ಶಾರೂಖ್ ಖಾನ್ ಮಗ ಅರೆಸ್ಟ್! ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ..

masthmagaa.com:

ಹಡಗಿನಲ್ಲಿ ಮಾದಕ ಪಾರ್ಟಿ ಮಾಡಿದ ಆರೋಪದ ಅಡಿಯಲ್ಲಿ ಬಾಲಿವುಡ್ ಬಾದ್​ಶಾ ಶಾರುಖ್ ಖಾನ್ ಮಗ ಆರ್ಯನ್ ಖಾನ್​​ರನ್ನು ಎನ್​ಸಿಬಿ ಅಂದ್ರೆ ಮಾದಕ ವಸ್ತು ನಿಗ್ರಹ ದಳ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಮುಂಬೈನಿಂದ ಗೋವಾಗೆ ಹೋಗ್ತಿದ್ದ ಈ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಇದ್ರ ಬಗ್ಗೆ ಮಾಹಿತಿ ಪಡೆದ ಎನ್​ಸಿಬಿ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಹಡಗಿನಲ್ಲಿ ಪಾರ್ಟಿ ನಡೆಯುತ್ತಿದ್ದ ಜಾಗದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಎನ್​ಸಿಬಿ ಅಧಿಕಾರಿಗಳು ಮೊದಲಿಗೆ ಆರ್ಯನ್, ಮೂವರು ಯುವತಿಯರು ಸೇರಿದಂತೆ 10 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ರು. ನಂತರ ಇವರ ಪೈಕಿ ಆರ್ಯನ್ ಖಾನ್, ಮುನ್‌ಮುನ್ ದಮೇಚಾ, ನೂಪೂರ್ ಸಾರಿಕಾ, ಇಸ್‌ಮಿತ್ ಸಿಂಗ್, ಮೋಹಕ್ ಜೆಸ್ವಾಲ್, ವಿಕ್ರಾಂತ್ ಚೊಕ್ಕರ್, ಗೋಮಿತ್ ಚೋಪ್ರಾ, ಅರ್ಬಾಜ್ ಮರ್ಚಂಟ್ 8 ಮಂದಿಯನ್ನು ವಶಕ್ಕೆ ಪಡೆದ ಎನ್​​ಸಿಬಿ ಅಧಿಕಾರಿಗಳು ಮತ್ತಷ್ಟು ವಿಚಾರಣೆ ನಡೆಸಿದ್ರು. ಈ ವೇಳೆ ಆರ್ಯನ್ ಖಾನ್ ಮಾದಕ ವಸ್ತು ಸೇವಿಸಿರೋದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ದಮೇಚಾ ಅನ್ನೋರನ್ನ ಎನ್​ಸಿಬಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.

ಸದ್ಯ ಆರೋಪಿಗಳನ್ನು ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ. ​ ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ಎನ್​ಸಿಬಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶಿಸಿದೆ.

