ದೇಶದ ಅಣು ರಹಸ್ಯ ಪಾಕ್‌ಗೆ ಲೀಕ್ ಮೇಜರ್‌ನನ್ನೇ ಕಿತ್ತೆಸೆದ ರಾಷ್ಟ್ರಪತಿ!

masthmagaa.com:

ಇತ್ತೀಚೆಗೆ ಪಾಕಿಸ್ತಾನ ಗುಪ್ತಚರ ಇಲಾಖೆ ಪರವಾಗಿ ಭಾರತದಲ್ಲಿ ಗೂಢಾಚಾರಿಕೆ ಮಾಡ್ತಿರೋ ಪ್ರಕರಣಗಳು ಬೆಳಕಿಗೆ ಬರ್ತಿವೆ. ಇದೀಗ ಅಣು ಶಸ್ತ್ರಾಗಾರವನ್ನ ನಿರ್ವಹಿಸೊ SFC(ಸ್ಟ್ರಾಟೆಜಿಕ್‌ ಫೋರ್ಸಸ್‌ ಕಮಾಂಡ್)‌ ಯುನಿಟ್‌ನಲ್ಲಿದ್ದ ಮೇಜರ್‌ ದರ್ಜೆಯ ಸಿಬ್ಬಂದಿಯೊಬ್ಬರು ದೇಶದ ಭದ್ರತೆಗೆ ಧಕ್ಕೆ ತಂದಿದ್ದಾರೆ ಅಂತ ಆರೋಪಿಸಿ ಅಧಿಕಾರಿಯನ್ನ ಹುದ್ದೆಯಿಂದ ವಜಾಗೊಳಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ. ಆದ್ರೆ ಇವರ ಹೆಸರನ್ನ ಬಹಿರಂಗ ಪಡಿಸಿಲ್ಲ. ಸೇನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನ ಈ ವ್ಯಕ್ತಿ ತಮ್ಮ ವೈಯಕ್ತಿಕ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಸ್ಟೋರ್‌ ಮಾಡಿದ್ರು. ಇವರು ಪಾಕಿಸ್ತಾನದ ಇಂಟಲಿಜೆನ್ಸ್‌ ಜೊತೆಗೆ ಸೋಶಿಯಲ್‌ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ರು ಅಂತ ಅಧಿಕಾರಿಯೊಬ್ರು ತಿಳಿಸಿದ್ದಾರೆ. 2022ರ ಮಾರ್ಚ್‌ನಿಂದಲೇ SFC ನಿಯೋಜಿಸಿದ್ದ ಅಧಿಕಾರಿಗಳ ಬೋರ್ಡ್‌ ಇವರ ಡಿವೈಸ್‌ಗಳನ್ನ ವಶಕ್ಕೆ ತಗೊಂಡು ತನಿಖೆ ನಡೆಸುತ್ತಿತ್ತು. ಜೊತೆಗೆ ʻಪಟಿಯಾಲ ಪೆಗ್‌ʼ ಅನ್ನೋ ವಾಟ್ಸಾಪ್‌ ಗ್ರೂಪ್‌ನಲ್ಲಿದ್ದ ಇತರ ಆರ್ಮಿ ಅಧಿಕಾರಿಗಳೊಂದಿಗಿನ ಇವರ ಸ್ನೇಹ ಹಾಗೂ ಒಡನಾಟದ ಕುರಿತು ತನಿಖೆ ಮಾಡಲಾಗ್ತಿದೆ. ಜೊತೆಗೆ ಈ ವಾಟ್ಸಾಪ್‌ ಗ್ರೂಪ್ನಲ್ಲಿ ಆಕ್ಷೇಪಾರ್ಹ ವಿಷಯಗಳ ಬಗ್ಗೆ ಚರ್ಚೆ ಮಾಡಿದ ಆರೋಪದಲ್ಲಿ ಮತ್ತೊಬ್ಬ ಆರ್ಮಿ ಬ್ರಿಗೇಡಿಯರ್‌ ಹಾಗೂ ಲೆಫ್ಟಿನೆಂಟ್‌ ಕರ್ನಲ್‌ಗೆ‌, ಸೇನೆ ಶೋಕಾಸ್‌ ನೋಟೀಸ್ ನೀಡಿದೆ. ಈಗಾಗಲೇ ಈ ಪಟಿಯಾಲ ಪೆಗ್ ‌ವಾಟ್ಸಾಪ್‌ ಗ್ರೂಪ್‌ನಿಂದ ಪಾಕ್‌ನ ಗುಪ್ತಚರ ಏಜೆಂಟ್‌ಗೆ ಗೌಪ್ಯ ಮಾಹಿತಿ ಸೋರಿಕೆ ಆಗಿರೋದರ ಬಗ್ಗೆ ತನಿಖೆ ನಡೆಸಲಾಗ್ತಿದೆ. ಅಲ್ದೆ ಈ ಸಂಬಂಧ 2022ರ ಜುಲೈನಲ್ಲೆ ಈ ಗ್ರೂಪ್‌ಗೆ ಸಂಬಂಧಿಸಿದ ಮೂವರು ಅಧಿಕಾರಿಗಳನ್ನ ಸಸ್ಪೆಂಡ್‌ ಮಾಡಲಾಗಿತ್ತು. ಈಗ ಇದೆ ಗ್ರೂಪ್‌ನ ಮೇಜರ್‌ನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಅಂದ್ಹಾಗೆ ಆರ್ಮಿ ಆಕ್ಟ್‌ ಸೆಕ್ಷನ್‌ 18ರ ಪ್ರಕಾರ ರಾಷ್ಟ್ರಪತಿಗಳು ಸೇನೆಯ ಅಧಿಕಾರಿಗಳನ್ನ ತೆಗೆಯೋ ಅಧಿಕಾರ ಹೊಂದಿರ್ತಾರೆ. ಅದಕ್ಕೂ ಮೇಲಾಗಿ ಭಾರತದ ಮೂರು ಪಡೆಯ ದಂಡನಾಯಕರೂ ರಾಷ್ಟ್ರಪತಿಗಳು ಆಗಿರೋದ್ರಿಂದ ಇಲ್ಲಿ ಖುದ್ದು ರಾಷ್ಟ್ರಪತಿಯವರೇ ಈ ಅಧಿಕಾರಿಯನ್ನ ಕಿತ್ತೊಗೆದಿದ್ದಾರೆ.

-masthmagaa.com

Contact Us for Advertisement

Leave a Reply