು ಅವರ ಪಾರ್ಟಿಗೆ ಭರ್ಜರಿ ಜಯ ಸಿಕ್ಕಿದೆ ಅಂತ ಅಲ್ಲಿನ ಚುನಾವಣಾ ಆಯೋಗ ಘೋಷಿಸಿದೆ. ಅಂದ್ಹಾಗೆ ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯೇ ಬೇರೆ ನಡೆಯುತ್ತೆ. ಪಾರ್ಲಿಮೆಂಟ್‌ ಚುನಾವಣೆಯೇ ಬೇರೆ ನಡೆಯುತ್ತೆ. ಈ ಮುಂಚೆ ಅಧ್ಯಕ್ಷೀಯ ಚುನಾವಣೆ ನಡೆದಾಗ ಅದರಲ್ಲಿ ಮುಯಿಝು ಗೆದ್ದಿದ್ರು. ಆದ್ರೆ ಪಾರ್ಲಿಮೆಂಟ್‌ನಲ್ಲಿ ಇಷ್ಟು ದಿನ ಮುಯಿಜು ವಿರೋಧಿ ಪಕ್ಷಕ್ಕೆ ಹೆಚ್ಚಿನ ಬಲ ಇತ್ತು. ಆದ್ರೆ ಈಗ ಪಾರ್ಲಿಮೆಂಟ್‌ಗೂ ಚುನಾವಣೆ ಆಗಿದೆ. ಅಲ್ಲಿಯೂ ಮುಯಿಝು ಪಾರ್ಟಿಯೇ ಗೆದ್ದುಕೊಂಡಿದೆ. ಇದರಿಂದ ಮಾಲ್ಡೀವ್ಸ್‌ ಆಡಳಿತದಲ್ಲಿ ಮುಯಿಝು ಪಕ್ಷದ ಹಿಡಿತ ಮತ್ತಷ್ಟು ಗಟ್ಟಿಯಾದಂತಾಗಿದೆ. ಈಗ ಮುಯಿಜು ಯಾವುದೇ ನಿರ್ಧಾರ ತಗೋಬೇಕು ಅಂದ್ರೂ ಸಂಸತ್‌ನ ಅಡ್ಡ ಬರಲ್ಲ. ಇಷ್ಟು ದಿನ MDP ಪಾರ್ಟಿಯವರು ಮುಯಿಜು ವಿರುದ್ದ ಸಾಕಷ್ಟು ಗಟ್ಟಿದನಿಯಲ್ಲಿ ಮಾತಾಡ್ತಿದ್ರು. ಮುಖ್ಯವಾದ ನಿರ್ಧಾರ ತಗೊಳೋಕೆ ಬಿಡ್ತಿರಲಿಲ್ಲ. ಆದ್ರೆ ಈಗ ಮುಯಿಜು ಪಕ್ಷದವರೇ ಇರೋದ್ರಿಂದ ಮುಯಿಜುಗೆ ಆಡಳಿತಾತ್ಮಕವಾಗಿ ಯಾವುದೇ ತೊಂದ್ರೆ ಆಗಲಾರದು ಅಂತ ಹೇಳಲಾಗ್ತಿದೆ. ಇನ್ನು ಮುಯಿಜು ಅವರ ಈ ಗೆಲುವು ಭಾರತದ ದೃಷ್ಟಿಯಲ್ಲೂ ಒಂದಷ್ಟು ಮಹತ್ವ ಪಡ್ಕೊಳ್ಳುತ್ತೆ. ಯಾಕಂದ್ರೆ ನಿಮಗೆಲ್ಲಾ ಗೊತ್ತಿರೋ ಹಾಗೇ ಈತ ಚೈನಾ ಪರ ಅಧ್ಯಕ್ಷ. ಮಾಲ್ಡೀವ್ಸ್‌ನಿಂದ ಭಾರತದ ಸೇನೆಯನ್ನ ಮತ್ತು ಭಾರತದ ಪ್ರಭಾವವನ್ನ ಹೊರಹಾಕ್ತೀನಿ ಅಂತ ಹೇಳ್ತಾನೇ ಇರೋ ಮಯಿಝು ಇದಕ್ಕೆ ಈಗಾಗಲೇ ಡೆಡ್‌ಲೈನ್‌ ಕೂಡ ಕೊಟ್ಟಿದ್ದಾರೆ. ಸೋ ಆಯಕಟ್ಟಿನ ಜಾಗದಲ್ಲಿರೋ ಮಾಲ್ಡೀವ್ಸ್‌ನಲ್ಲಿ ಭಾರತದ ಪ್ರಭಾವ ಕಮ್ಮಿ ಮಾಡೋ ಚೈನಾ ಪ್ರಯತ್ನಕ್ಕೆ ಈತ ಸಪೋರ್ಟರ್‌ ಆಗಿ ನಿಂತಿದ್ದಾರೆ. ಅದೇ ವ್ಯಕ್ತಿಯ ಪಕ್ಷ ಪಾರ್ಲಿಮೆಂಟ್‌ನಲ್ಲಿ ಕೂಡ ಅಧಿಕಾರ ಹಿಡಿದಿರೋದು ಮುಂದಿನ ಐದು ವರ್ಷ ಮಾಲ್ಡೀವ್ಸ್‌ ಸಂಪೂರ್ಣವಾಗಿ ಡ್ರ್ಯಾಗನ್‌ನ ಹಿಡಿತಕ್ಕೆ ಸಿಗುವ ಸೂಚನೆ ಈಗ ದಟ್ಟವಾಗಿದೆ. ಭಾರತ ತನ್ನ ಮುಂದಿನ ಹೆಜ್ಜೆಗಳನ್ನ ಯಾವ ರೀತಿ ಇಡುತ್ತೆ ಅನ್ನೋ ಕುತೂಹಲ ಈಗ ಮನೆ ಮಾಡಿದೆ. ಯಾಕಂದ್ರೆ ಮಾಲ್ಡೀವ್ಸ್‌ನ್ನ ಸಂಪೂರ್ಣವಾಗಿ ಬಿಟ್ಟುಬಿಡುವಂತೆಯೇ ಇಲ್ಲ. ಯಾಕಂದ್ರೆ ಅದು ವಿರೋಧಿಗಳ ಪಾಲಾದ್ರೆ ಅದರಿಂದ ಭಾರತಕ್ಕೆ ಹೆಚ್ಚು ನಷ್ಟ. ಹೀಗಾಗಿ ಭಾರತ ಮುಂದೆ ಯಾವ ರೀತಿ ಇದನ್ನ ಬ್ಯಾಲೆನ್ಸ್‌ ಮಾಡುತ್ತೆ ಅನ್ನೋ ಚರ್ಚೆ ಎದ್ದಿದೆ.

-masthmagaa.com

Contact Us for Advertisement

Leave a Reply