ಇನ್ನು ಹಡಗಿನಲ್ಲಿ ಶೋಧದ ವೇಳೆ ಪ್ಯಾಂಟ್​​​ನಲ್ಲಿ, ಶರ್ಟ್​ ಕಾಲರ್​​ನಲ್ಲಿ, ಹುಡುಗಿಯರ ಪರ್ಸ್​​, ಲೆನ್ಸ್ ಬಾಕ್ಸ್​ ಸೇರಿದಂತೆ ಎಲ್ಲಾ ಕಡೆ ಅಡಗಿಸಿಟ್ಟ ಮಾದಕ ವಸ್ತುಗಳು ಸಿಕ್ಕಿವೆ. ಪೊಲೀಸರ ಯಾವ ಭಯವೂ ಇರಬಾರದು ಅನ್ನೋ ಕಾರಣಕ್ಕೆ ಈ ರೀತಿ ಹಡಗಿನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಅಕ್ಟೋಬರ್ 2ರಿಂದ 4ರವರೆಗೆ ಹಡಗು ಬುಕ್ ಕೂಡ ಮಾಡಲಾಗಿತ್ತು. ಈ ಪಾರ್ಟಿಗೆ ಕ್ರೇ ಆರ್ಕ್​ ಅಂತ ಹೆಸರಿಡಲಾಗಿತ್ತು. ಇದ್ರಲ್ಲಿ ಪೂಲ್ ಪಾರ್ಟಿ, ಫ್ಯಾಷನ್ ಶೋ, ಮ್ಯೂಜಿಕಲ್ ಪರ್ಫಾರ್ಮೆನ್ಸ್ ಕೂಡ ಆಯೋಜಿಸಲಾಗಿತ್ತು. ಈ ಪಾರ್ಟಿಗೆ 80 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ಎಂಟ್ರಿ ಫೀಸ್ ಫಿಕ್ಸ್ ಮಾಡಲಾಗಿತ್ತು. ಇನ್​ಸ್ಟಾಗ್ರಾಂನಂತಹ ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಆಹ್ವಾನ ನೀಡಲಾಗಿತ್ತು. ಇಲ್ಲೇ ಈ ಪಾರ್ಟಿ ಆಯೋಜಕರು ಎಡವಟ್ಟು ಮಾಡ್ಕೊಂಡಿದ್ರು. ಯಾಕಂದ್ರೆ ಸೋಷಿಯಲ್ ಮೀಡಿಯಾದ ಮೂಲಕವೇ ಎನ್​ಸಿಬಿ ಅಧಿಕಾರಿಗಳಿಗೂ ಇದ್ರ ಮಾಹಿತಿ ಸಿಕ್ಕಿತ್ತು. ಹೀಗಾಗಿ ತಾವು ಕೂಡ ಆ ಫೀಜ್ ಕೊಟ್ಟು ಮಾರುವೇಷದಲ್ಲಿ ಹಡಗು ಏರಿದ್ರು ಎನ್​ಸಿಬಿ ಅಧಿಕಾರಿಗಳು. ನಂತರ ಪಾರ್ಟಿ ಶುರುವಾಗ್ತಿದ್ದಂತೆ ರೇಡ್ ನಡೆಸಿ, ನಶಾಲೋಕಕ್ಕೆ ಹಾರಲು ಹೊರಟಿದ್ದವರನ್ನು ಹೆಡೆಮುರಿ ಕಟ್ಟಿದ್ದಾರೆ.

ಅಂದಹಾಗೆ ಈ ಪಾರ್ಟಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಶಾರೂಕ್ ಖಾನ್ ಪುತ್ರನೇ ಆಗಿದ್ರು. ಇವರನ್ನು ಅರ್ಬಾಜ್ ಮರ್ಚೆಂಟ್ ಅನ್ನೋ ವ್ಯಕ್ತಿ ಪಾರ್ಟಿಗೆ ಆಹ್ವಾನ ನೀಡಿದ್ದ. ಪಾರ್ಟಿಯಲ್ಲಿದ್ದ ಹೆಚ್ಚಿನವರು ದೆಹಲಿ ಮೂಲದವರಾಗಿದ್ರು. ಅಲ್ಲಿಂದ ಮುಂಬೈಗೆ ವಿಮಾನದಲ್ಲಿ ಬಂದಿದ್ದ ನಶಾಪ್ರಿಯರು, ನಂತರ ಹಡಗು ಏರಿದ್ರು ಅಂತ ಗೊತ್ತಾಗಿದೆ.

1985ರ ಎನ್​ಡಿಪಿಎಸ್​ ಆಕ್ಟ್​​ನ ಸೆಕ್ಷನ್ 27, ಸೆಕ್ಷನ್ 35, ಸೆಕ್ಷನ್ 20 ಬಿ ಅಡಿಯಲ್ಲಿ ಕೇಸ್ ದಾಖಲಾಗಿದೆ. ಒಂದು ವೇಳೆ ಈ ಆರೋಪಗಳು ಸಾಬೀದಾದ್ರೆ 6 ತಿಂಗಳಿಂದ ಹಿಡಿದು 20 ವರ್ಷದವರೆಗೆ ಜೈಲು ಶಿಕ್ಷೆಯ ಜೊತೆಗೆ ಅಪಾರ ಪ್ರಮಾಣದ ದಂಡ ವಿಧಿಸಲು ಅವಕಾಶ ಇರುತ್ತೆ.

