ಗುಡ್​ ನ್ಯೂಸ್: ಭಾರತಕ್ಕೆ ಬರಲಿದೆ ರಷ್ಯಾದ ‘ಸ್ಪುಟ್ನಿಕ್-V’ ಲಸಿಕೆ

masthmagaa.com:

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಲಕ್ಷ ದಾಟಿದ ಬೆನ್ನಲ್ಲೇ ರಷ್ಯಾದಿಂದ ಗುಡ್ ನ್ಯೂಸ್​ ಸಿಕ್ಕಿದೆ. ಭಾರತಕ್ಕೆ 10 ಕೋಟಿ ಸ್ಪುಟ್ನಿಕ್-V ಲಸಿಕೆಯ ಡೋಸ್​ಗಳನ್ನು ಕಳುಹಿಸಿಕೊಡಲು ರಷ್ಯಾ ಮುಂದಾಗಿದೆ. ಈ ಸಂಬಂಧ ರಷ್ಯನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್ (RDIF) ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್​ ಜೊತೆ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ರಷ್ಯಾ ಲಸಿಕೆಯ ಮೂರನೇ ಮತ್ತು ಕೊನೆಯ ಹಂತದ ಮಾನವ ಪ್ರಯೋಗವನ್ನು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ನಡೆಸಲಿದೆ. 10 ಕೋಟಿ ಲಸಿಕೆಯ ಪೂರೈಕೆಯು ಈ ವರ್ಷದ ಕೊನೆಯಲ್ಲಿ ಆರಂಭವಾಗಬಹುದು ಅಂತ RDIF ಹೇಳಿದೆ. ಇದು ಮಾನವ ಪ್ರಯೋಗ ಮತ್ತು ನೋಂದಣಿ ಮೇಲೆ ಅವಲಂಬಿತವಾಗಿದೆ. ಎಷ್ಟುಬೇಗ ಮಾನವ ಪ್ರಯೋಗ ಮುಗಿದು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಸಿಗುತ್ತೋ ಅಷ್ಟು ಬೇಗ ಲಸಿಕೆಯ ಪೂರೈಕೆ ಪ್ರಾರಂಭವಾಗಲಿದೆ.

ದೊಡ್ಡ ಪ್ರಮಾಣದಲ್ಲಿ ಮೂರನೇ ಹಂತದ ಮಾನವ ಪ್ರಯೋಗ ಮುಗಿಯುವ ಮೊದಲೇ ‘ಸ್ಪುಟ್ನಿಕ್-V’ ಲಸಿಕೆಗೆ ರಷ್ಯಾ ಸರ್ಕಾರ ಅನುಮೋದನೆ ನೀಡಿದೆ. ಇದನ್ನು ವಿಶ್ವದ ಮೊದಲ ಕೊರೋನಾ ಲಸಿಕೆ ಅಂತಾನೇ ಹೇಳಲಾಗ್ತಿದೆ.

ಭಾರತಕ್ಕೆ 10 ಕೋಟಿ ಲಸಿಕೆ ಪೂರೈಕೆಯಾಗುವುದರ ಬಗ್ಗೆ ಮಾತನಾಡಿದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್​ನ ಸಹಾಧ್ಯಕ್ಷ  ಜಿ.ವಿ. ಪ್ರಸಾದ್, ‘ಮೊದಲೆರಡು ಹಂತದ ಮಾನವ ಪ್ರಯೋಗದಲ್ಲಿ ರಷ್ಯಾ ಲಸಿಕೆ ಭರವಸೆ ಮೂಡಿಸಿದೆ. ಈ ಲಸಿಕೆಯು ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಕಾರಿಯಾಗಲಿದೆ’ ಅಂತ ಹೇಳಿದ್ದಾರೆ.

ಆದ್ರೆ ನಮ್ಮ ದೇಶದಲ್ಲಿ ರಷ್ಯಾ ಲಸಿಕೆಗೆ ಎಷ್ಟು ಬೆಲೆ ನಿಗದಿಪಡಿಸಲಾಗುತ್ತೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದನ್ನು ಲಾಭದ ಉದ್ದೇಶಕ್ಕೆ ನೀಡುತ್ತಿಲ್ಲ, ಲಸಿಕೆ ತಯಾರಿಸಲು ಖರ್ಚಾಗಿರುವ ಹಣ ಸಿಕ್ಕರೆ ಸಾಕು ಅಂತ RDIF ಹೇಳಿಕೊಂಡಿದೆ.

ಬ್ರೆಜಿಲ್, ಮೆಕ್ಸಿಕೊ, ಖಜಕಿಸ್ತಾನ್ ಮತ್ತು ಸೌದಿ ಅರೇಬಿಯಾ ಮುಂತಾದ ದೇಶಗಳೊಂದಿಗೆ RDIF ಈಗಾಗಲೇ ಲಸಿಕೆ ಪೂರೈಕೆಯ ಒಪ್ಪಂದ ಮಾಡಿಕೊಂಡಿದೆ. ಇದೀಗ ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆಗೂ ಒಪ್ಪಂದ ಮಾಡಿಕೊಂಡಿದೆ.

-masthmagaa.com

Contact Us for Advertisement

Leave a Reply