ಇವೆಲ್ಲದ್ರ ನಡುವೆ ಎನ್​ಸಿಬಿ ಅಧಿಕಾರಿಯೊಬ್ಬರು ಆರ್ಯನ್ ಖಾನ್ ಜೊತೆ ಸೆಲ್ಫಿ ತಗೊಂಡಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿತ್ತು. ಆದ್ರೆ ಈ ಬಗ್ಗೆ ಎನ್​ಸಿಬಿ ಪ್ರತಿಕ್ರಿಯಿಸಿದ್ದು, ಆ ಫೋಟೋದಲ್ಲಿ ಆರ್ಯನ್ ಖಾನ್ ಜೊತೆಗಿರೋ ವ್ಯಕ್ತಿ ನಮ್ಮ ಅಧಿಕಾರಿಯೂ ಅಲ್ಲ, ಸಿಬ್ಬಂದಿಯೂ ಅಲ್ಲ ಅಂತ ಸ್ಪಷ್ಟಪಡಿಸಿದೆ.

ಅಂದಹಾಗೆ ಶಾರುಕ್‌ ಖಾನ್‌ ಗೌರಿ ಖಾನ್‌ ಮೊದಲ ಮಗ ಆರ್ಯನ್‌ ಖಾನ್‌. ಲಂಡನ್‌ನ ಸೆವೆನ್‌ ಓಕ್ಸ್‌ ಹೈ ಸ್ಕೂಲ್‌ನಲ್ಲಿ ಪದವಿ ಶಿಕ್ಷಣವನ್ನ ಪಡೆದಿದ್ದಾರೆ. ನಂತರ 2020ರಲ್ಲಿ ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾದಲ್ಲಿ ಪದವಿ ಪಡ್ಕೊಂಡ್ರು. 2004ರಲ್ಲೇ ತಮ್ಮ ತಂದೆಯ ಜೊತೆ ಸೇರಿಕೊಂಡು ಡಬ್ಬಿಂಗ್ ಕೆಲಸ ಶುರು ಮಾಡಿದ್ರು. 2009ರಲ್ಲಿ ಲಯನ್ ಕಿಂಗ್​​ ಸಿನಿಮಾದ ಹಿಂದಿ ವರ್ಷನ್​ಗೂ ವಾಯ್ಸ್ ಕೊಟ್ಟಿದ್ರು. ಆರ್ಯನ್​​ ಚಿತ್ರರಂಗ ಪ್ರವೇಶದ ಬಗ್ಗೆ ಕೇಳಿದಾಗ.. ಇಲ್ಲ.. ನನ್ ಮಗ ಹೀರೋ ಆಗಿ ನಟಿಸಲ್ಲ. ಡೈರೆಕ್ಷನ್ ಕ್ಷೇತ್ರದಲ್ಲಿ ಇಂಟ್ರೆಸ್ಟ್ ಹೊಂದಿದಾನೆ ಅಂತ ಶಾರುಖ್ ಖಾನ್ ಹೇಳಿದ್ರು. ಅದ್ರ ನಡುವೆ ಹೀಗಾಗಿದೆ.

ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್​​, ಗುಜರಾತ್​ನ ಮುಂದ್ರಾ ಬಂದರಿನಲ್ಲಿ ಮಾದಕ ವಸ್ತು ಪತ್ತೆ ಪ್ರಕರಣವನ್ನು ಮರೆಮಾಚಲು ಹಡಗಿನಲ್ಲಿ ಪಾರ್ಟಿ ಮಾಡ್ತಿದ್ದ ಕೆಲವರನ್ನು ಅರೆಸ್ಟ್ ಮಾಡಲಾಗಿದೆ. ಬಂದರಿನಲ್ಲಿ ಮಾದಕ ವಸ್ತು ಪತ್ತೆಯಾದ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಅಂತ ಆಗ್ರಹಿಸಿದೆ. ಅಂದಹಾಗೆ ಕಳೆದ ತಿಂಗಳು ಗುಜರಾತ್​​ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂಪಾಯಿ ಮೊತ್ತದ 2,988 ಕೆಜಿ ಮಾದಕ ವಸ್ತು ಪತ್ತೆಯಾಗಿತ್ತು.

-masthmagaa.com

Contact Us for Advertisement

Leave a Reply